ಬೆಂಗಳೂರು : ಗೌರಿ ಹಬ್ಬ, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳು ಕಳೆಗಟ್ಟಿದ್ದು, ಹಬ್ಬಕ್ಕಾಗಿ ಅಗತ್ಯ ಪೂಜಾ ಸಾಮಗ್ರಿ, ಹೂ-ಹಣ್ಣುಗಳ ಖರೀದಿಗೆ ಭಾನುವಾರ ಜನ ಮುಗಿ ಬಿದ್ದಿದ್ದರು.
ಮಂಗಳವಾರದ ಗೌರಿ ಹಬ್ಬ, ಬುಧವಾರದ ಗಣೇಶ ಚತುರ್ಥಿ ಹಬ್ಬಗಳ ಪ್ರಯುಕ್ತ ನಗರದಲ್ಲೆಡೆ ಗೌರಿ - ಗಣೇಶ ಮೂರ್ತಿಗಳ ಮಾರಾಟ ಜೋರಾಗಿದೆ. ಮಳೆಯೂ ಬಿಡುವು ನೀಡಿದ್ದರಿಂದ ಹಬ್ಬಕ್ಕೆ ಎರಡು ದಿನ ಇರುವಂತೆಯೇ ನಗರದ ಕೆ.ಆರ್. ಮಾರುಕಟ್ಟೆ, ಚಿಕ್ಕಪೇಟೆ, ಅವೆನ್ಯೂ ರಸ್ತೆಗಳಲ್ಲಿ ಹಬ್ಬದ ಖರೀದಿಗಾಗಿ ಜನ ಮುಗಿಬಿದ್ದಿದ್ದರು. ಹಬ್ಬದ ದಿನ ಹೂ-ಹಣ್ಣುಗಳ ದರ ಮತ್ತಷ್ಟು ಏರಿಕೆ ಆಗುವುದರಿಂದ ಹಾಗೂ ಇತರೆ ಕಾರ್ಯಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ದಾಂಗುಡಿ ಇಟ್ಟಿದ್ದರು. ಇಡೀ ದಿನ ಕಿಕ್ಕಿರಿದು ಜನ ತುಂಬಿದ್ದರು. ಸ್ಥಳೀಯವಾಗಿ ಇರುವ ಮಾರುಕಟ್ಟೆಯ ಜೊತೆಗೆ ಬೀದಿ ಬದಿಯಲ್ಲಿ ಅನೇಕರು ಹೂವು, ಹಣ್ಣು, ಮಾವಿನ ಎಲೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿತು.
ಜತೆಗೆ ಮಲ್ಲೇಶ್ವರ, ಗಾಂಧೀ ಬಜಾರ್, ಯಶವಂತಪುರ ಮಾರುಕಟ್ಟೆಗಳಲ್ಲೂ ವ್ಯಾಪಾರ ಜೋರಾಗಿತ್ತು. ನಾನಾ ಬಡಾವಣೆಗಳಲ್ಲಿ ಗೌರಿ-ಗಣೇಶನ ಮೂರ್ತಿಗಳ ಮಾರಾಟಕ್ಕೆಂದೆ ಮಳಿಗೆಗಳು ತೆರೆಯಲ್ಪಟ್ಟಿವೆ. ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳ ಜತೆಗೆ ಆರ್.ವಿ. ರಸ್ತೆ ಮತ್ತಿತರ ಕಡೆ ದೊಡ್ಡ ಪಿಒಪಿ ಮೂರ್ತಿಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯುತ್ತಿದೆ. ಮಾರುಕಟ್ಟೆಗೆ ಬಗೆ ಬಗೆಯ ಗೌರಿ-ಗಣೇಶ ಮೂರ್ತಿಗಳು ಆಗಮಿಸಿವೆ.
ಇದರ ಜತೆಗೆ ವಿಘ್ನೇಶ್ವರನಿಗೆ ಪ್ರಿಯವಾದ ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನ ಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಬಾಳೆಕಂಬ, ಹೂವಿನ ಹಾರ, ವೀಳ್ಯದೆಲೆ, ಮಾವಿನ ಎಲೆ, ಅಡಿಕೆ ಹಾರ, ಇತ್ಯಾದಿ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ಗೌರಿ ಹಬ್ಬ ಆಚರಿಸುವವರು ಹೆಚ್ಚಾಗಿ ಇಂದು ಹಾಗೂ ಮಂಗಳವಾರ ಮಾರುಕಟ್ಟೆಗೆ ಬರಲಿದ್ದಾರೆ. ಆದರೆ, ಬಿಡುವಿದ್ದ ಕಾರಣ ಭಾನುವಾರವೇ ಹೆಚ್ಚು ಗ್ರಾಹಕರನ್ನು ನೋಡುವಂತಾಗಿದೆ ಎಂದು ಮಲ್ಲೇಶ್ವರದ ಹೂವಿನ ವ್ಯಾಪಾರಿ ಕುಸುಮಾ ಹೇಳಿದರು.
