ಕೊಂಗಾಡಿಯಪ್ಪ ದೊಡ್ಡಬಳ್ಳಾಪುರದ ಗಾಂಧಿ!

KannadaprabhaNewsNetwork | Updated : Feb 23 2024, 01:46 AM IST

ಸಾರಾಂಶ

ದೊಡ್ಡಬಳ್ಳಾಪುರ: ಕೈಮಗ್ಗಗಳಲ್ಲಿ ದುಡಿಯುತ್ತಿದ್ದ ನೇಕಾರರಿಗೆ 1932ರಲ್ಲೇ ವಿದ್ಯುತ್ ಸೌಲಭ್ಯ ದೊರೆಯುವಂತೆ ಮಾಡಿ, ನೇಕಾರರ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಶ್ರಮಿಸಿದ ಕೊಂಗಾಡಿಯಪ್ಪ ದಾನಿಗಳ ನೆರವಿನಿಂದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಪಶು ವೈದ್ಯಶಾಲೆ ಇತ್ಯಾದಿಗಳನ್ನು ಪ್ರಾರಂಭಿಸಲು ನೆರವಾದರು. ಅವರ ಉದಾತ್ತ ಚಿಂತನೆಗಳು ಇಂದಿನ ಪೀಳಿಗೆಗೆ ದಾರಿದೀಪ ಎಂದು ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್‌ ಹೇಳಿದರು.

ದೊಡ್ಡಬಳ್ಳಾಪುರ: ಕೈಮಗ್ಗಗಳಲ್ಲಿ ದುಡಿಯುತ್ತಿದ್ದ ನೇಕಾರರಿಗೆ 1932ರಲ್ಲೇ ವಿದ್ಯುತ್ ಸೌಲಭ್ಯ ದೊರೆಯುವಂತೆ ಮಾಡಿ, ನೇಕಾರರ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಶ್ರಮಿಸಿದ ಕೊಂಗಾಡಿಯಪ್ಪ ದಾನಿಗಳ ನೆರವಿನಿಂದ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಪಶು ವೈದ್ಯಶಾಲೆ ಇತ್ಯಾದಿಗಳನ್ನು ಪ್ರಾರಂಭಿಸಲು ನೆರವಾದರು. ಅವರ ಉದಾತ್ತ ಚಿಂತನೆಗಳು ಇಂದಿನ ಪೀಳಿಗೆಗೆ ದಾರಿದೀಪ ಎಂದು ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್‌ ಹೇಳಿದರು.

ನಗರಸಭೆಯಲ್ಲಿ ದೊಡ್ಡಬಳ್ಳಾಪುರದ ಪುರಪಿತೃ, ಶಿಕ್ಷಣ-ಪರಿಸರ ಕಾಳಜಿಯ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ 164ನೇ ಜನ್ಮದಿನಾಚರಣೆ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಕೊಂಗಾಡಿಯಪ್ಪ ದೊಡ್ಡಬಳ್ಳಾಪುರದ ಗಾಂಧಿ ಇದ್ದಂತೆ. ಸ್ಥಳೀಯ ವಿಷಯಗಳನ್ನೇ ಕೇಂದ್ರೀಕರಿಸಿ ಪ್ರಗತಿಯ ಹೊಸ ಆಶೋತ್ತರಗಳನ್ನು ಪ್ರತಿಪಾದಿಸಿದವರು. ಅವರು, ಸ್ವಾತಂತ್ರ್ಯ ಹೋರಾಟದ ಭಾಗವಾಗದಿದ್ದರೂ ಗಾಂಧೀಜಿ ಪ್ರತಿಪಾದಿಸಿದ ಹಲವು ಚಿಂತನೆಗಳನ್ನು ವಸ್ತುನಿಷ್ಠವಾಗಿ ಜಾರಿಗೆ ತಂದವರು. ಕಾಯಕದಲ್ಲಿ ನಂಬಿಕೆ ಇಟ್ಟು, ಪುರೋಭಿವೃದ್ಧಿಗಾಗಿ ಶ್ರಮಿಸಿದ ಅವರಲ್ಲಿ ಹರಿಜನೋದ್ದಾರ, ಸ್ವಾವಲಂಬನೆ, ಕೈಗಾರಿಕಾ ಬೆಳವಣಿಗೆ, ಶೈಕ್ಷಣಿಕ ಮುನ್ನಡೆಯಂತಹ ಉದಾತ್ತ ಚಿಂತನೆಗಳಿದ್ದವು. ಅವುಗಳನ್ನು ನಿಸ್ವಾರ್ಥವಾಗಿ ಜಾರಿಗೆ ತರುವ ಮೂಲಕ ಊರಿನ ಬೆಳವಣಿಗೆಗೆ ಶ್ರಮಿಸಿದರು. ರಾಜನಿಷ್ಠೆ ಮತ್ತು ಪ್ರಜಾನಿಷ್ಠೆಯ ಧ್ಯೇಯಗಳು ಕೊಂಗಾಡಿಯಪ್ಪ ಅವರ ಬದುಕಿನ ಬಹುದೊಡ್ಡ ತತ್ವಗಳು ಎಂದರೆ ತಪ್ಪಾಗಲಾರದು ಎಂದರು.

