ಕನ್ನಡಪ್ರಭ ವಾರ್ತೆ ತುಮಕೂರು
ಕಲ್ಪತರು ನಾಡಿಗೆ ಶೈಕ್ಷಣಿಕ ನಗರ ಎಂದು ಹೆಸರು ಬರಲು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಶಿಕ್ಷಣ ಭೀಷ್ಮ ಡಾ. ಎಚ್. ಗಂಗಾಧರಯ್ಯ ಪಾಲಿದೆ. ಅದೇ ರೀತಿ ತುಮಕೂರಿಗೆ 2004 ರಲ್ಲಿ ವಿಶ್ವವಿದ್ಯಾಲಯ ತಂದ ಕೀರ್ತಿ ಇಂದಿನ ಗೃಹ ಮಂತ್ರಿ ಡಾ.ಜಿ. ಪರಮೇಶ್ವರ್ ಅವರಿಗೆ ಸಲ್ಲುತ್ತದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.ನಗರದ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಡಾ.ಎಚ್.ಎಂ. ಗಂಗಾಧರಯ್ಯ ಸಭಾಂಗಣದಲ್ಲಿ ನಡೆದ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್‌ರಿಬ್ಬನ್, ಸ್ಕೌಟ್ಸ್ಅಂಡ್‌ಗೈಡ್ಸ್ ಚಟುವಟಿಕೆಗಳ ಗಾನ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತನ್ನದೆ ವೈಶಿಷ್ಟ್ಯಗಳನ್ನು ಹೊಂದಿರುವ ತುಮಕೂರು ಅನೇಕ ವಿದ್ಯಾ ಸಂಸ್ಥೆಗಳು, ತಂತ್ರಜ್ಞರು, ವಿಜ್ಞಾನಿಗಳು, ಸಾಹಿತ್ಯ, ಕಲೆ-ಸಾಂಸ್ಕೃತಿಕ ಸಂಪ್ರದಾಯಕ್ಕೆ ಒತ್ತು ನೀಡಿದೆ. ನಡೆದಾಡುವ ದೇವರೆನಿಸಿದ ಡಾ. ಶಿವಕುಮಾರ ಶ್ರೀಗಳಂತ ಅನೇಕ ಮಹಾನ್ ನಾಯಕರನ್ನು ಕೊಡುಗೆಯಾಗಿ ಈ ನಾಡಿಗೆ ನೀಡಿದೆ ಎಂದು ವೆಂಕಟೇಶ್ವರಲು ಹೇಳಿದರು.ರಾಜ್ಯದಲ್ಲಿ ತುಮಕೂರು ವಿಭಿನ್ನ ರೀತಿಯ ವಿಶೇಷ ಸ್ಥಾನ ಮಾನ ಹೊಂದಿದ್ದು, ಇಂಡಸ್ಟ್ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ ಉತ್ಪಾದನಾ ಘಟಕಗಳು ಇವೆ. ಕಲ್ಪತರು ನಾಡಿನ ಕೊಬ್ಬರಿಗೆ ದೇಶ ವಿದೇಶಗಳಲ್ಲಿ ವಿಶೇಷ ಬೇಡಿಕೆ ಇದೆ. ಅಡಿಕೆಯಿಂದ ಟೀ ಮಾಡಬಹುದು ಎಂದು ತುಮಕೂರಿನ ಯುವಕನೊಬ್ಬ ನಿರೂಪಿಸಿದ್ದಾನೆ ಎಂದು ನುಡಿದರು.
