ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಕಸದಿಂದ ಕಸ್ತೂರಿಯನ್ನು ತೆಗೆಯುವುದು ಜಾಣರ ಲಕ್ಷಣ ಮತ್ತು ಕಸವೆಂದರೆ ಕಸವಲ್ಲ ಅದು ಭಂಡಾರದ ಒಡತಿ ಮಹಾಲಕ್ಷ್ಮೀಗೆ ಸಮಾನ ಎಂದು ನಿಡಸೋಸಿಯ ದುರದುಂಡೀಶ್ವರ ಸಿದ್ದಸಂಸ್ಥಾನಮಠದ ಶ್ರೀನಿಜಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.ಮಂಗಳವಾರ ರಬಕವಿ ಶಿವದಾಶಿಮಯ್ಯ ಸಮುದಾಯ ಭವನದಲ್ಲಿ ಶ್ರೀನಿಧಿ ಬ್ಯಾಂಕ್‌ನ ರಜತಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಭಾರತೀಯರಿಗೆ ವೈಯಕ್ತಿವಾಗಿ ಸ್ವಚ್ಛತೆ ಕುರಿತು ಅರಿವಿದೆ. ಆದರೆ ಸಮುದಾಯದ ಮತ್ತು ತಮ್ಮ ತಮ್ಮ ಮನೆ ಸುತ್ತಮುತ್ತಲ ಸ್ವಚ್ಛತೆಯ ಅರಿವಿಲ್ಲ. ಆದ್ದರಿಂದ ನಾವೆಲ್ಲರೂ ಕಸವನ್ನು ನಿರುಪಯುಕ್ತ ಎಂದುಕೊಳ್ಳದೆ, ನಾವು ಮಠಾಧೀಶರಾದರೂ ಕಸದಿಂದ ಕಸ್ತೂರಿ ವಾಸನೆ ತೆಗೆಯುತ್ತಿದ್ದೇವೆ. ಕಳೆದ 7 ವರ್ಷದ ಹಿಂದ ಮಂಗಳೂರಿನಲ್ಲಿ ಸ್ವತಃ ನಾವೇ ಸ್ವಚ್ಛತಾ ಅಭಿಯಾನಕ್ಕೆ ಮುಂದಾದಾಗ ಮೊದ ಮೊದಲು ಜನ ಬರಲಿಲ್ಲ. ಅರಿವಾದಾಗ ಸಹಸ್ರ ಸಂಖ್ಯೆಯಲ್ಲಿ ಜನ ಬಂದು ಭಾಗವಹಿಸಿ ಯಶಸ್ವಿಗೊಳಿಸಿದರು ಎಂದರು.
200ಕ್ಕೂ ಅಧಿಕ ಹಳ್ಳಿಗಳಲ್ಲಿ ಕಸ ವಿಂಗಡಣೆ ಅದರಲ್ಲಿ ಹಸಿ ಒಣ ಕಸ ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ, ನೂತನ ತಂತ್ರಜ್ಞಾನದ ಪರಿಕರಿಗಳನ್ನು ಅಳವಡಿಸಿಕೊಂಡು ಇಂದು ಬರೋಬ್ಬರಿ 7800 ಜನರಿಗೆ ಉದ್ಯೋಗವಕಾಶ ಕಲ್ಪಿಸಿದ್ದೇವೆ. ಜೊತೆಗೆ ಪ್ರತಿ ಮಹಿಳೆಗೆ ಆರಂಭದಲ್ಲಿಯೇ ತಿಂಗಳಿಗೆ ₹21 ಸಾವಿರ ಸಂಬಳ ನೀಡಿ ಪ್ರಸಕ್ತ ವರ್ಷದಲ್ಲಿ ₹2 ಕೋಟಿಯಷ್ಟು ಲಾಭ ಗಳಿಸಿದ್ದೇವೆಂದರು.