ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಕಳೆದ ಲೋಕಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿರುವ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ. ಜನರು ಕಾಂಗ್ರೆಸ್ ಪಕ್ಷದ ಪರವಾಗಿಯೇ ಇದ್ದಾರೆ. ಮುಂದಿನ ದಿನಗಳಲ್ಲಿ ತಿಂಗಳಿಗೊಮ್ಮೆ ಬೂತ್‌ಮಟ್ಟದ ಸಭೆ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಹೇಳಿದರು.ಹಳೇ ಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸಂಜೆ ನಡೆದ ಕಾಂಗ್ರೆಸ್ ಪಕ್ಷದ ಆತ್ಮಾವಲೋಕನಾ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕ್ಷೇತ್ರದ ಜನರು ಸಹ ಶಾಸಕರ ಬೆನ್ನೆಲುಬಾಗಿದ್ದಾರೆ. ಜನಪರ ಕಾಳಜಿಯುಳ್ಳ ಶಾಸಕ ಟಿ.ಡಿ.ರಾಜೇಗೌಡ ಅವರ ಕೈ ಬಲಪಡಿಸುವುದಕ್ಕೆ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ಪಣತೊಟ್ಟಿದ್ದಾರೆ ಎಂದರು.
ಸಿಎಂ ಹಾಗೂ ಡಿಸಿಎಂ ಇಬ್ಬರೂ ಕೆಪಿಸಿಸಿ ಸಭೆ ಮೂಲಕ ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿ, ಕಾರ್ಯಕರ್ತರ ಸಭೆ ನಡೆಸಿರುವುದು ನಿಜಕ್ಕೂ ಶ್ಲಾಘನೀಯ. ರಾಜ್ಯ ಕಾಂಗ್ರೆಸ್ ಮುಖಂಡರು ನಿರಂತರ ಕಾರ್ಯಕರ್ತರು ಹಾಗೂ ಜನರೊಂದಿಗೆ ಬೆರೆಯಲು ಜನಸಂಪರ್ಕ ಅಭಿಯಾನ ರೀತಿಯಲ್ಲಿ ಸಂಘಟಿಸುತ್ತಿದ್ದಾರೆ ಎಂದರು.ರಾಷ್ಟ್ರಮಟ್ಟದಲ್ಲಿ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಎಲ್ಲ ಮುಖಂಡರು ರಾಹುಲ್ ಗಾಂಧಿ ಅವರನ್ನು ವಿಪಕ್ಷ ನಾಯಕನ್ನಾಗಿ ಮಾಡಿ ಉತ್ತಮ ನಿರ್ಣಯ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ತಲ್ಲಣ ಶುರುವಾಗಿದೆ. ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವ, ಅನ್ಯಾಯದ ವಿರುದ್ಧ ಹೋರಾಟ ಮಾಡುವ ಸಾಮರ್ಥ್ಯ ರಾಹುಲ್ ಗಾಂಧಿ ಅವರಿಗಿದೆ. ಬಿಜೆಪಿ ಸರ್ಕಾರ ನೀಟ್ ಪರೀಕ್ಷೆಯಲ್ಲಿ ಭಾರೀ ಅವ್ಯವಹಾರ ಮಾಡಿ ಲಕ್ಷಾಂತರ ಯುವಕರ ಭವಿಷ್ಯವನ್ನೇ ಹಾಳುಗೆಡವಲು ಹೊರಟಿದೆ ಎಂದು ತಿಳಿಸಿದರು.
ಜನರಿಗೆ ಕಾಂಗ್ರೆಸ್ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ. ಇಂದು ರಾಜ್ಯದಲ್ಲಿ ಜನರು ಪಕ್ಷಕ್ಕೆ ಅಭೂತಪೂರ್ವವಾದ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಪ್ರತಿ ತಿಂಗಳು ಸಭೆಗಳನ್ನು ಹಾಗೂ ಗ್ರಾ.ಪಂ. ಮಟ್ಟದಲ್ಲಿ ಪ್ರತಿ 3 ತಿಂಗಳಿಗೊಂದರಂತೆ ಸಭೆಗಳನ್ನು ನಡೆಸಿ ಕಾರ್ಯಕರ್ತರ ಹಾಗೂ ಜನರ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್ ನಟರಾಜ್ ಮಾತನಾಡಿ, ಮುಂದಿನ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯ ಗೆಲುವೇ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ. ಪಕ್ಷದ ಕಾರ್ಯಕರ್ತರನ್ನು ಸಂಘಟನೆ ಮಾಡಿ ಎಲ್ಲ ಕಾರ್ಯಕರ್ತರಿಗೂ ಧೈರ್ಯದ ಜೊತೆಯಲ್ಲಿ ಆತ್ಮಸ್ಥೈರ್ಯ ತುಂಬಿದ್ದೇವೆ ಎಂದರು.
ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಮಾತನಾಡಿ, ರಾಹುಲ್ ಗಾಂಧಿ ಅವರು ವಿಪಕ್ಷ ನಾಯಕರಾದ ನಂತರ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. 10 ವರ್ಷಗಳ ಮೋದಿ ಆಡಳಿತದಲ್ಲಿ ದೇಶದ ಬಡವರಿಗೆ, ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ಯಾವ ರೀತಿಯಲ್ಲೂ ನ್ಯಾಯ ದೊರಕಿಲ್ಲ. ಜನಸಾಮಾನ್ಯರಿಗೆ ಯಾವುದೇ ಪ್ರಯೋಜನಗಳೂ ಆಗಿಲ್ಲ. ಬರೀ ಅನ್ಯಾಯವೇ ಆಗಿದೆ. ಮೋದೀಜಿ ಅವರನ್ನು ದೇವಮಾನವ ಎಂದು ಬಿಂಬಿಸಲಾಗುತ್ತಿದೆ. ಆದರೆ, ಕಾಂಗ್ರೆಸ್ ಅದನ್ನು ಸುಳ್ಳು ಎಂದು ಸಾಬೀತುಪಡಿಸುತ್ತಿದೆ. ಕಾಂಗ್ರೆಸ್ ಎಂದಿಗೂ ಸಧೃಢವಾಗಿರುತ್ತದೆ. ಮುಂದೆ ಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.ಈ ಸಂದರ್ಭದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಅವರನ್ನು ಅಭಿನಂದಿಸಲಾಯಿತು.
ಕಾಂಗ್ರೆಸ್ ನಗರ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಕಾಂಗ್ರೆಸ್ ಮುಖಂಡರಾದ ಈಚಿಕೆರೆ ಸುಂದರೇಶ್, ಸುನೀಲ್‌ಕುಮಾರ್, ಎಸ್.ಡಿ. ರಾಜೇಂದ್ರ, ದೇವಂತ್, ಎಚ್.ಎಂ. ಮನು, ಸಾಜು, ಬಿ.ಎಸ್. ಸುಬ್ರಮಣ್ಯ, ಬಿನು, ದೇವಂತ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.ಮುಂದಿನ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಹಾಗೂ ಕಾರ್ಯಕರ್ತರು ಅತ್ಯುತ್ಸಾಹದಿಂದ ಸಜ್ಜಾಗಬೇಕು. ಮುಂದಿನ ಎಲ್ಲ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲುವ ಆಶಾ ಭಾವನೆಗಳನ್ನು ಹೊಂದಿದ್ದೇವೆ
ಡಾ. ಕೆ.ಪಿ. ಅಂಶುಮಂತ್, ಜಿಲ್ಲಾಧ್ಯಕ್ಷ, ಕಾಂಗ್ರೆಸ್