ಟೌನ್‌ಶಿಪ್ ಭೂಸ್ವಾಧೀನಕ್ಕಾಗಿ ಹಕ್ಕೊತ್ತಾಯ ಈಡೇರಿಸಿ : ಭೂ ಸಂತ್ರಸ್ತ ರೈತರ ಹಿತ ರಕ್ಷಣಾ ಸಮಿತಿ

KannadaprabhaNewsNetwork | Updated : Mar 30 2025, 09:53 AM IST

ಸಾರಾಂಶ

  ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಟೌನ್‌ಶಿಪ್‌ಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳುತ್ತಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಎಂದು ಭೂ ಸಂತ್ರಸ್ತ ರೈತರ ಹಿತ ರಕ್ಷಣಾ ಸಮಿತಿ ಒತ್ತಾಯಿಸಿದೆ.

ರಾಮನಗರ: ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೂಲಕ ಟೌನ್‌ಶಿಪ್‌ಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳುತ್ತಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಇದನ್ನು ಮೀರಿ ಭೂ ಸ್ವಾಧೀನ ಪಡಿಸಿಕೊಂಡಲ್ಲಿ ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಎಂದು ಭೂ ಸಂತ್ರಸ್ತ ರೈತರ ಹಿತ ರಕ್ಷಣಾ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಭೂ ಸಂತ್ರಸ್ತ ರೈತರ ಹಿತ ರಕ್ಷಣಾ ಸಮಿತಿ ಮುಖಂಡ ಎಚ್.ಎಸ್.ಯೋಗಾನಂದ ಮಾತನಾಡಿ, ಟೌನ್‌ಶಿಪ್ ವಿಚಾರದಲ್ಲಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ

ಭೂ ಮಾಲೀಕರು ಮತ್ತು ರೈತರು ಗೊಂದಲದಲ್ಲಿ ಮುಳುಗಿದ್ದಾರೆ. ಹೀಗಿರುವಾಗಲೇ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. ಅಭಿಪ್ರಾಯ ಸಂಗ್ರಹಿಸಿ, ರೈತರ ಹಕ್ಕೊತ್ತಾಯಗಳಿಗೆ ಪ್ರಾಧಿಕಾರದ ಅಧಿಕಾರಿಗಳು ಲಿಖಿತವಾಗಿ ಉತ್ತರ ನೀಡಿ ಮುಂದುವರಿಯಬೇಕು ಎಂದು ಆಗ್ರಹಿಸಿದರು.

ಸಮಿತಿ ಮುಖಂಡರಾದ ಗ್ರಾಪಂ ಮಾಜಿ ಸದಸ್ಯ ಶಂಕರರೆಡ್ಡಿ ಮಾತನಾಡಿ, 2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಟೌನ್‌ಶಿಪ್ ಯೋಜನೆ ಜಾರಿಗೆ ತಂದರು. ಆಗ 10 ಸಾವಿರ ಎಕರೆ ಪ್ರದೇಶವನ್ನು ರೆಡ್ ಜೋನ್ ಮಾಡಿ ಹೋದರು. ಅಲ್ಲಿಂದ ಇಲ್ಲಿವರೆಗೂ ರೈತರಿಗೆ ಮುಕ್ತಿ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈಗಿನ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ಎಲ್ಲೋ ಕುಳಿತ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ವಿಪಕ್ಷಗಳ ನಾಯಕರು ರೈತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. 40 ಹಳ್ಳಿಗಳನ್ನು ಹೇಗೆಲ್ಲ ಅಭಿವೃದ್ಧಿ ಮಾಡುತ್ತೀರಾ ಎಂಬುದನ್ನು ಯಾರೂ ಹೇಳುತ್ತಿಲ್ಲ. ಮತ್ತೊಂದೆಡೆ ವಿಪಕ್ಷದವರು ಹೋರಾಟ ಮಾಡುವುದಾಗಿ ಹೇಳುತ್ತಿದ್ದಾರೆ ಎಂದರು.

ಟೌನ್ ಶಿಪ್ ವಿಚಾರವಾಗಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಏನನ್ನು ಮಾತನಾಡದೆ ಮೌನವಾಗಿದ್ದಾರೆ. ರಾಜ್ಯ ಸರ್ಕಾರವಾಗಲಿ ಅಥವಾ ಪ್ರಾಧಿಕಾರದವರಾಗಲಿ ಇಲ್ಲಿವರೆಗೆ ರೈತರ ಸಭೆ ನಡೆಸಿಲ್ಲ. ನೈಸ್ ರಸ್ತೆ ನಿರ್ಮಾಣದಿಂದ ರೈತರು ಅನುಭವಿಸಿದ ಕಷ್ಟಗಳನ್ನು ನೋಡಿದ್ದೇವೆ. ಅದೇ ಪರಿಸ್ಥಿತಿ ಇಲ್ಲಿನ ರೈತರಿಗೂ ಬರುವ ಆತಂಕವಿದೆ ಎಂದು ಶಂಕರ್ ರೆಡ್ಡಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಿಬ್ಬಣ್ಣ, ನರಸಿಂಹರಾಜು, ಕೃಷ್ಣಮೂರ್ತಿ, ಕೃಷ್ಣಪ್ಪ, ಮಂಜುನಾಥ್, ನರಸಿಂಹಯ್ಯ, ಅಶ್ವತ್ಥ್, ರಾಮಣ್ಣ, ಗುರುಮೂರ್ತಿ, ಮಂಜುನಾಥ್, ಪುಟ್ಟಬಸವಯ್ಯ, ಹರೀಶ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. 

