ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಾನವನ ಹಸ್ತಕ್ಷೇಪ ಕಡಿಮೆ ಮಾಡಿ, ಸಂಪೂರ್ಣ ವಾತಾವರಣವನ್ನು ಆಟೊಮೇಷನ್ ಮಾಡುವಂತಹ ಶಕ್ತಿ ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನಕ್ಕಿದೆ ಎಂದು ಸಂಶೋಧಕ, ಮೈಸೂರು ವಿವಿ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ಅಭಿಪ್ರಾಯಪಟ್ಟರು.ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದ ವತಿಯಿಂದ ಸೋಮವಾರ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ಮತ್ತು ಐಓಟಿ ತಂತ್ರಜ್ಞಾನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನಮ್ಮ ಪೂರ್ವಿಕರು ಅತ್ಯದ್ಭುತ ಸಂಶೋಧನಾ ಕೌಶಲ್ಯತೆಯನ್ನು ಹೊಂದಿದ್ದರು. ನಾಗರಿಕತೆಯ ಉದಯ ಕಾಲದ ಸಂದರ್ಭದಲ್ಲಿ ಮನುಷ್ಯ ತನ್ನ ಅನುಕೂಲಕ್ಕೆ ಅನುಗುಣವಾಗಿ ಪಳಗಿಸಬಲ್ಲ ವಿವಿಧ ಪ್ರಾಣಿಗಳನ್ನು ಗುರುತಿಸಿದರು. ಸಾಗಾಣಿಕೆಗೆ ಕುದುರೆ, ಕೃಷಿಗೆ ಎತ್ತು ಸೇರಿದಂತೆ ಅನೇಕ ಪ್ರಾಣಿಗಳನ್ನು ಬಳಸಿಕೊಳ್ಳುತ್ತಾ ಹೆಚ್ಚು ಲಾಭದಾಯಕ ಚಿಂತನೆಗಳತ್ತ ಅನ್ವೇಷಣೆ ನಡೆಸಿದರು ಎಂದರು.
ಅದರಂತೆ ಆಧುನಿಕತೆಯ ಯುಗದಲ್ಲಿ ಮತ್ತಷ್ಟು ಲಾಭದಾಯಕ ಅನ್ವೇಷಣೆಗಳಿಗೆ ತಂತ್ರಜ್ಞಾನಗಳು ಸ್ಪಂದಿಸುತ್ತಿದ್ದು, ಯಾಂತ್ರೀ ಕೃತ ವಾತಾವರಣ ನಿರ್ಮಾಣ ಮಾಡಿ ಕಡಿಮೆ ಶ್ರಮದೊಂದಿಗೆ ಹೆಚ್ಚು ಲಾಭ ನೀಡುವಂತಹ ವಿಸ್ಮಯ ಎಐ ತಂತ್ರಜ್ಞಾನದಿಂದ ಸಾಧ್ಯ. ಇಂದು ನಾವು ಬಳಸುವ ಗಣಕಯಂತ್ರಗಳು ಡೀಪ್ ಲರ್ನಿಂಗ್ ಅಳವಡಿಕೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ. ಅದರೆ ಯುವ ಸಮೂಹಕ್ಕೆ ಯಾವ ಅಗಾಧ ಕಲಿಕೆಗೂ ಒಳಪಡದೆ ಕೇವಲ ತಂತ್ರಜ್ಞಾನಗಳ ಬಳಕೆಗೆ ಸೀಮಿತಗೊಳಿಸಿ ಕಲಿಸಲಾಗುತ್ತಿದೆ ಎಂದು ಹೇಳಿದರು.ಯುವ ಸಮೂಹ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಸ್ಮಯ ಸೃಷ್ಟಿಸುವ ಆಳವಾದ ಕಲಿಕೆ ಮತ್ತು ಕೌಶಲ್ಯಗಳ ಅಳವಡಿಕೆಯತ್ತ ಕೇಂದ್ರಿಕರಿಸಬೇಕಿದೆ. ಡೀಪ್ ಫೇಕ್ ನಂತಹ ತಂತ್ರಜ್ಞಾನಗಳ ದುರುಪಯೋಗ ಪ್ರಕರಣಗಳು ತಡೆಯುವಲ್ಲಿ ಶ್ರಮಿಸಬೇಕಿದೆ.
ಸಮಾಜಮುಖಿ ಯೋಚನೆಗಳಿಂದ ತಾಂತ್ರಿಕ ಸಾಧನೆಗಳನ್ನು ಮತ್ತಷ್ಟು ಸ್ಮಾರ್ಟ್ ಮಾಡಲು ಪ್ರಯತ್ನಿಸಿ. ಸಂಶೋಧನಾ ಲೇಖನಗಳು ಪ್ರಸ್ತುತತೆಗೆ ಸೀಮಿತವಾಗದೆ, ಭವಿಷ್ಯದ ಉನ್ನತಿಕರಣಕ್ಕೆ ಅನುಗುಣವಾಗಿ ಮಾರ್ಪಾಟು ಮಾಡಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಐಓಟಿ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಗಳು ಪರಸ್ಪರ ಕಾರ್ಯನಿರ್ವಹಿಸುವ ಮೂಲಕ ಅಗಾಧವಾದ ಫಲಿತಾಂಶಗಳನ್ನು ನೀಡಲಿದೆ. ಅಂತಹ ತಾಂತ್ರಿಕತೆಯನ್ನು ಬಳಸುವ ವಿದ್ಯಾರ್ಥಿಗಳು ನೈತಿಕತೆ ಮತ್ತು ಸದಾಚಾರಗಳೊಂದಿಗೆ ಮೌಲ್ಯಾಧಾರಿತ ತಾಂತ್ರಿಕ ವ್ಯವಸ್ಥೆ ರೂಪಿಸುವತ್ತ ಚಿತ್ತ ಹರಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖ್ಯಾತ ಸಂಶೋಧಕ ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಶೇಖರ್.ಬಿ.ಹೆಚ್ ಮಾತನಾಡಿದರು. ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಂಸಿಎ ವಿಭಾಗದ ನಿರ್ದೇಶಕಿ ಡಾ.ಜಿ.ಪಿ.ಸುನಿತ, ಕಾರ್ಯಕ್ರಮ ಸಂಯೋಜಕ ಸಂಪತ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. 80ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಸಂಶೋಧನಾರ್ಥಿಗಳು ಮಂಡಿಸಿದರು.