ನಗರಸಭೆಯವರು ಕೇವಲ ಕಸ ಸಂಗ್ರಹಿಸಿ ಗುಡ್ಡೆಹಾಕಿದರೆ ನಗರ ಸ್ವಚ್ಛವಾಗುವುದಿಲ್ಲ. ಅದನ್ನು ಬಳಸಿಕೊಳ್ಳುವ ವಿಧಾನದತ್ತ ಗಮನ ಕೊಡಬೇಕು. ಮಂಗಳೂರಿನಲ್ಲಿ 8 ಸಾವಿರ ಮನೆಗಳಲ್ಲಿ ಕಸ ಸಂಗ್ರಹ ಯುನಿಟ್‌ಗಳನ್ನು ಪ್ರಾರಂಭಿಸಿದ್ದೇವೆ. ಕಸವನ್ನು ಬಿಎಸ್‌ಎಪ್‌ಎಲ್ ಹುಳು ತಿಂದು ಹಾಕಿ ಸಾವಯವ ಗೊಬ್ಬರನ್ನವಾಗಿ ಮಾಡುತ್ತದೆ. ಮುಸರಿ ಗೊಬ್ಬರನ್ನು ನಾವು ಪ್ರತಿ ಲೀ.ಗೆ ₹20 ರಂತೆ ಮಾರಾಟಮಾಡುತ್ತೇವೆ. ಇದು ಬೆಳೆಗಳಿಗೆ ಉಪಯುಕ್ತ ಮತ್ತು ಇಳುವರಿ ಕೂಡಾ ಹೆಚ್ಚಾಗುತ್ತದೆ. ಇಂದು ಮಂಗಳೂರಿನ ರಸ್ತೆಗಳಲ್ಲಿ ಕಸ ಬೀಳುವುದೇ ಇಲ್ಲ. ಪ್ಲಾಸ್ಟಿಕ್ ಮತ್ತು ಒಣ ಕಸ ವಿಲೇವಾರಿ ಮಾಡಿ ಅದನ್ನು ಮರು ಬಳಕೆ ಮಾಡಿಕೊಳ್ಳುವುದು ಬಲು ಸುಲಭ, ನಾವು ಈಗ ನಿಡಸೋಸಿ ಕಾಲೇಜ್‌ನಿಂದ ನಿತ್ಯ ಬರುವ ಕಸವನ್ನು ಸರಿಯಾಗಿ ಬಳಸಿಕೊಂಡು ಸಾವಯವ ಗೊಬ್ಬರ ಮಾಡಿ ಪ್ರತಿ ವರ್ಷ ಲಕ್ಷಾಂತರ ರುಪಾಯಿ ಲಾಭ ಗಳಿಸುತ್ತಿದ್ದೇವೆ. ಅದನ್ನು ತಾವು ಎಲ್ಲರೂ ಪ್ರತ್ಯಕ್ಷವಾಗಿ ನೋಡಬಹುದು ಎಂದರು.
ಇಳಕಲ್‌ನ ಡಾ.ಶಂಭು ಬಳಿಗಾರ ಮಾತನಾಡಿ, ಸಹಕಾರಿ ತತ್ವದಡಿ ಪ್ರಾಚೀನ ಕಾಲದಿಂದಲೂ ಭಾರತೀಯ ಕೃಷಿಕರು ಬದುಕುವ ವ್ಯವಸ್ಥೆ ರೂಪಿಸಿಕೊಂಡಿದ್ದರು. ಗ್ರಾಮೀಣ ಕೃಷಿಕರು ಉಪ ಕಸುಬುದಾತರನ್ನು ಬೆಳೆಸುವ ಮೂಲಕ ಹಣದ ವ್ಯವಹಾರವಿಲ್ಲದೇ ರಾಶಿ ಮಾಡುವಾಗ ಧಾನ್ಯ ನೀಡುವ ಮೂಲಕ ಪಾರಂಪರಿಕ ಕಸುವುದಾರರನ್ನು ಸಲುಹುತ್ತಿದ್ದರೆಂದರು. ಸಹಕಾರಿ ಸಂಸ್ಥೆಗಳು ಇಂದು ಆರ್ಥಿಕವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸಬಲ ಮಾಡಿರುವುದು ಪ್ರಶಂಸಾರ್ಹವೆಂದರು.ಸಮಾರಂಭದ ವೇದಿಕೆಯಲ್ಲಿ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು, ಸಂಸ್ಥೆಯ ಚೇರ್ಮನ್ ಎಂ. ಬಿ. ನಾಶಿ, ಜನಪದ ಸಾಹಿತಿ ಶಂಭು ಬಳಿಗಾರ, ಎಂ.ಸಿ.ಸಾಬೋಜಿ, ತಹಸೀಲ್ದಾರ್ ಗಿರೀಶ ಸ್ವಾದಿ ಇದ್ದರು. ಶ್ರೀನಿಧಿ ಸಮೂಹ ಸಂಸ್ಥೆಗಳ ನಿರ್ದೇಶಕರು, ಸದಸ್ಯರು ಮತ್ತು ಮಹಿಳಾ ಶಾಖೆಯ ನಿರ್ದೇಶಕರು, ಸಿಬ್ಬಂದಿ ಉಪಸ್ಥಿತರಿದ್ದರು.