ಹಕ್ಕೊತ್ತಾಯಗಳು ಏನೇನು?ಹಾಲಿ ಇರುವ ಗ್ರಾಮಗಳ ಸ್ಥಳಾಂತರ ಮಾಡಬಾರದು. ಹಾಲಿ ಇರುವ ಗ್ರಾಮದ ಪರಿಮಿತಿಯಿಂದ 300 ಮೀಟರ್ ಬಿಟ್ಟು ಸ್ವಾಧೀನ ಪಡಿಸುವುದು. ಮೂಲ ಸೌಕರ್ಯಗಳಾದ ಸಾರ್ವಜನಿಕ ಶಾಲೆ, ಕ್ರೀಡಾಂಗಣ, ಸಮುದಾಯ ಭವನ ಹಾಗೂ ದೇವಾಲಯಗಳ ಅಭಿವೃದ್ಧಿ ಪಡಿಸುವುದು. ಸ್ಮಶಾನಗಳನ್ನು ಅಭಿವೃದ್ಧಿಗೊಳಿಸಿ ಯಥಾಸ್ಥಿತಿ ಕಾಪಾಡಬೇಕು.ರೈತರ ಪುನರ್ ವಸತಿಗೆ ವರ್ಷಕ್ಕೆ ಕನಿಷ್ಟ 2 ಲಕ್ಷ ನೀಡಬೇಕು. ನಿರಾಶ್ರಿತರಾದವರಿಗೆ 20 - 30 ನಿವೇಶನವನ್ನು ಮೊದಲೇ ಮಂಜೂರು ಮಾಡುವುದು. 

ಬೆಳೆ ಮತ್ತು ಫಸಲುಗಳಿಗೆ ವೈಜ್ಞಾನಿಕ ವರದಿಯಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿ ಪಡಿಸಿರುವ ಹಣಕ್ಕಿಂತ ದುಪ್ಪಟ್ಟು ನೀಡಬೇಕು. ಬೈರಮಂಗಲ ಜಲಾಶಯವನ್ನು ಶುದ್ಧೀಕರಣ ಮಾಡಬೇಕು. ಗ್ರಾಮದ ಸಣ್ಣ ಮತ್ತು ದೊಡ್ಡ ಕೆರೆಗಳನ್ನು ಅಭಿವೃದ್ಧಿ ಪಡಿಸಿ ಯಥಾಸ್ಥಿತಿ ಕಾಪಾಡುವುದು. ರಸ್ತೆ ಸಂಪರ್ಕ ನೈರ್ಮಲ್ಯ ಮತ್ತು ಒಳಚರಂಡಿ, ಕುಡಿಯುವ ನೀರು, ಅಂಗನವಾಡಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು , ವಿದ್ಯುತ್ಚಕ್ತಿ ಸೌಲಭ್ಯವನ್ನು ಪ್ರಾಧಿಕಾರದಿಂದಲೇ ಒದಗಿಸುವುದು. ಹೈನುಗಾರಿಕೆಗಾಗಿ ನೂರು ಎಕರೆ ಹುಲ್ಲುಗಾವಲು ಹುಲ್ಲು ಬನ್ನಿ ಮಿಸಲು ಇಡಬೇಕು. ಜಮೀನು ಕಳೆದುಕೊಂಡ ರೈತರ ಹಾಗೂ ನಿರಾಶ್ರಿತರ ಮಕ್ಕಳಿಗೆ ಕಾಯಂ ಉದ್ಯೋಗವನ್ನು ಕೈಗಾರಿಕಾ ಪ್ರದೇಶವಾದ ಬಿಡದಿ ಮತ್ತು ಹಾರೋಹಳ್ಳಿ ಕಾರ್ಖಾನೆಗಳಲ್ಲಿ ನೀಡಬೇಕು. 

ಒಂದು ಎಕರೆ ಜಮೀನಿಗೆ ಪರಿಹಾರವಾಗಿ 4 - 5 ಕೋಟಿ ರು.ಗಳನ್ನು ನಿಗದಿ ಪಡಿಸಬೇಕು. ಭೂ ಸ್ವಾಧೀನವಾದ ಜಮೀನಿಗೆ ಶೇ. 50-50 ಅನುಪಾತದಲ್ಲಿ ಭೂಮಿ ನೀಡಬೇಕು. ಬ್ಯಾಂಕ್ ಅಥವಾ ಸಹಕಾರ ಸಂಘ ಸಂಸ್ಥೆಗಳಿಂದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವುದು ಅಥವಾ ಪ್ರಾಧಿಕಾರವೇ ಭರಿಸುವುದು. ಪರಿಹಾರ ನೀಡುವ ಜಮೀನು ಅಥವಾ ನಿವೇಶನದ ನೋಂದಣಿ ಶುಲ್ಕವನ್ನು ಪ್ರಾಧಿಕಾರವೇ ಭರಿಸಬೇಕು.

-ಯೋಗಾನಂದ, ಭೂಸಂತ್ರಸ್ತ ರೈತರ ಹಿತ ರಕ್ಷಣಾ ಸಮಿತಿ ಮುಖಂಡ 

Share this article