ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಗಾಂಧಿ ಎಂದು ನಾವೇ ಸಂಬೋಧಿಸುವ ಮೂಲಕ ಜಿ.ಮಾದೇಗೌಡರನ್ನು ಮಂಡ್ಯಕ್ಕೆ ಸೀಮಿತಗೊಳಿಸಿದ್ದೇವೆ. ಅವರು ನಿಜಕ್ಕೂ ಕರ್ನಾಟಕದ ಗಾಂಧಿ ಎಂದು ಖ್ಯಾತ ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಬಣ್ಣಿಸಿದರು.ಗುರುವಾರ ನಗರದ ಗಾಂಧಿ ಭವನದಲ್ಲಿ ಜಿ.ಮಾದೇಗೌಡ ಪ್ರತಿಷ್ಠಾನದ ವತಿಯಿಂದ ನಡೆದ ಜಿ.ಮಾದೇಗೌಡ ಸಮಾಜಸೇವಾ ಮತ್ತು ಸಾವಯವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಭಾಷಣ ಮಾಡಿದರು.
ಗೋವಿಂದೇಗೌಡರನ್ನು ಮಲೆನಾಡು ಗಾಂಧಿ ಎನ್ನುವರು. ಅದೇ ರೀತಿ ಸಚಿವರಾಗಿ, ಸಂಸದರಾಗಿ, ರಾಜ್ಯಮಟ್ಟದಲ್ಲಿ ಹೋರಾಟ ಮಾಡಿದವರು. ಶಿಕ್ಷಣ, ಆರೋಗ್ಯ, ಧಾರ್ಮಿಕ, ಉದ್ಯೋಗ ಕ್ಷೇತ್ರಕ್ಕೆ ಒತ್ತು ನೀಡಿರುವ ಜಿ.ಮಾದೇಗೌಡರನ್ನು ಕರ್ನಾಟಕದ ಗಾಂಧಿ, ಬಯಲು ಸೀಮೆ ಗಾಂಧಿ ಎಂದು ಕರೆಯುವುದು ಹೆಚ್ಚು ಔಚಿತ್ಯಪೂರ್ಣ ಎಂದು ಹೇಳಿದರು.ಕುಟುಂಬದಲ್ಲಿ ಒಬ್ಬ ವಿದ್ಯಾವಂತನಾದರೆ ಇಡೀ ಕುಟುಂಬವೇ ಉದ್ಧಾರವಾಗಲಿದೆ ಎಂಬ ಪರಿಕಲ್ಪನೆ ಮಾದೇಗೌಡರಲ್ಲಿತ್ತು. ಅದಕ್ಕಾಗಿ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಮನೆಯನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ವೈದ್ಯಕೀಯ ಅನುಕೂಲಗಳನ್ನು ಕಲ್ಪಿಸಿದರು. ಧಾರ್ಮಿಕ ನಂಬಿಕೆಯನ್ನು ಗೌರವ ಭಾವನೆಯಿಂದ ಕಂಡು ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನ ನಿರ್ಮಿಸಿದರು. ಅದನ್ನೊಂದು ಸುಂದರ ಪ್ರವಾಸಿತಾಣವಾಗಿ ಪರಿವರ್ತಿಸಿದರು. ಕಾರ್ಖಾನೆ ತೆರೆಯುವುದಕ್ಕೆ ಅವಕಾಶ ಕಲ್ಪಿಸಿ ಉದ್ಯೋಗ ಸೃಷ್ಟಿಸಿಕೊಟ್ಟರು. ರೈತರ ಪರವಾಗಿ ಹೋರಾಟ ನಡೆಸುವ ಮೂಲಕ ದೊಡ್ಡ ಹೋರಾಟಗಾರರಾಗಿ ಹೊರಹೊಮ್ಮಿದ್ದರು. ಒಬ್ಬ ನಿಜವಾದ ಜನಪ್ರತಿನಿಧಿ ಹೇಗಿರಬೇಕು ಎನ್ನುವುದಕ್ಕೆ ಜಿ.