ಸೇವೆ ಮೂಲಕ ಜನರ ಮನಸ್ಸು ಗೆದ್ದ ಗಣೇಶ್: ಶಿವಮಾದಯ್ಯ

KannadaprabhaNewsNetwork | Published : Aug 15, 2024 1:53 AM

ಸಾರಾಂಶ

ಗ್ರಾಮಾಂತರ ಠಾಣೆಯ ಪಿಎಸ್‌ಐ ಗಣೇಶ್ ಅವರು ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸುವ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ, ಕೆಲವರು ಇಲ್ಲಿಂದ ಬೇಗ ವರ್ಗವಾಗಿ ತೆರಳಿದರೆ ಸಾಕು ಎನ್ನುವವರ ಮಧ್ಯೆ ಗಣೇಶ್ ನಿಜಕ್ಕೂ ಪ್ರಶಂಸಾರ್ಹರು, ಅವರ ಕೆಲಸ ನಿಜಕ್ಕೂ ಮೆಚ್ಚುವಂತಾದ್ದು ಎಂದು ವೃತ್ತನಿರೀಕ್ಷಕ ಶಿವಮಾದಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಗ್ರಾಮಾಂತರ ಠಾಣೆಯ ಪಿಎಸ್‌ಐ ಗಣೇಶ್ ಅವರು ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸುವ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ, ಕೆಲವರು ಇಲ್ಲಿಂದ ಬೇಗ ವರ್ಗವಾಗಿ ತೆರಳಿದರೆ ಸಾಕು ಎನ್ನುವವರ ಮಧ್ಯೆ ಗಣೇಶ್ ನಿಜಕ್ಕೂ ಪ್ರಶಂಸಾರ್ಹರು, ಅವರ ಕೆಲಸ ನಿಜಕ್ಕೂ ಮೆಚ್ಚುವಂತಾದ್ದು ಎಂದು ವೃತ್ತನಿರೀಕ್ಷಕ ಶಿವಮಾದಯ್ಯ ಹೇಳಿದರು.

ವರ್ಗಾವಣೆಗೊಂಡ ಪಿಎಸ್‌ಐ ಗಣೇಶ್ ಅವರಿಗೆ ಬೀಳ್ಕೂಡುಗೆ ಮತ್ತು ನೂತನ ಪಿಎಸ್‌ಐ ಸುಪ್ರೀತ್ ಅವರಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಗಣೇಶ್ ಅವರಿಗೆ ನೀಡಿದ ಸಹಕಾರವನ್ನೆ ಸುಪ್ರೀತ್ ಅವರಿಗೆ ಜನತೆ ಹಾಗೂ ಪೊಲೀಸ್ ಸಿಬ್ಬಂದಿ ನೀಡಬೇಕು. ಅದೇ ರೀತಿಯಲ್ಲಿ ಪಟ್ಟಣ ಠಾಣೆಗೆ ನೂತನವಾಗಿ ಆಗಮಿಸಿದ ಪಿಎಸ್‌ಐ ವರ್ಷ ಅವರಿಗೂ ನೀಡಬೇಕು ಎಂದರು. ನೂತನ ಪಿಎಸ್‌ಐ ಸುಪ್ರೀತ್ ಮಾತನಾಡಿ, ಗಣೇಶ್ ಅವರಂತೆ ಉತ್ತಮ ಸೇವೆ ಮಾಡಲು ನನಗೆ ಎಲ್ಲರೂ ಅವಕಾಶ ನೀಡಬೇಕು. ಎಲ್ಲರ ಪ್ರೀತಿ ವಿಶ್ವಾಸದೊಂದಿಗೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗುವೆ ಎಂದು ಹೇಳಿದರು. ವರ್ಗಾವಣೆಗೊಂಡ ಪಿಎಸ್‌ಐ ಗಣೇಶ್ ಮಾತನಾಡಿ, ಕೊಳ್ಳೇಗಾಲ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಜನರು ಬುದ್ಧಿ ಜೀವಿಗಳು, ಪ್ರಜ್ಞಾವಂತರು. ಅವರೆಲ್ಲರ ಸಹಕಾರದಿಂದಾಗಿ ನಾನು 19 ತಿಂಗಳು ಪಿಎಸೈ ಆಗಿ ಸೇವೆ ಸಲ್ಲಿಸಿದೆ. ನಿಜಕ್ಕೂ ನಾನು ಕೊಳ್ಳೇಗಾಲ ಪ್ರದೇಶದ ಜನರನ್ನು ಮರೆಯುವಂತಿಲ್ಲ. ಕೊಳ್ಳೇಗಾಲ ಎಂದರೆ ಮಾಟ ಮಂತ್ರ ಎಂದು ಕೆಲವರು ಹೇಳಿದರು, ಅದನ್ನೆಲ್ಲ ನಾನು ನಂಬಲಿಲ್ಲ, ನಿಜಕ್ಕೂ ಹೇಳುವೆ ಶೇ.98ರಷ್ಟು ಮಂದಿ ಇಲ್ಲಿನ ಜನತೆ ಒಳ್ಳೆಯವರು ಎಂದರು. ಪ್ರಾರಂಭದಲ್ಲಿ ನನ್ನ ವಿರುದ್ಧ ಪಿತೂರಿ ನಡೆಸಲಾಯಿತು. ಅವೆಲ್ಲವೂ ನಿಲ್ಲಲಿಲ್ಲ, ಮುಳ್ಳೂರು ಮತ್ತು ಹೊಂಡರಬಾಳು ಪ್ರಕರಣಗಳು ನನಗೆ ಜಟಿಲ ಮಾತ್ರವಲ್ಲ ಸವಾಲಾಗಿತ್ತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅದೆಲ್ಲವನ್ನು ಬಗೆಹರಿಸಿದೆ. ಇಲ್ಲಿನ ಜನರ ಸಹಕಾರ ನಾನೆಂದಿಗೂ ಮರೆಯಲಾರೆ ಎಂದರು. ಇದೇ ವೇಳೆ ವರ್ಗಾವಣೆಗೊಂಡಿದ್ದ ಹೆಡ್‌ಕಾನ್ಸ್‌ಟೇಬಲ್ ಮಹೇಶ್, ಕಾನ್ಸ್‌ಟೇಬಲ್ ವಿರೇಂದ್ರ, ಉಮೇಶ್, ಜಯಪ್ಪ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ಜಾಗತಿಕ ಲಿಂಗಾಯಿತ ಮಹಾಸಭೆ ಅಧ್ಯಕ್ಷ ಬಿಂದು ಲೋಕೇಶ್ ಮತ್ತು ಪದಾಧಿಕಾರಿಗಳು, ಲಾರಿ ಚಾಲಕರ, ಮಾಲೀಕರ ಸಂಘದ ಗುಂಡೇಗಾಲ ಬಸಪ್ಪ, ಬಸವೇಶ್ವರ ಹೋಟೆಲ್ ಮಾಲೀಕ ಪರಶಿವಮೂರ್ತಿ ಸೇರಿದಂತೆ ಹಲವರು ಗಣೇಶ್ ಅವರಿಗೆ ಗೌರವ ಸಲ್ಲಿಸಿದರು.

Share this article