ಪದೇ ಪದೇ ವಾಂತಿ ಭೇದಿ ಪ್ರಕರಣಗಳು : ಹೆಚ್ಚಿದ ಆತಂಕ

KannadaprabhaNewsNetwork | Published : Jul 16, 2024 12:35 AM

ಸಾರಾಂಶ

ತಾಲೂಕಿನಲ್ಲಿ ಪದೇ ಪದೇ ವಾಂತಿ ಬೇಧಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈಗ ಕಾಕಲವಾರ ಗ್ರಾಮದಲ್ಲಿ ಕಲುಷಿತ ನೀರು ಕುಡಿದ 68ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ - ಬೇಧಿ ಕಾಣಿಸಿಕೊಂಡಿದೆ. ಕಳೆದ ವರ್ಷ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರಿನಿಂದ ಮೂವರು ಸಾವನ್ನಪ್ಪಿದ್ದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ತಾಲೂಕಿನಲ್ಲಿ ಪದೇ ಪದೇ ವಾಂತಿ ಬೇಧಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈಗ ಕಾಕಲವಾರ ಗ್ರಾಮದಲ್ಲಿ ಕಲುಷಿತ ನೀರು ಕುಡಿದ 68ಕ್ಕೂ ಹೆಚ್ಚು ಮಂದಿಯಲ್ಲಿ ವಾಂತಿ - ಬೇಧಿ ಕಾಣಿಸಿಕೊಂಡಿದೆ. ಕಳೆದ ವರ್ಷ ತಾಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರಿನಿಂದ ಮೂವರು ಸಾವನ್ನಪ್ಪಿದ್ದರು. ನಂತರ ಚಿನ್ನಾಕಾರ್, ದಂತಾಪುರ, ಹಿಮ್ಲಪುರ್, ಗಾಜರಕೋಟ್ ನಲ್ಲಿ ವಾಂತಿ ಬೇಧಿ ಪ್ರಕರಣಗಳು ದಾಖಲಾಗಿದ್ದವು. ಈಗ ಕಾಕಲವಾರ ಗ್ರಾಮದಲ್ಲೂ ವಾಂತಿ -ಬೇಧಿ ಪ್ರಕರಣಗಳು ಕಂಡುಬಂದಿವೆ. ಇಷ್ಟೆಲ್ಲ ಆದರೂ ಪ್ರಕರಣಗಳು ಹೆಚ್ಚಲು ನಿರ್ದಿಷ್ಟ ಕಾರಣಗಳೇನು ಎಂಬುದನ್ನು ತಿಳಿಯಲು ಅಧಿಕಾರಿಗಳು ವಿಫಲವಾಗಿದ್ದಾರೆ.*ತಾತ್ಕಾಲಿಕ ಚಿಕಿತ್ಸೆ ಕೇಂದ್ರ ಸ್ಥಾಪನೆ :

ಕಾಕಲವಾರ ಗ್ರಾಮದಲ್ಲಿ ಶನಿವಾರ ಸಂಜೆ 16 ಪ್ರಕರಣಗಳು ಉಲ್ಬಣವಾಗಿದ್ದು, ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಬ್ಬರು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 15 ಜನರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಇದರಲ್ಲಿ 11 ಜನ ಮಹಿಳೆಯರು, 6 ಜನ ಪುರುಷರು ಹಾಗೂ ಮೂರು ಮಕ್ಕಳು ದಾಖಲಾಗಿದ್ದಾರೆ.ಭಾನುವಾರದಂದು ತಾಲೂಕು ಆರೋಗ್ಯ ಕೇಂದ್ರದ ವತಿಯಿಂದ ಕಾಕಲವಾರ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸೆ ಶಿಬಿರ ಆಯೋಜಿಸಿರುವುದರಿಂದ 6 ಜನರು ಚಿಕಿತ್ಸೆ ಪಡೆದರು. ಸೋಮವಾರದವರೆಗೆ ಒಟ್ಟು 37 ಓಪಿಡಿ ಹಾಗೂ 5 ಜನ ವಾಂತಿ -ಭೇದಿ ಖಾಯಿಲೆಗೆ ಚಿಕಿತ್ಸೆ ಪಡೆದಿದ್ದಾರೆ.

*ಕಲುಷಿತ ನೀರು ಸರಬರಾಜು ಕಾರಣ

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸರಬರಾಜು ಪೈಪ್ ಲೈನ್ ಹೊಡೆದು ಹೋಗಿರುವ ಹಿನ್ನೆಲೆ ಚರಂಡಿ ನೀರು ಪೈಪ್ ಲೈನ್ ನಲ್ಲಿ ಸೇರಿರುವ ಕಾರಣ ವಾಂತಿ-ಬೇಧಿ ಪ್ರಕರಣಗಳು ಉಂಟಾಗಿದೆ. ಎಲ್ಲಾ ಗ್ರಾಮಗಳಿಗೂ ಸೇರಿ 7 ಬೋರ್ವೆಲ್ ಮೂಲಗಳಿವೆ. ಗ್ರಾಮಸ್ಥರಿಗೆ ಬೋರ್ವೆಲ್ ನೀರನ್ನೇ ಕುಡಿಯಲು ಸರಬರಾಜು ಮಾಡಲಾಗುತ್ತದೆ. 7 ರಲ್ಲಿ 6 ಬೋರ್ವೆಲ್ ಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ನೀರು ಪರೀಕ್ಷೆ ಪ್ರಯೋಗಲಾಯದ ವರದಿಗಳು ಬಂದಿದೆ. ವರದಿ ಬಂದ ಮೇಲೂ ಪಿಡಿಓ ಮತ್ತು ಸಿಬ್ಬಂದಿಗಳು ಅದೇ ನೀರು ಕುಡಿಯಲು ಸರಬರಾಜು ಮಾಡಿದ್ದು ಅಧಿಕಾರಿಗಳ ಬೇಜವಬ್ದಾರಿ ತೋರಿಸುತ್ತದೆ.* ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಭೇಟಿ :

