ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಗಮಕ ಕಲೆ ಅತ್ಯಂತ ಪ್ರಾಚೀನ: ಬಿ.ಎಸ್.ಭಗವಾನ್

KannadaprabhaNewsNetwork | Published : Feb 24, 2025 12:31 AM

ಸಾರಾಂಶ

ತರೀಕೆರೆ, ಕನ್ನಡ ಕಾವ್ಯ ಮತ್ತು ಸಾಹಿತ್ಯ ಪರಂಪರೆಯಲ್ಲಿ ಗಮಕ ಕಲೆ ಅತ್ಯಂತ ಪ್ರಾಚೀನ ಹಾಗೂ ವೈಶಿಷ್ಟ್ಯತೆ ಪಡೆದಿದೆ ಎಂದು ತಾಲೂಕು ಗಮಕ ಕಲಾ ಪರಿಷತ್ತು ಗೌರವಾಧ್ಯಕ್ಷ ಕನ್ನಡ ಶ್ರೀ ಬಿ.ಎಸ್.ಭಗವಾನ್ ಹೇಳಿದ್ದಾರೆ.

ಮಹಾಕವಿ ಕುಮಾರವ್ಯಾಸ ಜಯಂತಿ ಹಾಗೂ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಕನ್ನಡ ಕಾವ್ಯ ಮತ್ತು ಸಾಹಿತ್ಯ ಪರಂಪರೆಯಲ್ಲಿ ಗಮಕ ಕಲೆ ಅತ್ಯಂತ ಪ್ರಾಚೀನ ಹಾಗೂ ವೈಶಿಷ್ಟ್ಯತೆ ಪಡೆದಿದೆ ಎಂದು ತಾಲೂಕು ಗಮಕ ಕಲಾ ಪರಿಷತ್ತು ಗೌರವಾಧ್ಯಕ್ಷ ಕನ್ನಡ ಶ್ರೀ ಬಿ.ಎಸ್.ಭಗವಾನ್ ಹೇಳಿದ್ದಾರೆ.

ಕರ್ನಾಟಕ ಗಮಕ ಕಲಾ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಪಟ್ಟಣದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಮಹಾಕವಿ ಕುಮಾರವ್ಯಾಸ ಜಯಂತಿ ಹಾಗೂ ಗಮಕ ವಾಚನ ವ್ಯಾಖ್ಯಾನದಲ್ಲಿ ಮಾತನಾಡಿದರು.

