ಅನುದಾನಿತ ಶಾಲಾ-ಕಾಲೇಜು ನೌಕರರ ಬೇಡಿಕೆ ಈಡೇರಿಸಲು ಮನವಿ

KannadaprabhaNewsNetwork | Published : Jul 7, 2024 1:21 AM

ಸಾರಾಂಶ

ಅನುದಾನಿತ ಶಾಲಾ-ಕಾಲೇಜುಗಳ ಸಿಬ್ಬಂದಿಗೆ ರಾಜ್ಯ ಸರ್ಕಾರ ನೀಡಿದ ಭರವಸೆ ಈಡೇರಿಸುವಂತೆ ಒತ್ತಾಯಿಸಿ, ಪಿಂಚಣಿ ವಂಚಿತ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ಯಲ್ಲಾಪುರದಲ್ಲಿ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಯಲ್ಲಾಪುರ: ಅನುದಾನಿತ ಶಾಲಾ-ಕಾಲೇಜುಗಳ ಸಿಬ್ಬಂದಿಗೆ ರಾಜ್ಯ ಸರ್ಕಾರ ನೀಡಿದ ಭರವಸೆ ಈಡೇರಿಸುವಂತೆ ಒತ್ತಾಯಿಸಿ, ಪಿಂಚಣಿ ವಂಚಿತ ನೌಕರರ ಸಂಘದ ಪದಾಧಿಕಾರಿಗಳು ಶನಿವಾರ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದ ಅನುದಾನಿತ ಶಾಲೆ ಕಾಲೇಜುಗಳಲ್ಲಿ ೨೦೦೬ರ ಪೂರ್ವ ಮತ್ತು ನಂತರದಲ್ಲಿ ನೇಮಕಾತಿ ಹೊಂದಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ನೌಕರರು ಪಿಂಚಣಿ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಸಮಾರು ೩ ಸಾವಿರ ನೌಕರರು ನಿವೃತ್ತರಾಗಿ ಸರ್ಕಾರದಿಂದ ಬಿಡಿಗಾಸಿನ ಪರಿಹಾರವಿಲ್ಲದೇ ಅತ್ಯಂತ ಕಷ್ಟದ ಬದುಕು ಸಾಗಿಸುತ್ತಿದ್ದಾರೆ. ನಾನಾ ಕಾರಣಗಳಿಂದ ಅಕಾಲಿಕವಾಗಿ ನಿಧನರಾದ ಶಿಕ್ಷಕರ ಮತ್ತು ನೌಕರರ ಅವಲಂಬಿತ ಕುಟುಂಬ ವರ್ಗದವರು ಬೀದಿ ಪಾಲಾಗಿದ್ದಾರೆ ಎಂದು ಹೇಳಿದ್ದಾರೆ.

ಪಿಂಚಣಿ ಬೇಡಿಕೆ, ನಿಶ್ಚಿತ ಪಿಂಚಣಿ ಅನುಷ್ಠಾನ ಮತ್ತು ಅನುದಾನಿತ ನೌಕರರ ಸೇವಾ ನಿಯಂತ್ರಣ ಕಾಯಿದೆ ೨೦೧೪ ರದ್ದುಗೊಳಿಸಲು ಆಗ್ರಹಿಸಿ ಸಂಘಟನೆಯಿಂದ ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಕಳೆದ ವರ್ಷ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ೧೪೧ ದಿನಗಳ ಐತಿಹಾಸಿಕ ಹೋರಾಟ ಮಾಡಲಾಗಿತ್ತು. ನಿವೃತ್ತಿ ಹೊಂದಿದ ಕೆಲವು ಶಿಕ್ಷಕರು ಹೋರಾಟದ ಸಮಯದಲ್ಲಿ ತಮ್ಮ ಜೀವಗಳನ್ನು ಕೂಡ ಕಳೆದುಕೊಂಡಿದ್ದಾರೆ. ಇಷ್ಟಾದರೂ ಯಾವ ಸರ್ಕಾರವೂ ಅನುದಾನಿತ ನೌಕರರ ಅಳಲು ಆಲಿಸುವ ಕೆಲಸ ಮಾಡಿಲ್ಲ. ಇದಲ್ಲದೆ ಅನುದಾನಿತ ಶಾಲೆ ಕಾಲೇಜುಗಳ ಸಾವಿರಾರು ನೌಕರರು ಈ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆಸಲಾದ ಹೋರಾಟದ ಸಂದರ್ಭದಲ್ಲಿ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಬಾದಾಮಿ ತಾಲೂಕಿನ ಗುಳೇದಗುಡ್ಡದ ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೇಮಠ ಅವರ ಮನೆಗೆ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ತಾವೇ ತೆರಳಿ ಆ ಕುಟುಂಬಕ್ಕೆ ವೈಯುಕ್ತಿಕ ₹೨ ಲಕ್ಷ ಪರಿಹಾರ ನೀಡಿದ್ದಲ್ಲದೇ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅನುದಾನರಹಿತ ಅವಧಿಯನ್ನು ಪರಿಗಣಿಸಿ, ಪಿಂಚಣಿ ಸೌಲಭ್ಯ ನೀಡುವ ಭರವಸೆಯನ್ನೂ ನೀಡಿದ್ದರು.

ಈಗ ಅವರದೆ ಪಕ್ಷ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ನಮ್ಮ ಬೇಡಿಕೆ ಈಡೇರಿಸಲು ಮುಂದಾಗದಿರುವುದನ್ನು ಖಂಡಿಸಿ, ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ನೀಡಲಾದ ಮನವಿಯಲ್ಲಿ ಎಚ್ಚರಿಕೆ ಗಡುವು ನೀಡಲಾಗಿದೆ.

ಮನವಿಯನ್ನು ಸ್ವೀಕರಿಸಿದ ತಹಸೀಲ್ದಾರ್ ಅಶೋಕ ಭಟ್ಟ ಸರ್ಕಾರಕ್ಕೆ ರವಾನಿಸುವ ಭರವಸೆ ನೀಡಿದರು.

ಪಿಂಚಣಿ ವಂಚಿತ ನೌಕರರ ಸಂಘದ ಜಗದೀಶ ಭಟ್ಟ, ಎಂ. ರಾಜಶೇಖರ, ನಾಗಭೂಷಣ ಹೆಗಡೆ, ಸದಾನಂದ ನಾಯಕ್, ಚಂದ್ರಶೇಖರ ಎಸ್.ಸಿ., ಮುಕ್ತಾ ಶಂಕರ, ಖೈರುನ್ ಶೇಖ, ಪ್ರೇಮಾ ಗಾಂವ್ಕರ, ಮಹೇಶ ನಾಯ್ಕ, ಶ್ಯಾಮಲಾ ಕೆರೆಗದ್ದೆ, ಪ್ರಸನ್ನ ಹೆಗಡೆ, ಮಮ್ತಾಜ್ ಶೇಖ, ನವೀನಾ ಗುನಗಾ, ಪ್ರದೀಪ ನಾಯ್ಕ, ನೆಲ್ಸನ್ ಗೊನ್ಸಾಲ್ವೀಸ್ ಮುಂತಾದ ಶಿಕ್ಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Share this article