ವಾಂತಿ -ಬೇಧಿ ಪ್ರಕರಣಗಳು ಕಂಡುಬಂದ ಕೂಡಲೇ ರಾತ್ರೋರಾತ್ರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದಾರೆ. ಭಾನುವಾರ ಬೆಳಿಗ್ಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ , ಕಾಕಲವಾರ ಗ್ರಾಮಕ್ಕೆ ಭೇಟಿ ನೀಡಿ ಚರಂಡಿಗಳ ಅವ್ಯವಸ್ಥೆ ಹಾಗೂ ನೀರು ಸರಬರಾಜು ಪೈಪ್ ಲೈನ್ ಒಡೆದು ಹೋಗಿರುವುದನ್ನು ಕಂಡು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ, ಗ್ರಾಮ ಸ್ವಚ್ಛತೆ ಹಾಗೂ ಜನರಿಗೆ ಬಿಸಿ ನೀರು ಕುಡಿಯುವಂತೆ ಸಲಹೆ ನೀಡಿದರು.ವಾಂತಿ-ಬೇಧಿ ಪ್ರಕರಣಗಳು ಕಂಡು ಬಂದ ಮೂಲ ಕಾರಣ ಮರೆಮಾಚಲು ಪಿಡಿಓ ಅವರನ್ನು ಅಮಾನತು ಮಾಡಿ ಗುಬ್ಬಿ ಮೇಲೆ ಬ್ರಹ್ಮಸ್ತ್ರ ಮಾಡಲಾಗಿದೆ ಎಂದು ಜನರು ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಆರೋಪಿಸಿದ್ದಾರೆ. ಗ್ರಾಮ ಮತ್ತು ಚರಂಡಿ ಸ್ವಚ್ಛತೆಗಾಗಿ ಹಾಗೂ ನೀರು ಸರಬರಾಜು ಮಾಡುವ ಪೈಪ್ ಲೈನ್ ದುರಸ್ತಿಗಾಗಿ ಗ್ರಾಮ ಸಭೆಯಲ್ಲಿ ಹಣ ಮಂಜೂರು ಅನುಮೋದನೆ ಪಡೆದು ಜಿಲ್ಲಾ ಪಂಚಾಯ್ತಿಗೆ ವರದಿ ಸಲ್ಲಿಸಲಾಗಿದೆ. ಕಳೆದ 6 ತಿಂಗಳಿಂದ ನಮ್ಮ ಬೇಡಿಕೆಗಳಿಗೆ ಚಾಲನೆ ಸಿಕ್ಕಿಲ್ಲ. ನರೇಗಾ ಹಣವನ್ನು ಚರಂಡಿ ಸ್ವಚ್ಛತೆ ದುರಸ್ತಿಗಾಗಿ ಬಳಕೆ ಮಾಡಬಾರದು ಎಂದು ಜಿಲ್ಲಾ ಪಂಚಾಯ್ತಿಯಿಂದ ಆದೇಶ ಹೊರಡಿಸಿತ್ತು. ಮಾರ್ಚ್ ಅಂತ್ಯದಲ್ಲಿ ಅನುಮೋದನೆಗಾಗಿ ತಿಳಿಸಿದರೂ ಸಮಯ ಜಾಸ್ತಿ ಕೊಟ್ಟಿಲ್ಲ. ಕಳೆದ 6 ತಿಂಗಳಿಂದ ಯಾವುದೇ ಕ್ರಿಯಾಯೋಜನೆಗೆ ಅನುದಾನ ಬಿಡುಗಡೆಗೊಳಿಸದಿದ್ದರೆ ಗ್ರಾಮ ನೈರ್ಮಲ್ಯ ಹೇಗೆ ಆಗುತ್ತದೆ. ಇದರಿಂದ ಗ್ರಾಮದಲ್ಲಿ ವಾಂತಿ -ಭೇದಿ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಮೂಲ ಕಾರಣಕರ್ತರು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳೇ ಆಗಿದ್ದಾರೆ. ಅವರು ಬಚಾವ್ ಆಗಲು ಪಿಡಿಓಗಳನ್ನು ಅಮಾನತು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.*ಎರಡು ಬಾರಿಯ ವಾಂತಿ-ಭೇದಿ ಪ್ರಕರಣದಲ್ಲಿ ಪಿಡಿಒ ಒಬ್ಬನೇ :

ಕಾಕಲವಾರ ಗ್ರಾಮ ಪಂಚಾಯ್ತಿ ಪಿಡಿಒ ಮಲ್ಲಾರೆಡ್ಡಿಯನ್ನು ವಾಂತಿ-ಬೇಧಿ ಪ್ರಕರಣದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಗರಿಮಾ ಪನ್ವಾರ ಅಮಾನತು ಮಾಡಿದ್ದಾರೆ. ಅವರು ಎರಡು ಬಾರಿ ವಾಂತಿ -ಬೇಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತಿಗೆ ಒಳಗಾಗಿದ್ದಾರೆ. ಕಳೆದ ಬಾರಿ ಗಾಜರಕೋಟ್ ಗ್ರಾಮದಲ್ಲಿ ವಾಂತಿ -ಬೇಧಿ ಪ್ರಕರಣಗಳು ಕಂಡು ಬಂದಾಗ ಮಲ್ಲಾರೆಡ್ಡಿ ಅವರೇ ಗ್ರಾಪಂ ಪಿಡಿಒ ಆಗಿ ಕರ್ತವ್ಯ ನಿರ್ವಹಿಸಿದ್ದರು.

Share this article