ಸ್ವಾಂತಂತ್ರ್ಯ ಆಂದೋಲನ ಜನಾಂದೋಲನವಾಗಿಸಿದ ಗಾಂಧಿ

KannadaprabhaNewsNetwork |  
Published : Oct 03, 2025, 01:07 AM IST
2ಡಿಡಬ್ಲೂಡಿ4ಗಾಂಧಿ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತವು ವಾರ್ತಾ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿ  ಜಯಂತಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು.  | Kannada Prabha

ಸಾರಾಂಶ

ಉತ್ತರ ಭಾರತದಲ್ಲಿ ಪೇಟಾ ಹಾಕುವುದು ಸಾಮಾನ್ಯವಾಗಿತ್ತು, ಅದನ್ನು ಬ್ರಿಟಿಷರು ತೆಗೆದು ಹಾಕಿದರು. ಅನಂತರದಲ್ಲಿ ಗಾಂಧೀಜಿ ಟೋಪಿಗೆ ಹೆಚ್ಚಿನ ಮಹತ್ವ ತಂದುಕೊಟ್ಟರು. ನಂತರದ ದಿನಗಳಲ್ಲಿ ಗಾಂಧಿ ಟೋಪಿ ಎಂದು ಖ್ಯಾತಿ ಪಡೆದುಕೊಂಡಿತು.

ಧಾರವಾಡ:

ಸ್ವಾತಂತ್ರ್ಯದ ಆಂದೋಲನವನ್ನು ಜನಾಂದೋಲವಾಗಿ ಪರಿವರ್ತಿಸಿ, ಜನ ಸಾಮಾನ್ಯರಿಂದ ಹೋರಾಟ ನಡೆಸಿದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಅನೇಕ ಸತ್ಯಾಗ್ರಹಗಳನ್ನು ಜನಾಂದೋಲದಿಂದ ನಡೆಸಿದ ಕೀರ್ತಿ ಮಹಾತ್ಮ ಗಾಂಧೀಜಿಗೆ ಸಲ್ಲುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿಯ ಹೊಸ ಬಸ್ ನಿಲ್ದಾಣದ ಹತ್ತಿರವಿರುವ ನೂತನ ಗಾಂಧಿ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತವು ವಾರ್ತಾ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ 156ನೇ ಜಯಂತಿಯಲ್ಲಿ ಮಾತನಾಡಿದ ಅವರು, ಉತ್ತರ ಭಾರತದಲ್ಲಿ ಪೇಟಾ ಹಾಕುವುದು ಸಾಮಾನ್ಯವಾಗಿತ್ತು, ಅದನ್ನು ಬ್ರಿಟಿಷರು ತೆಗೆದು ಹಾಕಿದರು. ಅನಂತರದಲ್ಲಿ ಗಾಂಧೀಜಿ ಟೋಪಿಗೆ ಹೆಚ್ಚಿನ ಮಹತ್ವ ತಂದುಕೊಟ್ಟರು. ನಂತರದ ದಿನಗಳಲ್ಲಿ ಗಾಂಧಿ ಟೋಪಿ ಎಂದು ಖ್ಯಾತಿ ಪಡೆದುಕೊಂಡಿತು ಎಂದು ಗಾಂಧಿ ಟೋಪಿ ಬಗ್ಗೆ ತಿಳಿಸಿದರು.

ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದರು. ತಾಷ್ಕೆಂಟ್ ಒಪ್ಪಂದದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಗಾಂಧೀಜಿ ಸತ್ಯ, ಸ್ವಚ್ಛತೆ ಮತ್ತು ಗ್ರಾಮ ಸ್ವರಾಜ್ಯದ ಸಂಕಲ್ಪಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ನಡೆದ ಅವರ ಸತ್ಯಾಗ್ರಹ ಮನೋಭಾವನೆ ಮೈಗೂಡಿಸಿಕೊಳ್ಳಬೇಕು ಎಂದ ಅವರು, ಗ್ರಾಮ ಸ್ವರಾಜ್ಯದ ಸಂಕಲ್ಪ ಹಾಗೂ ಅಧಿಕಾರ ವೀಕೇಂದ್ರಿಕರಣ ವ್ಯವಸ್ಥೆಗೆ ಬುನಾದಿ ಹಾಕಿದರು ಎಂದು ಹೇಳಿದರು.

ಜಿಪಂ ಸಿಇಒ ಭುವನೇಶ ಪಾಟೀಲ ಹಾಗೂ ಸಿದ್ಧವೀರ ಸತ್ಸಂಗದ ಅಧ್ಯಕ್ಷ ಡಾ. ನಿತಿನ್‌ಚಂದ್ರ ಹತ್ತಿಕಾಳ ಮಾತನಾಡಿದರು. ವಿವಿಧ ಧರ್ಮಗುರುಗಳಾದ ಡೇವಿಡ್, ಹಫೀಜ್ ಖಾದ್ರಿ ಮತ್ತು ಮಹೇಶ ಭಟ್ ಸರ್ವಧರ್ಮ ಪ್ರಾರ್ಥನೆ ಸಲ್ಲಿಸಿದರು. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು. ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಹುಡಾ ಅಧ್ಯಕ್ಷ ಶಾಕೀರ್ ಸನದಿ, ಮಾಜಿ ಸಂಸದ ಐ.ಜಿ. ಸನದಿ, ಎಸ್ಪಿ ಗುಂಜನ್ ಆರ್ಯ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಡಿಡಿಪಿಐ ಎಸ್.ಎಸ್. ಕೆಳದಿಮಠ, ಡಾ. ಸಂಜೀವ ಕುಲಕರ್ಣಿ, ಡಾ. ರಾಜೇಂದ್ರ ಪೊದ್ದಾರ ಇದ್ದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ (ಪ್ರ) ಡಾ. ಎಸ್.ಎಂ. ಹಿರೇಮಠ ಸ್ವಾಗತಿಸಿದರು.

ಭಾರ್ಗವಿ ಕುಲಕರ್ಣಿ ಮತ್ತು ತಂಡದವರು ನಾಡಗೀತೆ, ಗಾಂಧಿ ಭಜನೆಯನ್ನು ಪ್ರಸ್ತುತಪಡಿಸಿದರು. ಶಶಿರೇಖಾ ಚಕ್ರಸಾಲಿ ಅತಿಥಿ ಪರಿಚಯಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