ಡಿ. 27ರಿಂದ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ: ಡಾ. ಗಿರಿಧರ ಕಜೆ

KannadaprabhaNewsNetwork | Published : Nov 18, 2024 12:00 AM

ಸಾರಾಂಶ

ಈ ಸಮ್ಮೇಳನ ಹವ್ಯಕರಿಗೆ ಸೇರಿದ್ದಾದರೂ ಮೂರೂ ದಿನದ ಸಮಾರಂಭದಲ್ಲಿ ನಾಡಿನ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಮುಕ್ತವಾಗಿ ಸಂಘಟಿಸಲಾಗಿದೆ.

ಕುಮಟಾ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭೆಯ ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಡಿ. ೨೭ರಿಂದ ೨೯ರ ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಹವ್ಯಕ ಮಹಾಸಭೆ ೮೧ ವರ್ಷ ಪೂರೈಸಿದ ಹಿನ್ನೆಲೆ ಸಹಸ್ರಚಂದ್ರದರ್ಶನದ ಸಂಭ್ರಮೋತ್ಸವವಾಗಿ ಹವ್ಯಕ ಸಮ್ಮೇಳನಕ್ಕೆ ವಿಶೇಷ ಮೆರುಗಿನೊಂದಿಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂದು ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ತಿಳಿಸಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೧೯೪೩ರಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲೇ ನೋಂದಾಯಿತವಾದ ನಮ್ಮ ಹವ್ಯಕ ಮಹಾಸಭೆಯು ಈಗ ೩೦ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಸಂಖ್ಯಾಬಲದಲ್ಲಿ ತೀರಾ ಕಡಿಮೆ ಇದ್ದರೂ ತನ್ನ ಪರಂಪರೆ, ಸಂಸ್ಕೃತಿ, ಸಂಪ್ರದಾಯ, ಭಾಷೆ ಹಾಗೂ ಬೌದ್ಧಿಕ ಪ್ರಬುದ್ಧತೆಯಿಂದ ವಿಶ್ವದೆಲ್ಲೆಡೆ ವಿಶೇಷವಾಗಿ ಗುರುತಿಸಿಕೊಂಡಿರುವ ಹವ್ಯಕ ಸಮುದಾಯದ ಸಾಧನೆ ಮತ್ತು ಸವಾಲುಗಳಿಗೆ ಸಮ್ಮೇಳನ ವೇದಿಕೆಯಾಗಲಿದೆ.

ಈ ಸಮ್ಮೇಳನ ಹವ್ಯಕರಿಗೆ ಸೇರಿದ್ದಾದರೂ ಮೂರೂ ದಿನದ ಸಮಾರಂಭದಲ್ಲಿ ನಾಡಿನ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಮುಕ್ತವಾಗಿ ಸಂಘಟಿಸಲಾಗಿದೆ. ಎಲ್ಲರೂ ಸೇರಿ ಹವ್ಯಕ ಹಬ್ಬ ಆಚರಿಸುವುದು ಹಾಗೂ ಇದೊಂದು ನಾಡಿನಹಬ್ಬವಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಈ ಬಾರಿ ಸಮ್ಮೇಳನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.ಸ್ಪರ್ಧೆಗಳು ಮತ್ತು ಸಾಧಕರಿಗೆ ಪ್ರಶಸ್ತಿ:

ಮಕ್ಕಳಿಗಾಗಿ ಹವ್ಯಕ ಸಂಸ್ಕೃತಿಯ ಚಿತ್ರ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಹೂಕುಂಡ- ಇಕಬಾನ ಕಲಾಸ್ಪರ್ಧೆ, ಹವ್ಯಕ ಆಹಾರ ಸ್ಪರ್ಧೆ, ಹವ್ಯಕ ಸಂಪ್ರದಾಯ ಚಿತ್ರಕಲಾ ಸ್ಪರ್ಧೆ, ಕರಕುಶಲ ವಸ್ತು ಪ್ರದರ್ಶನ ಸ್ಪರ್ಧೆ, ಪಾರಂಪರಿಕ ವಸ್ತು ಪ್ರದರ್ಶನ ಸ್ಪರ್ಧೆಗಳು ಇರಲಿದೆ. ಸಾಧಕರಿಗೆ ಸಾಧಕರತ್ನ, ವೇದಮೂರ್ತಿಗಳಿಗೆ ವೇದರತ್ನ, ಶಿಕ್ಷಕರಿಗೆ ಶಿಕ್ಷಕರತ್ನ. ಕೃಷಿಕರಿಗೆ ಕೃಷಿರತ್ನ, ಸೈನಿಕರಿಗೆ ದೇಶರತ್ನ, ವಿದ್ಯಾರ್ಥಿಗಳಿಗೆ ವಿದ್ಯಾರತ್ನ, ಸಮಾಜಕ್ಕೆ ಸ್ಫೂರ್ತಿಯದವರಿಗೆ ಸ್ಫೂರ್ತಿ ರತ್ನ ಪ್ರಶಸ್ತಿಯಂತೆ ಪ್ರತಿವಿಭಾಗದಲ್ಲಿ ೮೧ ಜನರಂತೆ ಒಟ್ಟೂ ೫೬೭ ಜನರಿಗೆ ಪ್ರಶಸ್ತಿ ಸಹಿತ ಸನ್ಮಾನಿಸಲಾಗುವುದು ಎಂದರು.

