ಗದಗ: ನಗರದ ಬಿಂಕದಕಟ್ಟಿ ಮೃಗಾಲಯದ ಹತ್ತಿರದಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ ಬರುವವರು ಇನ್ನು ಮುಂದೆ ಸಾಹಸಿ ಕ್ರೀಡೆಗಳನ್ನು ಆಡಿ ಮನರಂಜನೆ ಪಡೆಯಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.ಇಲ್ಲಿಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಸೋಮವಾರ ಸಂಜೆ ಅರಣ್ಯ ಪ್ರಾದೇಶಿಕ ವಿಭಾಗ ಹಾಗೂ ಅರಣ್ಯ ಪ್ರಾದೇಶಿಕ ವಲಯ ಸಹಯೋಗದಲ್ಲಿ ಪಿಕಲ್ ಬಾಲ್ ಮೈದಾನ, ಆರ್ಚರಿ ಕ್ರೀಡಾಂಗಣ, ಚಿಟ್ಟೆ ಪಾರ್ಕ್ ಹಾಗೂ ಸಾಹಸ ಚಟುವಟಿಕೆ ಕ್ರೀಡಾಂಗಣಕ್ಕೆ ಚಾಲನೆ ನೀಡಿ ಮಾತನಾಡಿದರು.ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಪ್ರವಾಸಿ ತಾಣವಾಗಿದೆ. ಒಂದು ದಿನದ ಪಿಕ್‌ನಿಕ್‌ಗಾಗಿ ಸಾಕಷ್ಟು ಶಾಲಾ ಮಕ್ಕಳು ಭೇಟಿ ನೀಡುತ್ತಿದ್ದಾರೆ. ಇನ್ನು ಮುಂದೆ ಸಸ್ಯೋದ್ಯಾನ ವೀಕ್ಷಣೆ ಜತೆಗೆ ಪಿಕಲ್ ಬಾಲ್, ಆರ್ಚರಿ ಕ್ರೀಡಾಂಗಣದಲ್ಲಿ ಬಿಲ್ಲು ಕ್ರೀಡೆ, ಚಿಟ್ಟೆ ಪಾರ್ಕ್‌ನಲ್ಲಿ ಪತಂಗಗಳ ಕಲರವ, ಸಾಹಸ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಸಂಪೂರ್ಣ ಮನರಂಜನೆ ದೊರೆಯುವಂತೆ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಲಾಗಿದೆ. ಅವುಗಳ ಸದ್ಬಳಕೆಯನ್ನು ಮಕ್ಕಳು ಹಾಗೂ ಸಾರ್ವಜನಿಕರು ಪಡೆಯಬಹುದು ಎಂದರು.
ಈಗಾಗಲೇ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಹಲವಾರು ಮನರಂಜನಾ ಚಟುವಟಿಕೆಗಳಿಗೆ ಅವಕಾಶ ಒದಗಿಸಲಾಗಿದೆ. ಜಿಪ್‌ಲೈನ್ ಮೂಲಕ ಸಾಹಸ ಪ್ರಿಯರಿಗೆ ಮುದ ನೀಡುವಂತೆ ಸಸ್ಯೋದ್ಯಾನ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೇ ಅರಣ್ಯ ಹುತಾತ್ಮರ ಸ್ಮಾರಕ ಸಹ ಅಂದವಾಗಿ ನಿರ್ಮಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಅವೆಲ್ಲವುಗಳನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ನಿರಂತರವಾಗಿ ಸಾಗಿದೆ. ಜಿಲ್ಲೆ ಐತಿಹಾಸಿಕವಾಗಿ, ಸಾಹಿತ್ಯಕವಾಗಿ, ನೈಸರ್ಗಿಕವಾಗಿ ಸಮೃದ್ಧವಾಗಿದ್ದು, ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುವ ಭರವಸೆಯಿದೆ ಎಂದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕೆ., ಬಿಂಕದಕಟ್ಟಿ ಗ್ರಾಪಂ ಅಧ್ಯಕ್ಷ ನಿಂಗಪ್ಪ ಪರಪ್ಪನವರ, ಉಪಾಧ್ಯಕ್ಷ ದ್ಯಾಮವ್ವ ಆರಟ್ಟಿ, ಅರಣ್ಯ ಇಲಾಖೆಯ ಅಧಿಕಾರಿಗಳಾದ ಮಹಾಂತೇಶ ಪೊಲೀಸಪಾಟೀಲ, ವೀರೇಂದ್ರ ಮರಿಬಸಣ್ಣವರ ಸೇರಿದಂತೆ ಹಿರಿಯರು, ಗಣ್ಯರು, ಇತರರು ಇದ್ದರು.