ವಿಜೃಂಭಣೆಯಿಂದ ಜರುಗಿದ ಗಂಗಾಧರೇಶ್ವರ ರಥೋತ್ಸವ

KannadaprabhaNewsNetwork | Published : Mar 10, 2024 1:33 AM

ಸಾರಾಂಶ

ತಾಲೂಕಿನ ಬಿಳಿಗಿರಿರಂಗನಬೆಟ್ಟದ ಉದ್ಭವಮೂರ್ತಿ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ನಡೆಯಿತು. ಬೆಳಗ್ಗೆಯಿಂದಲೆ ದೇವಾಲಯದಲ್ಲಿ ಸ್ವಯಂ ಉದ್ಭವಮೂರ್ತಿ ಗಂಗಾಧರೇಶ್ವರಸ್ವಾಮಿಗೆ ವಿಶೇಷ ಪೂಜೆ ಮತ್ತು ಅಭಿಷೇಕ, ಅರ್ಚನೆ ಸೇರಿದಂತೆ ದೇವತಾ ಕಾರ್ಯಗಳು ಜರುಗಿದವು.

ಕನ್ನಡಪ್ರಭ ವಾರ್ತೆ ಯಳಂದೂರುತಾಲೂಕಿನ ಬಿಳಿಗಿರಿರಂಗನಬೆಟ್ಟದ ಉದ್ಭವಮೂರ್ತಿ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ನಡೆಯಿತು. ಬೆಳಗ್ಗೆಯಿಂದಲೆ ದೇವಾಲಯದಲ್ಲಿ ಸ್ವಯಂ ಉದ್ಭವಮೂರ್ತಿ ಗಂಗಾಧರೇಶ್ವರಸ್ವಾಮಿಗೆ ವಿಶೇಷ ಪೂಜೆ ಮತ್ತು ಅಭಿಷೇಕ, ಅರ್ಚನೆ ಸೇರಿದಂತೆ ದೇವತಾ ಕಾರ್ಯಗಳು ಜರುಗಿದವು. ಬೆಳಗ್ಗೆ 11-10 ರಿಂದ 11-20 ರ ಸಮಯದಲ್ಲಿ ಶುಭ ವೃಷಭ ಲಗ್ನದಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಶೀ ಜಯಚಾಮರಾಜ ಒಡೆಯರ್ ಬಹದ್ದೂರ ಸ್ವಾಮಿಗೆ ಒಪ್ಪಿಸಿರುವ ಸ್ವರ್ಣ ಕೊಳಗಧಾರಣೆ ಮಾಡಲಾಯಿತು. ನಂತರ ಮಧ್ಯಾಹ್ನ 12-26 ರಿಂದ 12-48 ಗಂಟೆ ಒಳಗೆ ಸಲ್ಲುವ ಶುಭ ಮಿಥುನ ಲಗ್ನದ ಶುಭ ಕನ್ಯಾ ಬುಧ ನವಾಂಶದ ಶುಭ ಮೂಹೂರ್ತದಲ್ಲಿ ರಥಾರೋಹಣಕ್ಕೆ ದೇವಾಲಯದ ಪ್ರಧಾನ ಅರ್ಚಕ ರಂಗಣ್ಣ ಪೂಜೆ ಸಲ್ಲಿಸದ ಬಳಿಕ ಶಾಸಕ ಎ. ಆರ್. ಕೃಷ್ಣಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಹಣ್ಣು ಜವಾನ ಎಸೆದ ಭಕ್ತರು:

ಸೋಲಿಗರ ಆರಾಧ್ಯ ದೈವ ಶ್ರೀ ಉದ್ಭವಮೂರ್ತಿ ಗಂಗಾಧರೇಶ್ವರ ಸ್ವಾಮಿ ರಥೋತ್ಸವಕ್ಕೆ ಸೋಲಿಗರು ಕಾಡು ಜಾತಿ ಹಣ್ಣು ಹೂವುಗಳನ್ನು ಎಸೆದು ತಮ್ಮ ಭಕ್ತಿಯ ಪರಿಕಾಷ್ಠೆ ಮೆರೆದರು. ಸಾವಿರಾರು ಭಕ್ತರು ಆಗಮಿಸಿ ಗಂಗಾಧರೇಶ್ವರನಿಗೆ ಬಾಳೆ, ಕಬ್ಬು, ರಾಗಿ, ಜೋಳ, ಬತ್ತ ಸೇರಿದಂತೆ ವಿವಿಧ ರೀತಿ ದವಸ ಧಾನ್ಯಗಳನ್ನು ತೇರಿಗೆ ಎಸೆದು ಉತ್ತಮ ಮಳೆ, ಬೆಳೆ ಬರಲಿ ಎಂದು ದೇವರಲ್ಲಿ ಪಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಜಯಪ್ರಕಾಶ್, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಕಾರ್ಯನಿರ್ವಾಹಕಾಧಿಕಾರಿ ಮೋಹನ್ ಕುಮಾರ್, ಉಪ ತಹಸಿಲ್ದಾರ್ ಪುಷ್ಪ, ಪಾರುಪತ್ತಿಗಾರ ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರು, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜೆ.ಯೋಗೇಶ್, ಕೇತಮ್ಮ , ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್, ಆಪ್ತ ಕಾರ್ಯದರ್ಶಿ ಚೇತನ್, ಅಂಬಳೆ ನವೀನ್, ಹಾಗೂ ಇತರರು ಉಪಸ್ಥಿತರಿದ್ದರು.

Share this article