ಮಕ್ಕಳ ಬದುಕು, ಬೆಳವಣಿಗೆಯಲ್ಲಿ ದೇಶದ ಭವಿಷ್ಯ ಅಡಗಿದೆ: ರಾಜೇಶ್

KannadaprabhaNewsNetwork | Published : Jan 28, 2024 1:17 AM

ಸಾರಾಂಶ

ಶ್ರಮ, ಶ್ರದ್ಧೆ, ಜ್ಞಾನದಿಂದ ರೂಪುಗೊಂಡ ಭಾರತ ಇಂದು ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡಿದೆ.

ಹಿರಿಯೂರು: ಶ್ರಮ, ಶ್ರದ್ಧೆ, ಜ್ಞಾನದಿಂದ ರೂಪುಗೊಂಡ ಭಾರತ ಇಂದು ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ರೂಪುಗೊಂಡಿದೆ ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಅಭಿಪ್ರಾಯಪಟ್ಟರು.

ನಗರದ ನೆಹರೂ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ದೇಶದಲ್ಲಿ ಅನೇಕ ಜಾತಿ, ಮತ, ಧರ್ಮ, ಭಾಷೆಗಳ ಜನರಿದ್ದರೂ ಸಹ ಯಾವುದೇ ಪ್ರತ್ಯೇಕತೆ, ಮೂಲಭೂತ ವಾದ, ಮತೀಯ ವಾದಕ್ಕೆ ಅವಕಾಶವಿಲ್ಲದೆ ಎಲ್ಲರೂ ಕಾನೂನು ಪರಿಪಾಲನೆ, ಐಕ್ಯತೆ, ಶಿಸ್ತಿನಿಂದ ನೆಮ್ಮದಿ ಬದುಕು ಸಾಗಿಸುತ್ತಿದ್ದಾರೆ. ಸಂವಿಧಾನದಲ್ಲಿ ದೇಶದ ಜನರ ಆಶೋತ್ತರಗಳನ್ನು ಈಡೇರಿಸುವ ಅಂಶಗಳು ಅಡಗಿವೆ. ಜನತೆಗೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಭಾವನೆ ಒದಗಿಸುವುದು ಗುರಿಯಾಗಿದೆ. ದೇಶ ಗಣರಾಜ್ಯವಾಗಿ 7 ದಶಕ ಕಳೆದಿದ್ದು ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವುದು ಸರ್ಕಾರದ ಮತ್ತು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ದೇಶದಲ್ಲಿ ಸುಮಾರು 43 ಕೋಟಿ ಮಕ್ಕಳ ಸಂಖ್ಯೆಯಿದ್ದು, ದೇಶದ ಭವಿಷ್ಯ ಅವರಲ್ಲಿಯೇ ಅಡಗಿದೆ. ಮಕ್ಕಳ ಉತ್ತಮ ಬದುಕು ಮತ್ತು ಬೆಳವಣಿಗೆಯಲ್ಲಿ ದೇಶದ ಭವಿಷ್ಯವೂ ಇರುವುದರಿಂದ ವಿದ್ಯಾರ್ಥಿಗಳನ್ನು, ಯುವಕರನ್ನು ಸತ್ಪ್ರಜೆಗಳನ್ನಾಗಿಸಬೇಕಿದೆ. ದೇಶದ ಬಗ್ಗೆ ಕಾಳಜಿ, ಗೌರವ, ಪ್ರೇಮ ಎಲ್ಲರಲ್ಲೂ ಮೂಡಬೇಕು ಮತ್ತು ದಿನೇ ದಿನೇ ವೃದ್ಧಿಸುತ್ತಾ ಹೋಗಬೇಕಿದೆ. ಹಾಗಾಗಿ ದೇಶ ಕಟ್ಟುವ ಹಠ, ದೇಶಕ್ಕಾಗಿ ಸೇವೆ ಮಾಡುವ ಗುಣಗಳನ್ನು ಇಂದಿನ ಮಕ್ಕಳು ಬೆಳೆಸಿಕೊಳ್ಳುತ್ತಾ ಹೋಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಂ ತಿಪ್ಪೇಸ್ವಾಮಿ, ತಾಲೂಕು ಪಂಚಾಯಿತಿ ಇಓ ಸತೀಶ್ ಕುಮಾರ್, ಪೌರಾಯುಕ್ತ ಎಚ್.ಮಹಾಂತೇಶ್, ಡಿವೈ ಎಸ್ಪಿಪಿ ಚೈತ್ರಾ, ಕಸಾಪ ಅಧ್ಯಕ್ಷ ವಿ.ಎಂ.ನಾಗೇಶ್, ರೈತ ಮುಖಂಡ ಕೆಸಿ ಹೊರಕೇರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ದಿನೇಶ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ವೆಂಕಟೇಶ್, ಸಿಪಿಐ ರಾಘವೇಂದ್ರ ಕಾಂಡಿಕೆ, ಫಕೃದ್ದೀನ್, ಅಯೂಬ್ ಖಾನ್, ದೊಡ್ಡಘಟ್ಟ ಶಿವಕುಮಾರ್, ಜ್ಞಾನೇಶ್, ಗುರುಪ್ರಸಾದ್, ಕರವೇ ರಾಮಕೃಷ್ಣಪ್ಪ, ನಗರಸಭಾ ಸದಸ್ಯರಾದ ಬಿ.ಎನ್.ಪ್ರಕಾಶ್, ಅಜಯ್ ಕುಮಾರ್, ಶಿವರಂಜಿನಿ, ಸಣ್ಣಪ್ಪ, ಮಮತಾ ಮುಂತಾದವರು ಹಾಜರಿದ್ದರು.

Share this article