ಮಾದೇಗೌಡರು ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಪ್ರತಿಭೆಗಳು ಮಂಡ್ಯದಲ್ಲಿದ್ದಾರೆ. ಆದರೆ, ಅವರೆಲ್ಲರೂ ಮಂಡ್ಯಕ್ಕೆ ಸೀಮಿತರಾಗಿ ಉಳಿದಿದ್ದಾರೆ. ಹೊರಗಡೆ ಹೆಚ್ಚು ಪ್ರಕಾಶಮಾನವಾಗಿ ಬೆಳಗದಿರುವುದು ಈ ಜಿಲ್ಲೆಯ ದೌರ್ಭಾಗ್ಯ. ಸಾಹಿತ್ಯ ವಲಯದಲ್ಲಿ ಶಿವಮೊಗ್ಗ, ಧಾರವಾಡ, ಮೈಸೂರು, ಬೆಂಗಳೂರು, ಮಂಗಳೂರು ಎಂದೆಲ್ಲಾ ಗುರುತಿಸುತ್ತಾರೆ. ಆದರೆ, ಸಾಹಿತ್ಯ ಕ್ಷೇತ್ರದಲ್ಲಿ ಮಂಡ್ಯ ಜಿಲ್ಲೆ ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತ ಶ್ರೀಮಂತವಾದ ಜಿಲ್ಲೆ. ಬಿ.ಎಂ.ಶ್ರೀಕಂಠಯ್ಯ, ಎಚ್.ಎಲ್.ನಾರಾಯಣಮೂರ್ತಿ, ಎ.ಎನ್.ಮೂರ್ತಿರಾಯ, ಪು.ತಿ.ನ., ಕೆ.ಎಸ್.ನರಸಿಂಹಸ್ವಾಮಿ ಹೀಗೆ ಅನೇಕ ಶ್ರೇಷ್ಠ ಸಾಹಿತಿಗಳಿಂದ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ ಎಂದು ವಿಶ್ಲೇಷಿಸಿದರು.ಜಿ.ಮಾದೇಗೌಡ ಅವರಂತಹವರು ನಮಗೆ ಮಾದರಿಯಾಗಬೇಕು. ಕುಬ್ಚರು, ದುಷ್ಟರು, ನೀಚರು ಮಾದರಿಯಾಗಿ ನಿಂತಿದ್ದಾರೆ. ಸಮೂಹ ಮಾಧ್ಯಮ, ದೃಶ್ಯಮಾಧ್ಯಮಗಳನ್ನು ಗಮನಿಸಿದರೆ ಯಾರನ್ನು ವೈಭವೀಕರಿಸುತ್ತಾರೆ ಎಂಬುದು ಅರಿವಿಗೆ ಬರಲಿದೆ. ಒಳ್ಳೆಯವರು ಮಾತನಾಡದಿರುವ ಕಾರಣದಿಂದಲೇ ಕೆಟ್ಟವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಒಳ್ಳೆಯವರು ಮಾತನಾಡುವಂತಾಗಬೇಕು. ಮೌನ ಶ್ರೇಷ್ಠ ನಿಜ. ಆದರೆ, ಈ ರೀತಿಯ ಮೌನ ಸಮಾಜಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.
