ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಬ್ರಿಟಿಷರನ್ನು ದೇಶದಿಂದ ಹೊಡೆದೊಡಿಸಿ, ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಗಾಂಧೀಜಿ ಅವರು ದೇಶದ ಉದ್ದಗಲಕ್ಕೂ ವ್ಯಾಪಿಸಿರುವ ನೇಕಾರರಲ್ಲಿ ದೇಶಪ್ರೇಮ ಬಿತ್ತಿ ಅವರನ್ನೂ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿದ್ದು ಅನನ್ಯ ಎಂದು ಕೋಟೆಕಲ್ ಪಿಕೆಪಿಎಸ್ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.ತಾಲೂಕಿನ ಕೋಟೆಕಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಅಧ್ಯಕ್ಷ ಹನಮಂತ ಮಾವಿನಮರದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪಟ್ಟಣದಲ್ಲಿ ನೂತನವಾಗಿ ಸ್ಥಾಪಿಸಿರುವ ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರದಲ್ಲಿ ಹಮ್ಮಿಕೊಂಡ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗಾಂಧೀಜಿಯವರು ಸ್ವಾತಂತ್ರ್ಯ ಚಳವಳಿಗಳಲ್ಲಿ ಭಾಗಿಯಾದ ಸಂದರ್ಭದಲ್ಲಿ ನೇಕಾರರನ್ನು ಒಟ್ಟುಗೂಡಿಸಿ ಅವರನ್ನೂ ಒಳಗೊಳ್ಳುವಂತೆ ಮಾಡಿದರು. ಹತ್ತಿ ಮತ್ತು ನೂಲು ಚರಕದ ಅಸ್ಮಿತೆಗಳು. ರೈತ ಬೆಳೆವ ಹತ್ತಿಗೆ ಒಂದು ಬೆಲೆ, ಅಸ್ಥಿತ್ವಗಳು ಧಕ್ಕಿದ್ದು ಗಾಂಧೀಜಿಯವರ ನೂಲುವಿಕೆಯ ಸಂಕೇತದಿಂದ. ಗಾಂಧೀಜಿಯವರು ಗ್ರಾಮೀಣ ವೃತ್ತಿ ಮತ್ತು ಉಪವೃತ್ತಿ ಕೌಶಲ್ಯಕ್ಕೆ ನೀಡಿದ ಕೊಡುಗೆ ಸ್ವಾತಂತ್ರ್ಯದಷ್ಟೇ ಮಹತ್ವದ್ದಾಗಿತ್ತು. ಗ್ರಾಮೀಣ ವೃತಿ ಮತ್ತು ಉಪವೃತ್ತಿಗೆ ಅವರು ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಸ್ಮರಿಸಿದರು.ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ವ್ಯವಸ್ಥಾಪಕ ಚಂದ್ರಮೋಹನ ಕಲ್ಯಾಣಿ, ಸಂಘದ ನಿರ್ದೇಶಕ ಮಂಡಳಿ ಹಾಜರಿದ್ದರು. ತಾಲೂಕಿನ ಕೋಟೆಕಲ್ ಗ್ರಾಮ ಪಂಚಾಯತಿಯಲ್ಲಿ 78ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಅಧ್ಯಕ್ಷೆ ಪಾರ್ವತಿ ಹುಚ್ಚಪ್ಪ ಮೇಟಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪಿಡಿಒ ಆರತಿ ಕ್ಷತ್ರಿ, ರಮೇಶ ಅರಮನಿ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು.ಧ್ವಜಾರೋಹಣ ಸಂದರ್ಭದಲ್ಲಿ ನೇಕಾರ ಕಾರ್ಮಿಕರು, ಸಂಘದ ಸದಸ್ಯರು, ನೇಕಾರರ ಉತ್ಪಾದಕರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಅಯೋದಿ ಪಾಲ್ಗೊಂಡಿದ್ದರು.ಪುರಸಭೆಯಲ್ಲಿ ಧ್ವಜಾರೋಹಣ: ಪಟ್ಟಣದ ವಿವಿಧ ಇಲಾಖೆ, ಸಂಘ-ಸಂಸ್ಥೆ, ಶಾಲಾ-ಕಾಲೇಜುಗಳಲ್ಲಿ 78 ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣದ ಪುರಸಭೆಯ ಧ್ವಜಾರೋಹಣವನ್ನು ಮುಖ್ಯಾಧಿಕಾರಿ ಎ.ಎಚ್. ಮುಜಾವರ್ ನೆರವೇರಿಸಿದರು. ಪುರಸಭೆ ಮ್ಯಾನೇಜರ್ ಮುದ್ದೇಬಿಹಾಳ ಸೇರಿದಂತೆ ಸಿಬ್ಬಂದಿ ಹಾಜರಿದ್ದರು. ಇಲ್ಲಿನ ಪಶು ಇಲಾಖೆಯ ಕಚೇರಿಯಲ್ಲಿ ಜರುಗಿದ ಧ್ವಜಾರೋಹಣವನ್ನು ಪಶು ಇಲಾಖಾ ಅಧಿಕಾರಿ ಡಾ. ಸುರೇಶ ಜಾಧವ ನೆರವೇರಿಸಿದರು. ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು. ಪಬ್ಲಿಕ್ ಶಾಲೆಯಲ್ಲಿ ಧ್ವಜಾರೋಹಣ:
ನೆಹರು ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳಬಸು ಶೆಟ್ಟರ್ ಧ್ವಜಾರೋಹಣ ನೆರವೇರಿಸಿದರು. ಶಾಲೆಯ ಅಧ್ಯಕ್ಷ ಮಹಾಂತಯ್ಯ ಸರಗಣಾಚಾರಿ, ಉಪಾಧ್ಯಕ್ಷ ವಿರೇಶ ಚಿಂದಿ, ರಂಗಪ್ಪ ಅಮರನ್ನವರ, ಕಾಲೇಜಿನ ಪ್ರಾಂಶುಪಾಲ ಮುತ್ತುರಾಜ ಕುಬಕಡ್ಡಿ ಉಪಸ್ಥಿತರಿದ್ದರು. ಪ್ರಥಮ ಬಾರಿಗೆ ಶಾಲೆಯ ವಿದ್ಯಾರ್ಥಿಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಕವಾಯತವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆಗಳು, ನೃತ್ಯ ಮತ್ತು ನಾಟಕ ಪ್ರದರ್ಶನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.