ಕಾರ್ಯಕ್ರಮ ವೈವಿಧ್ಯಗಳು: ೮ ವಿಚಾರಗೋಷ್ಠಿಗಳು, ಸ್ಮರಣ ಸಂಚಿಕೆ- ಕೃತಿಗಳ ಲೋಕಾರ್ಪಣೆ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ೩೦೦ಕ್ಕೂ ಅಧಿಕ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ದಕ್ಷಿಣೋತ್ತರ ತಿಟ್ಟುಗಳ ಮೇರು ಕಲಾವಿದರ ಸಂಗಮದಲ್ಲಿ ಯಕ್ಷಗಾನ, ೧೦೮ ಸಾಂಸ್ಕೃತಿಕ ಕಾರ್ಯಕ್ರಮಗಳು, ನಿತ್ಯ ಹೋಮಹವನಾದಿಗಳು, ಭಗವದ್ಗೀತೆ ಪಠಣ, ಮಾತೆಯರಿಂದ ಭಕ್ತಿಭಜನೆ, ಸಾವಿರಾರು ಜನರಿಂದ ವಾಕಥಾನ್, ಅಹಿಚ್ಛತ್ರದಿಂದ ಜ್ಯೋತಿಯ ಆಗಮನ, ರಕ್ತದಾನ, ವಸ್ತುಪ್ರದರ್ಶನ, ೬೦೦೦ಕ್ಕೂ ಹೆಚ್ಚು ಹವ್ಯಕ ಪುಸ್ತಕ ಪ್ರದರ್ಶನ, ಪಾಕೋತ್ಸವದಲ್ಲಿ ಹವ್ಯಕ ಅಡುಗೆ- ತಿಂಡಿಗಳ ವೈವಿಧ್ಯ, ಬೈಕ್ ರ್‍ಯಾಲಿ, ಗಾಯತ್ರೀ ಥೀಮ್ ಪಾರ್ಕ್‌, ದೇಶೀ ಗೋಲೋಕ, ಯಕ್ಷಕಿರೀಟ ವೇಷಭೂಷಣ ಪ್ರದರ್ಶನ, ಛಾಯಾ ಚಿತ್ರ ಪ್ರದರ್ಶನ, ಯಾಗ ಮಂಡಲಗಳ ಪ್ರದರ್ಶನ, ೧೦೮ ವರ್ಷಗಳ ಪಂಚಾಂಗ ದರ್ಶನ ಮತ್ತು ಪೂಜಾ ವೈವಿಧ್ಯ, ಅಡಕೆ ಪ್ರಪಂಚ, ಕಬ್ಬಿನ ಆಲೆಮನೆ, ಗೊಂಬೆಗಳ ಆಟ, ಆನೆ- ಕುದುರೆ- ಒಂಟೆ ಸವಾರಿ, ಹವ್ಯಕ ನಾಟಕ, ಸಂಗೀತ ಸಂಗಮ, ನಾಟ್ಯೋತ್ಸವ, ವಾದ್ಯ ವೈಭವ, ಗಾನಾಮೃತ, ಜಾದೂ ಪ್ರದರ್ಶನ, ವಾಣಿಜ್ಯ ಮಳಿಗೆಗಳು ಮುಂತಾದವು ಇರಲಿದೆ ಎಂದರು.

ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಭಟ್, ಕೋಶಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿಗಳಾದ ಪ್ರಶಾಂತ ಭಟ್ ಯಲ್ಲಾಪುರ, ಆದಿತ್ಯ ಭಟ್ ಕಲಗಾರ, ಜಿಲ್ಲಾಸಮಿತಿಯ ನಿರ್ದೇಶಕರಾದ ಆರ್. ಜಿ. ಹೆಗಡೆ, ಅರುಣ ಹೆಗಡೆ ಇತರರು ಇದ್ದರು.

Share this article