ಶಿವಾನಂದ ಅಂಗಡಿ
ಹುಬ್ಬಳ್ಳಿ:''''ಅಜ್ಜಿ (ಗಂಗೂಬಾಯಿ) ಸಮಾಧಿ ಏನ್ ಸಂರಕ್ಷಣಾ ಮಾಡ್ತಾರೀ, ಅದಕ್ಕೊಂದು ಚಾವಣಿ ಹಾಕಾಕ್ ಆಗಿಲ್ಲ...''''
ಸದ್ಯ ಗುರುಕುಲದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತಂತೆ ಡಾ. ಗಂಗೂಬಾಯಿ ಹಾನಗಲ್ಲ ಅವರ ಮೊಮ್ಮಗಳು ಹಾಗೂ ಶಾಸ್ತ್ರೀಯ ಸಂಗೀತ ಕಲಾವಿದೆಯೂ ಆಗಿರುವ ವೈಷ್ಣವಿ ಹಾನಗಲ್ಲ ಅವರ ತೀವ್ರ ಅಸಮಾಧಾನ ಇದು.ಭಾರತೀಯ ಶಾಸ್ತ್ರೀಯ ಸಂಗೀತ ಗುರುಕುಲ ಮಾದರಿಯ ಶಿಕ್ಷಣ ಕೇಂದ್ರವನ್ನು ಮೈಸೂರು ಸಂಗೀತ ವಿವಿಗೆ ಸೇರ್ಪಡೆ ಹಾಗೂ ಅಲ್ಲಿಯ ವಿದ್ಯಾರ್ಥಿಗಳ ಹೊರಹಾಕಲು ನಡೆದ ಯತ್ನಗಳ ಕುರಿತಂತೆ ಅವರು ''''''''ಕನ್ನಡಪ್ರಭ'''''''' ಜತೆ ಮಾತನಾಡಿದರು.
ಗುರುಮನೆಯಿಂದ ಗುರುಗಳನ್ನು ಓಡಿಸಿ ಆಯಿತು, ಈಗ ವಿದ್ಯಾರ್ಥಿಗಳನ್ನು ಓಡಿಸಲು ಸಂಚು ನಡೆದೈತಿ, ರಾತ್ರಿ 11.30 ಗಂಟೆಗೆ ಕರೆಂಟ್ ತಗೀತಾರಂತ, ವಿದ್ಯಾರ್ಥಿನಿಯರು ಅಳಕೊಂತ್ ಹೇಳ್ಯಾರ. ಯಾವ ಕಲೆ ಉಳಿಸುದೂ ಯಾರಿಗೂ ಬೇಕಾಗಿಲ್ಲ. ಗೋಕಾಕ ಚಳವಳಿಯಲ್ಲಿ ಗಂಗೂಬಾಯಿ ಹಾನಗಲ್ಲ ಅವರು ಪಾಲ್ಗೊಂಡಿದ್ದು, ಇಲ್ಲಿಯ ಜನಕ್ ನೆನಪ ಇಲ್ಲೇನು, ಗುರುಕುಲ ನೆನೆಸಿಕೊಂಡ್ರ ತಲೆತಿರುಗಿ ಬೀಳಕತ್ತೈತಿ ಎಂದರು.ವಿದ್ಯಾರ್ಥಿಗಳ ಭವಿಷ್ಯ ಕುರಿತು ಸರ್ಕಾರ ಚಿಂತಿಸಬೇಕು. ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅಜ್ಜಿಯ ಮೊಮ್ಮಗಳಾದರೂ ಗುರುಕುಲದಲ್ಲಿ ನಮಗೆ ಯಾವುದೇ ಅಧಿಕಾರ ಇಲ್ಲ. ಹೊಣೆ ಹೊತ್ತವರು ಮಾಡಬೇಕು.
ಪ್ರಧಾನಿ ಹುಬ್ಬಳ್ಳಿಗೆ ಬಂದಾಗ್ ಗಂಗೂಬಾಯಿ ಹಾನಗಲ್ಲ ಹೆಸರ್ ಹೇಳತಾರ್, ಸಿದ್ಧಾರೂಢರ ಹೆಸರು ಹೇಳತಾರ್ ಆದರೆ, ಗುರುಕುಲ ಬಂದ್ ಆಗು ಹೊತ್‌ನ್ಯಾಗ್ ಇವೆಲ್ಲ ಪ್ರಯೋಜನಕ್ಕೆ ಬರುತ್ತಿಲ್ಲ ಎಂದರು.₹1.25 ಕೋಟಿ ಕಷ್ಟವಾಯಿತೇ?
ರಾಜಕೀಯ ಒಂದು ಉದ್ಯೋಗ ಆಗಿದೆಯೇ ಹೊರತು ಬೇರೆನೂ ಇಲ್ಲ. ರಾಜಕಾರಣಿಗಳ್ಯಾರೂ ಜನಸೇವೆ ಮಾಡಲು ಬಂದಿಲ್ಲ. ಆ ಯಾತ್ರಾ, ಈ ಯಾತ್ರಾ ಅಂತ ಹೊಂಟಾರ್, ಯುವಜನತೆಗೆ ಏನು ಸಂಸ್ಕಾರ ಕೊಡಬೇಕೋ ಇವರು ಕೊಡುತ್ತಿಲ್ಲ ಎಂದರು.ಹುಬ್ಬಳ್ಳಿಯ ಉಣಕಲ್‌ದಲ್ಲಿ 5 ಎಕರೆ ಪ್ರದೇಶದಲ್ಲಿ ಗುರುಕುಲವಿದ್ದು, ಶಿಷ್ಯರ ಕೊಠಡಿ, ಗುರುಮನೆ, ಅದರ ಹಿಂದೆ ಸಿಬ್ಬಂದಿ ಕೊಠಡಿ ವರ್ಗದವರ ಕೊಠಡಿಗಳು, ಆಡಳಿತ ಕಚೇರಿ ಕಟ್ಟಡ ಕಳೆದ ವಾರ ಸುರಿದ ನಿರಂತರ ಮಳೆಯಿಂದಾಗಿ ಶಿಥಿಲಗೊಂಡಿವೆ. ಕಿಟಕಿಗಳ ಗ್ಲಾಸ್‌ಗಳು ಒಡೆದಿದ್ದು, ಬಾಗಿಲುಗಳು ಸಹ ಹುಳು ಹತ್ತಿ ಬೀಳುವ ಹಂತಕ್ಕೆ ಬಂದಿವೆ.
