ಚರಂಡಿಗಳಲ್ಲಿ ತುಂಬಿದ ತ್ಯಾಜ್ಯ: ಸ್ವಚ್ಛತೆ ಮರೆತ ಪುರಸಭೆ

KannadaprabhaNewsNetwork | Published : Jul 6, 2024 12:54 AM

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡುಗಳಿವೆ. ತಾಲೂಕಿನಲ್ಲಿ ಒಟ್ಟು 32 ಗ್ರಾಮ ಪಂಚಾಯಿತಿಗಳಿವೆ ಬಹುತೇಕ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆ. ರಸ್ತೆ ಪಕ್ಕದಲ್ಲೇ ಪ್ಲಾಸ್ಟಿಕ್‌ ರಾಶಿಗಟ್ಟಲೆ ಸಂಗ್ರಹ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಿತ್ತಿವೆ. ಕಲುಷಿತ ತಾಜ್ಯದಿಂದ ಹಲವು ರೀತಿಯ ಸಾಂಕ್ರಾಮಿಕ ರೋಗ ಹರಡುತ್ತಿದೆ. ಇದರಿಂದ ಪುರಸಭೆ ಹಾಗು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 31 ವಾರ್ಡುಗಳಿವೆ. ತಾಲೂಕಿನಲ್ಲಿ ಒಟ್ಟು 32 ಗ್ರಾಮ ಪಂಚಾಯಿತಿಗಳಿವೆ ಬಹುತೇಕ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಮರೀಚಿಕೆ ಆಗಿದೆ.

ತುಂಬಿ ತುಳುಕುತ್ತಿರುವ ಚರಂಡಿ

ನಗರದ ಪ್ರಮುಖ ರಸ್ತೆ, ಸಂತೇಮೈದಾನ, ಕೆ.ಬಿ.ಬಿಯ ಸ್ಮಶಾನ ಮುಂಭಾಗ ಚರಂಡಿ, ವಿ.ವಿ.ಪುರಂ ಆರ್.ಕೆ. ಕ್ಲಿನಿಕ್‌ರಸ್ತೆ, ಸುಮಂಗಲಿ ಬಡಾವಣೆ ಮುಂಬಾಗ ಸೇರಿದಂತೆ ನಗರದ ಅನೇಕ ಪ್ರತಿಷ್ಠಿತ ವಾರ್ಡ್ ಗಳ ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದೆ. ಕೊಳೆತ ತ್ಯಾಜ್ಯವನ್ನು ಬೀರಿ ನಾಯಿಗಳು, ಹಂದಿಗಳು ಹರಡುತ್ತಿವೆ, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗುತ್ತಿದೆ. ಪ್ಲಾಸಿಕ್ ಮುಕ್ತ ತಾಲೂಕು ಮಾಡಲು ಹೇಳಿಕೆಗೆ ಮಾತ್ರ ಸೀಮಿತವಾಗಿದೆ ಪ್ಲಾಸ್ಟಿಕ್‌ ಕವರ್‌, ಲೋಟ, ನೀರಿನ ಬಾಟಲಿ, ತಟ್ಟೆ ಹೆಚ್ಚಾಗಿ ಬಳಕೆ ಆಗುತ್ತಿದ್ದು ತ್ಯಾಜ್ಯ ಸೃಷ್ಟಿಯಾಗಿದೆ. ಬಹುತೇಕ ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಚರಂಡಿಗಳಲ್ಲಿ ತ್ಯಾಜ್ಯ, ಹೂಳು ತಿಂಬಿದೆ. ಸೂಕ್ತ ನಿರ್ವಹಣೆ ಇಲ್ಲ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡಿವ ಭೀತಿ ಎದುರಾಗಿದೆ. ನಿಷೇಧಿತ ಪ್ಲಾಸ್ಟಿಕ್‌ ಹಾವಳಿ

ನಗರದ ಬಹುತೇಕ ಅಂಗಡಿಗಳಲ್ಲಿ ಸರ್ಕಾರ ನಿಷೇದಿತ ಪ್ಲಾಸ್ಟಿಕ್‌ಕವರ್‌ಗಳು, ಲೋಟಗಳ ವಹಿವಾಟು ಬಹಳ ರಾಜಾರೋಷವಾಗಿ ನಡೆಯುತ್ತಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಕೆಲವೊಂದು ಅಂಗಡಿ ಮಳಿಗೆಳಿಗೆ ಬೇಟಿನೀಡಿ ಎಚ್ಚರಿಕೆ ನೀಡಿ ದೊರೆತಂತಹ ಕವರ್ ಗಳನ್ನು ವಶಪಡಿಸಿಕೊಳ್ಳುತ್ತಾರೆ. ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತದೆ.ತಾಲೂಕಿನಲ್ಲಿ ಇದುವರೆವಿಗೆ 12 ಡೆಂಘೀಜ್ವರ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿನಿತ್ಯ 550 ರಿಂದ 600 ಮಂದಿ ಹೊರ ರೋಗಿಗಳು ಚಿಕಿತ್ಸೆಗೆ ಪಡೆಯುತ್ತಿದ್ದಾರೆ. ಆದರೆ ನಗರ ಮತ್ತು ಗ್ರಾಮಗಳಲ್ಲಿ ಬಹುತೇಕ ಕಡೆ ಕಸ, ತ್ಯಾಜ್ಯ, ಹೂಳು, ಪ್ಲಾಸ್ಟಿಕ್‌ರಸ್ತೆಯ ಪಕ್ಕದಲ್ಲಿಯೇ ರಾಶಿಗಟ್ಟಲೆ ಸಂಗ್ರಹವಾಗಿದೆ. ಸ್ವಚ್ಚತೆಗಾಗಿ ಮೀಸಲಿರುವ ಹಣ ಸದ್ಬಳಕೆ ಆಗಿಲ್ಲವೇನೊ ಎಂಬುದು ಸಾರ್ವಜನಿಕರ ಮನದಾಳದ ಮಾತಾಗಿದೆ.

ಸೊಳ್ಳೆ ಹಾವಳಿ ಹೆಚ್ಚಾಗಿದ್ದು, ಪುರಸಭೆ ಅಧಿಕಾರಿಗಳು ಫಾಗಿಂಗ್‌ ಮಾಡಿಸಬೇಕು. ಆದರೆ 31 ವಾರ್ಡುಗಳಿಗೆ ಫಾಗಿಂಗ್‌ ಮಾಡಲು ಇರುವುದೊಂದೇ ಯಂತ್ರ. ಆದೂ ಕೆಟ್ಟು ಮೂಲೆಸೇರಿದೆ. ಈಗಲಾದರೂ ಪುರಸಭೆ ಎಚ್ಚೆತ್ತುಕೊಂಡು ಪಟ್ಟಣದ ಸ್ವಚ್ಛತೆ ಮತ್ತು ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share this article