ಕನ್ನಡಪ್ರಭ ವಾರ್ತೆ ಬೆಳಗಾವಿ
ತ್ರಿವೇಣಿ ಸಂಗಮ ಪ್ರಯಾಗರಾಜ ಕ್ಷೇತ್ರದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ, ಜಂಗಮವಾಡಿಮಠದ ಉದ್ಘಾಟನಾ ನಿಮಿತ್ತವಾಗಿ ಕಾಶಿ ಜಗದ್ಗುರುಗಳ ಮಂಡಲ ಮಹಾಪೂಜೆ ಆಶೀರ್ವಚನ, ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವವು ಜನವರಿ 14 ರಿಂದ ಫೆಬ್ರವರಿ 26 ರವರೆಗೆ ಅತ್ಯಂತ ವೈಭವದಿಂದ ನೆರವೇರಲಿದೆ.ಈ ಕುಂಭೋತ್ಸವಕ್ಕಾಗಿಯೇ ಪ್ರಯಾಗರಾಜ ಕ್ಷೇತ್ರದ ದಶಾಶ್ವಮೇಧ ಘಾಟದಲ್ಲಿರುವ ಕಾಶಿ ಪೀಠದ ಶಾಖಾ ಜಂಗಮವಾಡಿ ಮಠವು ಈಗ ನವ ನಿರ್ಮಾಣಗೊಂಡಿದೆ. ಅದರ ಉದ್ಘಾಟನೆಯ ನಿಮಿತ್ತವಾಗಿ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ 42 ದಿನಗಳ ತಪೋನುಷ್ಠಾನ, ಶ್ರೀಠದಲ್ಲಿಯ ಪ್ರಯಾಗರಾಜೇಶ್ವರ ಲಿಂಗಕ್ಕೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಮತ್ತು ಆಶೀರ್ವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 6 ರಿಂದ 8 ಗಂಗಾನದಿಯಲ್ಲಿ ಭಕ್ತರೊಂದಿಗೆ ಮಂಗಳ ಸ್ನಾನ, ಬೆಳಗ್ಗೆ 8 ರಿಂದ 10 ಗಂಟೆಗೆ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಪ್ರಯಾಗರಾಜೇಶ್ವರನಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ, ಸಂಜೆ 3 ರಿಂದ 4 ಭಜನೆ, ಸಂಜೆ 4 ರಿಂದ 6 ಗಂಟೆಗೆ ಧರ್ಮಸಭೆ ಆಶೀರ್ವಚನ ನಡೆಯಲಿದೆ.ಫೆ.4 ರಂದು ಕರ್ನಾಟಕದ ಜಾನಪದಗಳ ವಿವಿಧ ವಾದ್ಯ ವೈಭವಗಳಿಂದ ಪಂಚಪೀಠಾಧೀಶ್ವರರ ಅಡ್ಡ ಪಲ್ಲಕ್ಕಿ ಮಹೋತ್ಸವ ಪ್ರಥಮ ಬಾರಿಗೆ ಪ್ರಯಾಗರಾಜದಲ್ಲಿ ನಡೆಯಲಿದೆ. ಉತ್ಸವದ ಸೇವೆಯನ್ನು ಶಾಖಾಪುರ ತಪೋವನ ಮಠದ ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳವರು ತಮ್ಮ ಭಕ್ತರಿಂದೊಡಗೂಡಿ ಮಾಡಲಿದ್ದಾರೆ.42 ದಿನಗಳವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲ ಪ್ರಾಂತಗಳ ಅನೇಕ ಶಿವಾಚಾರ್ಯರು ಪಾಲ್ಗೊಂಡು ತಮ್ಮ ಧರ್ಮ ಸಂದೇಶವನ್ನು ಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಬರುವ ಭಕ್ತಾದಿಗಳಿಗೆ ಪ್ರಯಾಗರಾಜ ಜಂಗಮವಾಡಿ ಮಠದಲ್ಲಿ ನಿವಾಸ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಗಿದೆ. 42 ದಿನಗಳವರೆಗೆ ನಡೆಯುವ ಈ ಕುಂಭ ಪರ್ವಕಾಲದಲ್ಲಿ ಅನುಕೂಲವಾದ ದಿನದಂದು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಂಗಳ ಸ್ನಾನವನ್ನು ಮಾಡಿ ಜಗದ್ಗುರುಗಳ ಪೂಜೆಯಲ್ಲಿ ಎಲ್ಲ ಪ್ರಾಂತದ ಭಕ್ತರು ಪಾಲ್ಗೊಂಡು ತಮ್ಮ ಪಾಲಿನ ಸೇವೆಯನ್ನು ಸಮರ್ಪಿಸಿ ಪುನಿತರಾಗಬೇಕೆಂದು ಜಂಗಮವಾಡಿ ಶ್ರೀಮಠದ ವ್ಯವಸ್ಥಾಪಕ ನಲಿನೀ ಚಿರಮೆ ಮನವಿ ಮಾಡಿದ್ದಾರೆ.ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆಗೆ ₹10,000, ಅನ್ನದಾನ ₹15,000 ನೀಡುವ ಮೂಲಕ ಸೇವೆಯಲ್ಲಿ ಭಾಗವಹಿಸಬಹುದು. ನೂತನವಾಗಿ ನಿರ್ಮಾಣಗೊಂಡ ಭಕ್ತ ನಿವಾಸದ ಒಂದು ಕೊಠಡಿಗೆ ದಾನ ಮಾಡಲಪೇಕ್ಷಿಸುವವರು ₹5,00,000 ಗಳನ್ನು ಸಮರ್ಪಿಸಬಹುದು. ಎಲ್ಲ ದೇಣಿಗೆಗಳಿಗೆ 80ಜಿ ಸೌಲಭ್ಯವೂ ದೊರೆಯುವುದು. ಪ್ರಯಾಗರಾಜ ಕ್ಷೇತ್ರಕ್ಕೆ ಬರುವವರು ಎಲ್ಲ ವ್ಯವಸ್ಥೆಗಳಿಗಾಗಿ ಆರ್.ಕೆ.ಸ್ವಾಮಿ ಮೊ.9422321166, ಶಿವಾನಂದ ಸ್ವಾಮಿ ಮೊ.9598501008, ಮಂಜುನಾಥ ಪಾಟೀಲ ಮೊ.9353886065 ಸಂಪರ್ಕಿಸಬಹುದು.