ಕೊಂಗಾಡಿಯಪ್ಪ ಪ್ರಶಸ್ತಿ ಪ್ರದಾನ:

ಇದೇ ವೇಳೆ ಕೊಂಗಾಡಿಯಪ್ಪ ಅವರ ಶಿಷ್ಯರಲ್ಲಿ ಒಬ್ಬರಾದ ದೇವಾಂಗ ಮಂಡಲಿ ಮಾಜಿ ಅಧ್ಯಕ್ಷ ವಿ.ತಿಮ್ಮಶೆಟ್ಟಪ್ಪ, ನೇಕಾರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ.ಹೇಮಂತರಾಜು, ದೊಡ್ಡಬಳ್ಳಾಪುರದ ಬೆಳಕು ಕೃತಿಯ ಕರ್ತೃ, ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್, ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಅವರಿಗೆ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಮಾತನಾಡಿ, ಈ ವರ್ಷದಿಂದ ಕೊಂಗಾಡಿಯಪ್ಪ ಅವರ ಜನ್ಮದಿನಾಚರಣೆಯನ್ನು ನಗರಸಭೆ ವತಿಯಿಂದ ದೊಡ್ಡಬಳ್ಳಾಪುರ ಹಬ್ಬವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ನಗರಸಭೆ ಆಯುಕ್ತ ಪರಮೇಶ್, ಉಪಾಧ್ಯಕ್ಷೆ ಫರ್ಹಾನಾ ತಾಜ್, ನಗರಸಭಾ ಸದಸ್ಯ ಎಚ್.ಎಸ್.ಶಿವಶಂಕರ್, ಲಕ್ಷ್ಮೀಪತಿ, ನಾಗವೇಣಿ, ವತ್ಸಲ, ರೂಪಿಣಿ ಸೇರಿದಂತೆ ಹಲವು ನಗರಸಭಾ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

ಇದೇ ವೇಳೆ ಕೊಂಗಾಡಿಯಪ್ಪ ಅವರ ಕುರಿತು ಏರ್ಪಡಿಸಲಾಗಿದ್ದ ರಂಗೋಲಿ ಮತ್ತಿತರ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಬೆಳ್ಳಿ ಪಲ್ಲಕ್ಕಿ ಉತ್ಸವ:

ಮಾರುಕಟ್ಟೆ ಚೌಕದಲ್ಲಿರುವ ಕೊಂಗಾಡಿಯಪ್ಪ ಪುತ್ಥಳಿ ಮುಂಭಾಗದಿಂದ ಊರಿನ ಪ್ರಮುಖ ಬೀದಿಗಳಲ್ಲಿ ಕೊಂಗಾಡಿಯಪ್ಪ ಅವರ ಭಾವಚಿತ್ರವನ್ನು ಬೆಳ್ಳಿ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ವೀರಗಾಸೆ, ಗಾರುಡಿ ಗೊಂಬೆಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸಮಾಧಿ ಸ್ಥಳದಲ್ಲಿ ಪೂಜೆ:

ಇದಕ್ಕೂ ಮುನ್ನ ಇಲ್ಲಿನ ಕೊಂಗಾಡಿಯಪ್ಪ ಪುಣ್ಯಸ್ಥಳದಲ್ಲಿ ನಗರಸಭೆ ಹಾಗೂ ದೇವಾಂಗ ಮಂಡಲಿ ವತಿಯಿಂದ ಪೂಜಾ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ಧೀರಜ್ ಮುನಿರಾಜ್ ಸೇರಿದಂತೆ ನಗರಸಭೆಯ ಚುನಾಯಿತ ಪ್ರತಿನಿಧಿಗಳು, ದೇವಾಂಗ ಮಂಡಲಿ ಪದಾಧಿಕಾರಿಗಳು ಪಾಲ್ಗೊಂಡರು.

22ಕೆಡಿಬಿಪಿ1-

ದೊಡ್ಡಬಳ್ಳಾಪುರದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಅವರ 164ನೇ ಜನ್ಮದಿನಾಚರಣೆಯನ್ನು ನಗರಸಭೆ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

Share this article