ಬೆಂಗಳೂರಿನ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಎ. ಅನ್ನದಾನೇಶ್ ಮಾತನಾಡಿ, ಹಿಂದಿನ ವಿವಿಗಳಲ್ಲಿ ಸಾಮಾನ್ಯಜ್ಞಾನ ಇತ್ತು, ಇಂದಿನ ವಿವಿಯಲ್ಲಿ ಕೌಶಲ್ಯ ಇದೆ. 12 ನೇಶತಮಾದಲ್ಲಿ ಇವೆರಡು ವಿಚಾರಗಳು ಜೊತೆಗೆ ಇದ್ದವು. ಆದರೆ ಇಂದು ಕೌಶಲ್ಯ ತಮ್ಮದೇ ಆದ ವಿಚಾರ ವಂತಿಕೆಯನ್ನ ಹುಟ್ಟಿ ಹಾಕಿವೆ ಎಂದರು.ಸಾಹಿತ್ಯದಲ್ಲಿ ಪ್ರೀತಿ ಇರಬೇಕು. ಕಾವ್ಯ-ದ್ರವ್ಯದಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಆಸಕ್ತಿಯಿಲ್ಲ. ಹಳೆಯ ಕಾವ್ಯಗಳ ಪದ ಪಾಂಡಿತ್ಯ ಇಂದಿನ ಕಾವ್ಯಗಳಲ್ಲಿ ಇಲ್ಲಾ. ಇಂದು ದ್ವೇಷದ ಕವಿತೆಗಳು ಹೆಚ್ಚಿವೆ. ನೋವಿನಿಂದ ಹುಟ್ಟಿದ ಹಲವು ಕಾವ್ಯ ಕವನಗಳಿಗೆ ಸಾವಿಲ್ಲ. ಕವಿತೆಗೆ ಬಳಸುವ ಸಲಕರಣೆಗಳು ಇಂದು ನಾಶವಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.
ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾ ಡಾ.ಪಿ. ಹೇಮಾಲತಾ, ಸಹಾಯಕ ಆಡಳಿತಾಧಿಕಾರಿ ಕೆ.ಎಚ್. ಖಲಂದರ್ ಪಾಷ, ಕುಣಿಗಲ್‌ನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಂ.ಗೋವಿಂದರಾಯ, ಚೆನ್ನರಾಯಪಟ್ಟಣದ ಚಿತ್ರಕಲಾವಿದ ಜಿ.ಎಸ್. ಶಿವಶಂಕರಪ್ಪ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ರಮೇಶ್ ಮಣ್ಣೆ, ಪ್ರೊ. ಹನುಮಂತರಾಯಪ್ಪ, ಗಮಕಿಗಳಾದ ಸೀತಾಲಕ್ಷೀ ಶರ್ಮಾ, ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.ಮಧ್ಯಾಹ್ನದ ನಂತರ ಅಂತರ್ ಕಾಲೇಜು ಮಟ್ಟದ ವಿವಿಧ ಕ್ರೀಡೆ, ಚಿತ್ರಕಲೆ, ಸಾಹಿತ್ಯ ಕವನ ವಾಚನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆದವು.ಕೋಟ್.........
30 ವರ್ಷದಿಂದ ವಿದ್ಯಾರ್ಥಿಗಳ ನಡುವೆ ಪಾಠ, ಪ್ರವಚನ ಜೊತೆಗೆ ಇದ್ದೇನೆ. ವಿದ್ಯಾರ್ಥಿಗಳಿಗೆ ಉದ್ಯೋಗಗಿಟ್ಟಿಸುವ ಸುಲಭವಾದ ಮಾರ್ಗವಿದ್ದರೂ ಹಲವು ಸವಾಲುಗಳು ಇಂದು ಎದುರಾಗುತ್ತಿವೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಇರಬೇಕು. ಜ್ಞಾನರ್ಜನೆ ಜೊತೆಗೆ ಇಂದು ಉದ್ಯೋಗ ಪಡೆದುಕೊಳ್ಳಲು ಒತ್ತು ನೀಡಿ, ಆಸಕ್ತರಾಗಿ ಓದಿದಾಗ ಎಂಥ ಕೆಲಸವು ಕೂಡಾ ಸುಲಭವಾಗಿ ಪಡೆಯಬಹುದು. ಸಾಮಾನ್ಯನಿಗೆ ಇರುವ ತಾಳ್ಮೆ ಈಗೀನ ವಿದ್ಯಾರ್ಥಿಗಳಿಗೆ ಇಲ್ಲ. ಮಾನಸಿಕ ಆರೋಗ್ಯ ವಿದ್ಯಾರ್ಥಿಗಳಿಗೆ ಬಹು ಮುಖ್ಯವಾಗಿದೆ.ಪ್ರೊ.ಎಂ. ವೆಂಕಟೇಶ್ವರಲು, ತುಮಕೂರು ವಿವಿ ಕುಲಪತಿ