ಭಾರತೀಯ ಪರಂಪರೆಯ ಮೇರು ಗ್ರಂಥಗಳಾದ ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಗೆ ಅನೇಕ ಮಹನೀಯರು ಭಾಷ್ಯ ಬರೆದಿದ್ದು ಇದರಿಂದ ಸಾಮಾನ್ಯರು ಅದರ ಸರ್ವಸಾರ ಗ್ರಹಿಸಿ ಬಾಳಿನಲ್ಲಿ ಅಳವಡಿಸಿಕೊಂಡು ಧರ್ಮ ಮಾರ್ಗದಲ್ಲಿ ನಡೆದು ಇತರರಿಗೂ ಮಾರ್ಗದರ್ಶಕರಾಗಿದ್ದಾರೆ. ಕನ್ನಡದ ಅದಿಕವಿಗಳ ಸಾಲಿನಲ್ಲಿರುವ ಪಂಪ, ರನ್ನ, ಜನ್ನ ರಾಘವಾಂಕ ಮುಂತಾದ ಮಹಾಕವಿಗಳು ನಾಡಿನ ಶ್ರೀಮಂತಿಕೆ ಎನಿಸಿದ ಅನೇಕ ಶ್ರೇಷ್ಠ ಕಾವ್ಯಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ವಿಶಿಷ್ಠ ಕೊಡುಗೆ ನೀಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಅಗ್ರ ಪಂಕ್ತಿಃ 16ನೇ ಶತಮಾನದಲ್ಲಿ ಗದುಗಿನ ವೀರನಾಯಣನ ಅನನ್ಯ ಭಕ್ತರು ಆದ ಕುಮಾರವ್ಯಾಸರು ಕರ್ನಾಟ ಭಾರತ ಕಥಾ ಮಂಜರಿ ಎಂಬ ಗ್ರಂಥದಲ್ಲಿ ಭಾರತದ ಇತಿಹಾಸವನ್ನುಪಾಂಡವರ ಜನನದಿಂದ ಹಿಡಿದು ಧರ್ಮರಾಯನ ಪಟ್ಟಾಭಿ ಷೇಕದ ವರೆವಿಗೂ ಸಮಗ್ರ ಇತಿಹಾಸವನ್ನು 8200 ಪದ್ಯಗಳ ಹತ್ತು ಪರ್ವಗಳಲ್ಲಿ 151 ಸಂದಿಯೊಂದಿಗೆ ನಡು ಗನ್ನಡದಲ್ಲಿ ಜೈಮಿನಿ ಷಟ್ಪದಿಯಲ್ಲಿ ಸರ್ವ ಕಾಲಕ್ಕೂ ಅಗ್ರ ಪಂಕ್ತಿಯಲ್ಲಿ ವಿಜೃಂಭಿಸುವಂತೆ ರಚಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ನಾಡಿನ ಗಮಕ ಕಲಾವಿದರು ಕಾವ್ಯ ವಾಚನ ಮತ್ತು ವ್ಯಾಖ್ಯಾನದೊಂದಿಗೆ ಶೋತೃಗಳ ಮನ ತಣಿಸುವಂತೆ ಸಂಗೀತದ ಲೇಪನದೊಂದಿಗೆ ಅರ್ಥಪೂರ್ಣವಾಗಿ ನಿರಂತರ ಕಾರ್ಯಕ್ರಮಗಳ ಮೂಲಕ ಗಮಕ ಸಾಹಿತ್ಯ ಪ್ರಚುರಪಡಿಸುತ್ತಿದ್ದಾರೆ ಎಂದು ಹೇಳಿದರು.

ಬ್ರಾಹ್ಮಣ ಸೇವಾ ಸಮಿತಿ ಉಪಾಧ್ಯಕ್ಷ ಡಿ.ಸಿ.ಶ್ರೀನಿವಾಸಮೂರ್ತಿ ಮಾತನಾಡಿ ಸಾಹಿತ್ಯವನ್ನುಅರ್ಥಸಹಿತವಾಗಿ ಕೇಳುಗರ ಮನ ತಣಿಸುವ ಹಾಗೆ ಗಮಕ ಕಲೆ ಅತ್ಯಂತ ಅಪ್ಯಾಯಮಾನವಾಗಿದೆ. ಬಹು ಹಿಂದಿನಿಂದಲೂ ಪಟ್ಟಣದಲ್ಲಿ ಹಬ್ಬ ಹರಿದಿನ ಗಳಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತ ಬರುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದರು.

