ಉಡುಪಿ: ಬೈಂದೂರು ವಿಧಾನ ಸಭಾ ಕ್ಷೇತ್ರದ ವಿವಿಧ ಸಮಸ್ಯೆಗಳ ಬಗ್ಗೆ ಶಾಸಕ ಗುರುರಾಜ್ ಗಂಟಿಹೊಳೆ ಅವರು ಕ್ಷೇತ್ರದ ಪ್ರಮುಖರೊಂದಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ, ಪರಿಹಾರಕ್ಕೆ ಮನವಿ ಮಾಡಿದರು.ಮುಖ್ಯವಾಗಿ ಜಡ್ಕಲ್ ಹಾಗೂ ಮುದೂರು ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ಲಾಟಿಂಗ್ ಸಮಸ್ಯೆಯಿಂದ ನೂರಾರು ಕುಟುಂಬಗಳು ತಮ್ಮ ಜಮೀನಿನ ಮಾಲಿಕತ್ವದ ದಾಖಲೆ ಪಡೆಯಲಾಗದೇ ತೊಂದರೆ ಅನುಭವಿಸುತಿದ್ದಾರೆ. ಇದನ್ನು ಪರಿಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ, ಸದ್ಯದಲ್ಲಿಯೇ ಭಾದಿತ ರೈತರನ್ನು ಸೇರಿಸಿ ಗ್ರಾಮದಲ್ಲಿಯೇ ಉಪವಿಭಾಗಾಧಿಕಾರಿಗಳು, ಸರ್ವೇ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಸೂಕ್ತ ಕಾರ್ಯ ಯೋಜನೆ ಹಾಕಿಕೊಳ್ಳುವುದಾಗಿ ಭರವಸೆ ನೀಡಿದರು.ಜನರಿಗೆ ಮಾಹಿತಿ ಬೇಕು:ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆ.ಪಿ.ಸಿ.ಎಲ್.) ವತಿಯಿಂದ ಹೊಸಂಗಡಿ ಭಾಗದಲ್ಲಿ ವಾರಾಹಿ ನದಿಯಲ್ಲಿ ಲಭ್ಯ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸ್ಥಳೀಯ ಜನರಿಗೆ ಸೂಕ್ತ ಮಾಹಿತಿ ನೀಡಲಾಗಿಲ್ಲ. ಸ್ಥಳೀಯರನ್ನು ಕತ್ತಲೆಯಲ್ಲಿಟ್ಟು ಯಾವುದೇ ಯೋಜನೆಯನ್ನು ಅನುಷ್ಠಾನ ಮಾಡಬಾರದು ಎಂದು ಶಾಸಕರು ಒತ್ತಾಯಿಸಿದರು.
ಆಂಬುಲೆನ್ಸ್ ಸೇವೆ ಬೇಕು:ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತುರ್ತು ಸೇವೆಗೆ ಲಭ್ಯವಿದ್ದ 108 ಆಂಬುಲೆನ್ಸ್ ಈಗ ಚಾಲಕರಿಲ್ಲದೆ ಸ್ಥಗಿತಗೊಂಡಿದೆ. ತಮ್ಮ ಕ್ಷೇತ್ರದ ಇತರ ಕಡೆಯೂ 24 ಗಂಟೆ ಸಮರ್ಪಕ ಆಂಬುಲೆನ್ಸ್ ಸೇವೆ ಇಲ್ಲದಾಗಿದೆ. ಇದರಿಂದ ಸಾರ್ವಜನಿಕರ ತುರ್ತು ಸೇವೆ ಸಿಗುತ್ತಿಲ್ಲ, ಕೂಡಲೇ ಸಿದ್ದಾಪುರ ಮತ್ತು ಇತರ ಪ್ರಾ. ಆ. ಕೇಂದ್ರದ ಆಂಬುಲೆನ್ಸ್ ಸೇವೆ ಸರಿಪಡಿಸಬೇಕು ಎಂದು ಶಾಸಕರು ಒತ್ತಾಯಿಸಿದರು.ಸರ್ಕಾರಿ ಬಸ್ ಬೇಕು:ಜಡ್ಕಲ್ ಹಾಗೂ ಮುದೂರು ಗ್ರಾಮಗಳ ಜನರು ತಾಲೂಕು ಕೇಂದ್ರಗಳಿಗೆ ತೆರಳಲು ಬಸ್ಸುಗಳಲ್ಲಿದೇ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಗ್ರಾಮಗಳು ಮತ್ತು ಹೊಸಂಗಡಿ, ಸಿದ್ದಾಪುರ, ವಂಡ್ಸೆ ಭಾಗದ ಗ್ರಾಮೀಣ ಪ್ರದೇಶಗಳಲ್ಲಿಯೂ ಬಸ್ ಬೇಡಿಕೆ ಇರುವುದರಿಂದ ಅಲ್ಲಿಗೂ ಬಸ್ ಸೇವೆ ಒದಗಿಸಬೇಕು ಎಂದವರು ಸೂಚಿಸಿದರು.