ಮಾಜಿ ಸಚಿವ ಜಿ.ಸಿ.ಮಾಧುಸ್ವಾಮಿ ಮಾತನಾಡಿ, ಸಾಧನೆ ಮಾಡುವುದು ಸುಲಭವಲ್ಲ, ಅನೇಕ ತ್ಯಾಗ ಹಾಗೂ ಬಲಿದಾನಗಳ ಸಂಕೇತವೇ ಸಾಧನೆ ಎಂಬುದಾಗಿರುತ್ತದೆ. ಮನುಷ್ಯನಿಗೆ ಸಮಾಧಾನವಾಗುವ ನಿಟ್ಟಿನಲ್ಲಿ ಸಾಧನೆ ಇರಬೇಕು. ಸರೋಜಮ್ಮ ಎಂ.ಚಂದ್ರಶೇಖರ್ ಮತ್ತು ಡಾ.ಎಚ್.ಮಂಜುನಾಥ್ ಅವರ ಸಾಧನೆ ಗುರುತಿಸಿ ಮಾದೇಗೌಡರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಅತ್ಯುತ್ತಮ ಕೆಲಸವಾಗಿದೆ.ಮಂಡ್ಯ ಗಾಂಧಿ ಎನ್ನುವ ಮಾತು ಜಿ.ಮಾದೇಗೌಡರಿಗೆ ಒಗ್ಗುತ್ತದೆ. ಕಾವೇರಿ ಹೋರಾಟವೇ ಇವರಿಗೆ ಪ್ರೇರಣೆಯಾಗಿದ್ದು, ಇನ್ನೂ ಮಂಡ್ಯ ಜಿಲ್ಲೆಯಲ್ಲಿ ಹೋರಾಟ ಜೀವಂತವಾಗಿದ್ದರೆ ಅದು ಮಾದೇಗೌಡರು ಹಾಕಿಕೊಟ್ಟ ಅಡಿಪಾಯವಾಗಿದೆ. ಇಂತಹ ಹಲವು ಮಹನೀಯರ ಹೊರಾಟದ ಕಿಚ್ಚು ಇರಬಹುದು, ಇದರಲ್ಲಿ ಮಾದೇಗೌಡರದ್ದು ವಿಶೇಷ ಎನಿಸುತ್ತದೆ ಎಂದು ತಿಳಿಸಿದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ಜಿ.ಮಾದೇಗೌಡ ಅವರನ್ನು ಬರಗಾಲ ಬಂದಿದ್ದರೆ ಜನರು ಪ್ರತಿ ದಿನ ನೆನೆಯುತ್ತಿದ್ದರು, ರೈತರ ಮೇಲಿನ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದ ಮೇಲೆ ನಾನು ಸಹ ಮುಕ್ತನಾಗಿದ್ದೇನೆ, ಇವರ ಪುತ್ರ ಮಧು ಜಿ.ಮಾದೇಗೌಡ ಅವರು ಕೂಡ ಗಾಂಧಿ ಭವನವನ್ನು ನವೀಕರಣಗೊಳಿಸುವ ಮೂಲಕ ಮತ್ತಷ್ಟು ಭವನದ ವೈಭವ ಹೆಚ್ಚಿದೆ. ಇವರ ಉತ್ತಮ ಕೆಲಸಗಳಿಗೆ ನನ್ನ ಬೆಂಬಲ ಇರುತ್ತದೆ ಎಂದು ಭರವಸೆ ನೀಡಿದರು.ಸಮಾಜ ಸೇವಾ ಪ್ರಶಸ್ತಿಯನ್ನು ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಅಧ್ಯಕ್ಷೆ ಸರೋಜಮ್ಮ ಎಂ.ಚಂದ್ರಶೇಖರ್ ಹಾಗೂ ಸಾವಯವ ಕೃಷಿಕ ಪ್ರಶಸ್ತಿಯನ್ನು ಕುಣಿಗಲ್ ತಾಲೂಕಿನ ದೊಡ್ಡಹುಸೂರಿನ ಗಾಂಧೀಜಿ ಸಹಜ ಬೇಸಾಯ ಆಶ್ರಮ ಸಂಸ್ಥಾಪಕ ಡಾ.ಎಚ್.ಮಂಜುನಾಥ್ ಅವರಿಗೆ ೨೫ ಸಾವಿರ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ನಂಜೇಗೌಡ, ಪ್ರಾಂಶುಪಾಲ ಮಹದೇವಸ್ವಾಮಿ, ಮುಖಂಡ ಸಿ.ಎಂ.ಉಮೇಶ್ ಭಾಗವಹಿಸಿದ್ದರು.