ತಾಲೂಕು ಗಮಕ ಕಲಾ ಪರಿಷತ್ತು ಅಧ್ಯಕ್ಷ ಡಾ.ಬಿ.ಎಚ್.ಕುಮಾರಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಾಕವಿ ನಾರಾಣಪ್ಪ ಅವರು ಗದುಗಿನ ಶ್ಯಾನುಭೋಗರ ವಂಶಜರಾಗಿ ಹುಬ್ಬಳ್ಳಿ ತಾಲೂಕು ಕೋಳಿವಾಡದಲ್ಲಿ ಜನಿಸಿ, ಇವರ ಕುಲದೈವ ಗದುಗಿನ ವೀರನಾರಾಯಣರ ಕೃಪೆಯಿಂದ ಕರ್ನಾಟ ಭಾರತ ಕಥಾ ಮಂಜರಿ ರಚನೆ ಸಾಧ್ಯ ವಾಯಿತೆಂದು ಅವರ ತೋರಣ ಸ್ತೋತ್ರಗಳಲ್ಲಿ ವೀರನಾರಾಯಣರಿಗೆ ಅರ್ಪಿಸಿದ್ದಾರೆ. ಕಾವ್ಯವನ್ನು ತಾಳೆಗರಿ ಮೇಲೆ ಒಂದಕ್ಷರವನ್ನು ತಿದ್ದದೆ ಪದ ಪದಕ್ಕೆ ಮಿಗಿಲಾದ ಪದವಿಲ್ಲದಂತೆ ನಿರರ್ಗಳವಾಗಿ ಒಂದೊಂದು ಪದ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಮಹಾಭಾರತ ಶೋತೃಗಳ ಕಣ್ಮುಂದೆ ಮೂಡಿಬರುವಂತೆ ರಚಿಸಿ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಪಡೆದಿರುತ್ತಾರೆ ಎಂದು ತಿಳಿಸಿದರು.

ಚಿಕ್ಕಮಗಳೂರು ಗಮಕ ಕಲಾ ಪರಿಷತ್ತು ಜಿಲ್ಲಾಧ್ಯಕ್ಷ ರಾಮಸುಬ್ರಾಯ ಶೇಠ್ ದ್ರೌಪದಿ ಸ್ವಯಂವರ ಎನ್ನುವ ಸರ್ಗದ ಕಾವ್ಯ ಕುರಿತು ಸವಿಸ್ತಾರವಾಗಿ ಕಥಾ ಪ್ರಸಂಗವನ್ನು ಮನಮುಟ್ಟುವಂತೆ ವ್ಯಾಖ್ಯಾನಿಸಿದರು. ತರೀಕೆರೆ ಆಕಾಶವಾಣಿ ಕಲಾವಿದರಾದ ಶಾರದ ಎನ್.ಮಂಜುನಾಥ್ ಸುಶ್ರಾವ್ಯವಾಗಿ ಕುಮಾರವ್ಯಾಸರ ಗಮಕ ಪದ್ಯಗಳನ್ನು ಕಾವ್ಯವಾಚನ ಮಾಡಿದರು.

ಆರ್ಯವೈಶ್ಯ ಮಂಡಳಿ ಉಪಾಧ್ಯಕ್ಷ ಎಸ್.ನಾಗರಾಜ ಶ್ರೇಷ್ಠಿ ಮಾತನಾಡಿದರು. ಗಮಕ ಕಲಾವಿದರಾದ ಸುನೀತಾ ಕಿರಣ್ ಕುಮಾರ್, ಲತಾ ಗೋಪಾಲಕೃಷ್ಣ, ಶ್ರೀ ಸ್ಕಂದ ಮಾತಾ ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಭಾಮಾ ಸುಬ್ರಹ್ಮಣ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.23ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ನಡೆದ ಮಹಾಕವಿ ಕುಮಾರವ್ಯಾಸ ಜಯಂತಿ, ಗಮಕ ವಾಚನ ವ್ಯಾಖ್ಯಾನದಲ್ಲಿ ಗಮಕ ಕಲಾ ಪರಿಷತ್ತು ಗೌರವಾಧ್ಯಕ್ಷ ಬಿ.ಎಸ್. ಭಗವಾನ್, ಡಾ.ಬಿ. ಎಚ್.ಕುಮಾರಸ್ವಾಮಿ, ಡಿ.ಸಿ.ಶ್ರೀನಿವಾಸಮೂರ್ತಿ, ಗಮಕ ಕಲಾ ಪರಿಷತ್ತು ಜಿಲ್ಲಾಧ್ಯಕ್ಷ ರಾಮಸುಬ್ರಾಯ ಶೇಠ್, ಕಲಾವಿದರಾದ ಶಾರದ ಎನ್.ಮಂಜುನಾಥ್ ಮತ್ತಿತರರು ಇದ್ದರು.

Share this article