ಗುರುಮನೆಗಳಲ್ಲಿ ಮಣ್ಣು, ಉಸುಕು ಉದುರುತ್ತಿವೆ. ಇಟ್ಟಿಗೆಗಳು ಉದುರಿ ಬೀಳುತ್ತಿವೆ. ಸಂಗೀತ ಅಭ್ಯಾಸಕ್ಕಾಗಿ ಚೌಕಾಕಾರದಲ್ಲಿ ನಿರ್ಮಿಸಿದ್ದ ಕಾಂಕ್ರೀಟ್ ಕಟ್ಟಡ ಕಿತ್ತುಹೋಗಿದೆ. ಆಡಿಟೋರಿಯಂನಲ್ಲಿ ಗಿಡಗಂಟೆಗಳು ಬೆಳೆದಿದ್ದು, ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಸೊಳ್ಳೆಗಳು ಜಾಸ್ತಿಯಾಗಿವೆ. ಮಳೆ ನೀರು ಸಂಗ್ರಹಣೆ ಮಾಡಲು ನಿರ್ಮಿಸಿದ ತೊಟ್ಟಿಯಲ್ಲಿ ಮಳೆ ನೀರು ನಿಲ್ಲುತ್ತಿದ್ದು, ಮುಂದೆ ಹೋಗಲು ವ್ಯವಸ್ಥೆಯೇ ಇಲ್ಲ. ಗುರುಕುಲದ ಈಗಿನ ದುಸ್ಥಿತಿ ಕಂಡು ಅಕ್ಕಪಕ್ಕದ ಸಂಗೀತ ಪ್ರಿಯರು ಮಮ್ಮಲ ಮರುಗುತ್ತಿದ್ದಾರೆ.ಸಮಾಧಿ ಸಂರಕ್ಷಣೆ ಆತಂಕ ಏಕೆ?
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ರಾಷ್ಟ್ರಮಟ್ಟದಲ್ಲಿ ಪಂಡಿತ ಭೀಮಸೇನ್ ಜೋಶಿ ಹಾಗೂ ಡಾ. ಗಂಗೂಬಾಯಿ ಅವರದು ಬಹುದೊಡ್ಡ ಹೆಸರು. ಜೋಶಿ ಅವರಿಗೆ ಭಾರತ ರತ್ನ ಲಭಿಸಿದ್ದರೆ, ಗಂಗೂಬಾಯಿ ಹಾನಗಲ್ಲ ಅವರಿಗೆ ಪದ್ಮವಿಭೂಷಣ ಲಭಿಸಿದೆ. ಹೀಗಾಗಿ ಧಾರವಾಡ ಜಿಲ್ಲೆ ಸಂಗೀತ ಕಾಶಿ ಎನಿಸಿದೆ. ಪಂಡಿತ ಭೀಮಸೇನ್ ಜೋಶಿ ಅವರ ಶಿಷ್ಯೆಯೂ ಆಗಿದ್ದ ಗಂಗೂಬಾಯಿ ಅವರು 2009ರ ಜು. 21ರಂದು ನಿಧನರಾದರು. ಬಳಿಕ ಅವರ ಸಮಾಧಿಯನ್ನು ಉಣಕಲ್ ಪ್ರದೇಶದಲ್ಲಿಯೇ ಮಾಡಲಾಗಿದ್ದು, 2011ರಲ್ಲಿ ಇದೇ ಪ್ರದೇಶದಲ್ಲಿ ಗುರುಕುಲ ಆರಂಭವಾಯಿತು. ಈಗ ಗುರುಕುಲ ಸಂಗೀತ ವಿವಿಗೆ ಸೇರಿರುವುದರಿಂದ ಮಳೆ-ಗಾಳಿಗೆ ಸಮಾಧಿ ಸಂರಕ್ಷಣೆ ಕುರಿತಂತೆ ಅವರ ಕುಟುಂಬಸ್ಥರು ಮತ್ತು ಶಿಷ್ಯವರ್ಗದವರಿಗೆ ಸಹಜವಾಗಿಯೇ ಆತಂಕ ಶುರುವಾಗಿದೆ.ಡಾ. ಗಂಗೂಬಾಯಿ ಹಾನಗಲ್ಲ ಅವರ ಸಮಾಧಿ ರಕ್ಷಣೆಗೆ ಈಗ ಜವಾಬ್ದಾರಿ ಹೊತ್ತಿರುವ ಸಂಗೀತ ವಿವಿದವರು ಬೇಗ ಕ್ರಮ ಕೈಗೊಳ್ಳಬೇಕು. ಸಂಗೀತ ವಿದೂಷಿ ಹೆಸರಿನಲ್ಲಿರುವ ಗುರುಕುಲ ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳ ಭವಿಷ್ಯವೂ ಇದರಲ್ಲಿ ಅಡಗಿದೆ ಎಂದು ಗಂಗೂಬಾಯಿ ಮೊಮ್ಮಗಳು ವೈಷ್ಣವಿ ಹಾನಗಲ್ಲ ಹೇಳಿದರು.