ಚುನಾವಣಾ ಆಯೋಗದ ಸೂಚನೆಯಂತೆ 20 ರಿಂದ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ -2025 ಶುರು

KannadaprabhaNewsNetwork | Updated : Aug 17 2024, 05:47 AM IST

ಸಾರಾಂಶ

ಚುನಾವಣಾ ಆಯೋಗದ ಸೂಚನೆಯಂತೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಆ.20ರಿಂದ ‘ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025’ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

 ಬೆಂಗಳೂರು :  ಚುನಾವಣಾ ಆಯೋಗದ ಸೂಚನೆಯಂತೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಆ.20ರಿಂದ ‘ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025’ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಪೂರ್ವ ಪರಿಷ್ಕರಣೆ ಚಟುವಟಿಕೆಗಳ ಸಮಯದಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ತಿದ್ದುಪಡಿಗಳು, ಹೆಸರು ನೋಂದಣಿ, ಮೃತ ಮತ್ತು ಸ್ಥಳಾಂತರಗೊಂಡ ಮತದಾರರ ಹೆಸರು ತೆಗೆದು ಹಾಕುವುದು ಮತ್ತು ಮುಂಬರುವ ಅರ್ಹತಾ ದಿನಾಂಕಗಳಂತೆ 18 ವರ್ಷ ತುಂಬುವ ಯುವ ಮತದಾರರ ಹೆಸರು ಸೇರ್ಪಡೆ ಕುರಿತು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ವಿಶೇಷ ಅಭಿಯಾನ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕರು ವಿಶೇಷ ಅಭಿಯಾನಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಹಾಗೂ ಅವಶ್ಯವಿರುವ ತಿದ್ದುಪಡಿ, ಸೇರ್ಪಡೆ ಹಾಗೂ ತೆಗೆದು ಹಾಕುವಿಕೆಗಳಿಗೆ ಅರ್ಜಿಗಳನ್ನು ಸಲ್ಲಿಸುವಂತೆ ಚುನಾವಣಾಧಿಕಾರಿಗಳು ಮತದಾರರಲ್ಲಿ ಮನವಿ ಮಾಡಿದ್ದಾರೆ. ಸಾರ್ವಜನಿಕರು ಅರ್ಜಿ ನಮೂನೆ 6 ಮತ್ತು 8 ಅನ್ನು ಸಲ್ಲಿಸುವಾಗ ಸ್ವಯಂ ಪ್ರೇರಿತವಾಗಿ ಆಧಾರ್ ಸಂಖ್ಯೆಗಳನ್ನು ಒದಗಿಸಬಹುದಾಗಿದೆ.

ಆ.20ರಿಂದ ಅ.18ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳಿಂದ ಮನೆ ಮನೆ ಭೇಟಿ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮತಗಟ್ಟೆಗಳ ತರ್ಕ ಬದ್ಧಗೊಳಿಸುವುದು, ಮರು ಹೊಂದಾಣಿಕೆ ಸೇರಿದಂತೆ ಮತದಾರರ ಪಟ್ಟಿ, ಮತದಾರರ ಗುರುತಿನ ಚೀಟಿಗಳಲ್ಲಿನ ಲೋಪದೋಷಗಳನ್ನು ತೆಗೆದುಹಾಕುವುದು. ಅಗತ್ಯವಿರುವ ಕಡೆ ಮತದಾರರ ಪಟ್ಟಿಯಲ್ಲಿನ ಗುಣಮಟ್ಟವಿಲ್ಲದ ಭಾವಚಿತ್ರಗಳನ್ನು ಬದಲಾಯಿಸಿ ಉತ್ತಮ ಗುಣಮಟ್ಟದ ಭಾವಚಿತ್ರಗಳನ್ನು ಖಾತ್ರಿ ಪಡಿಸುವುದು. ವಿಭಾಗ, ಭಾಗಗಳ ಮರುಹೊಂದಾಣಿಕೆ ಹಾಗೂ ಪ್ರಸ್ತಾಪಿತ ವಿಭಾಗ, ಭಾಗಗಳ ಮತಗಟ್ಟೆಗಳ ಸ್ಥಳವನ್ನು ಅಂತಿಮಗೊಳಿಸುವುದು ಮತ್ತು ಮತಗಟ್ಟೆಗಳ ಪಟ್ಟಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗುತ್ತದೆ.

ಅ.19ರಿಂದ ಅ.28ರವರೆಗೆ ನಮೂನೆ 1ರಿಂದ 8ರ ತಯಾರಿ ನಡೆದು ಅ.29ರಂದು ಸಮಗ್ರ ಕರಡು ಮತದಾರರ ಪಟ್ಟಿಯ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ತಮ್ಮ ಲೋಪದೋಷಗಳ ಕುರಿತಾಗಿ ಅ.29ರಿಂದ ನ.28 ರವರೆಗೆ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆಗಳ ವಿಲೇವಾರಿಯನ್ನು ಡಿ.24ರ ಒಳಗಡೆ ಮುಗಿಸಲಾಗುತ್ತದೆ. ಅಂತಿಮವಾಗಿ ಎಲ್ಲಾ ದತ್ತಾಂಶವನ್ನು ಕ್ರೋಢಿಕರಿಸಿ 2025ರ ಜನವರಿ 6ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಣೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article