ಹೂವಿನ ಬೆಲೆಗಳು ಕೊಂಚ ಅಗ್ಗ?
ವರಮಹಾಲಕ್ಷ್ಮಿ ಹಬ್ಬದ ವೇಳೆ ಹೂವಿನ ಬೆಲೆಗಳು ಗಗನಕ್ಕೇರಿದ್ದವು. ಆದರೆ ಗೌರಿ-ಗಣೇಶ ಹಬ್ಬಕ್ಕೆ ಬೆಲೆಗಳು ಅಷ್ಟೊಂದು ದುಬಾರಿಯಾಗಿಲ್ಲ. ತಮಿಳುನಾಡಿನಿಂದ ಹೂವು ಬರುತ್ತಿದೆ. ಆದರೆ, ಕಳೆದ ವಾರ ಮಳೆಯಾದ ಕಾರಣದಿಂದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಆನೇಕಲ್ ಮತ್ತಿತರ ಭಾಗಗಳಲ್ಲಿ ಹೂವಿನ ಬೆಳೆ ನಷ್ಟವಾಗಿದೆ. ಸೋಮವಾರದಿಂದ ಮೂರು ದಿನ ಬೆಲೆ ಒಂದಿಷ್ಟು ಹೆಚ್ಚಾಗಲಿದ್ದು, ನಂತರ ಇಳಿಯಲಿದೆ ಎಂದು ಕೆ.ಅರ್.ಮಾರುಕಟ್ಟೆ ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷ ದಿವಾಕರ್ ತಿಳಿಸಿದರು.
ಈ ಬಾರಿ ಚತುರ್ಥಿ ಖಾದ್ಯವಾದ ಮೋದಕ, ಖರ್ಜಿಕಾಯಿ, ಹೋಳಿಗೆ ಸೇರಿ ಖಾದ್ಯಕ್ಕೆ ಬಳಸಲ್ಪಡುವ ತೆಂಗಿನಕಾಯಿ ದರ ಹೆಚ್ಚಾಗಿರುವುದರಿಂದ ದರ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಲಿದೆ.
ಇನ್ನು, ಜತೆಗೆ ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸಲು ಅಲಂಕಾರಿಕ ಸಾಮಗ್ರಿಗಳು ಸೇರಿದಂತೆ, ಹಬ್ಬದ ಸಾಂಪ್ರದಾಯಕ ಧಿರಿಸುಗಳು ತುಂಬಿ ತುಳುಕಾಡುತ್ತಿವೆ. ಚಿನ್ನದ ದರ ಕೊಂಚ ಇಳಿದಿರುವ ಕಾರಣ ಹಬ್ಬದ ಪ್ರಯುಕ್ತ ಆಭರಣ ಮಳಿಗೆಗಳಲ್ಲೂ ಜನ ಹೆಚ್ಚಾಗಿದ್ದರು. ವಿಶೇಷವಾಗಿ ಮಲ್ಲೇಶ್ವರ ಸೇರಿದಂತೆ ಇತರೆಡೆಯ ಜವಳಿ ಮಳಿಗೆಗಳಲ್ಲಿ ಗ್ರಾಹಕರು ಭರ್ತಿಯಾಗಿದ್ದರು. ಹಬ್ಬಕ್ಕಾಗಿ ಧರಿಸುವ ವಿಶೇಷ ಉಡುಗೆ ತೊಡುಗೆಗಳಿಗೂ ಹೆಚ್ಚಿನ ಬೇಡಿಕೆಯಿದ್ದು, ಮಾರುಕಟ್ಟೆಗಳು ಸೇರಿ ಮಾಲ್‌ಗಳಲ್ಲಿ ವಹಿವಾಟು ಜೋರಾಗಿತ್ತು. ಗಣಪನ ಮೂರ್ತಿ ಲಕ್ಷ ರು.ವರೆಗೆ ಮಾರಾಟ! 30 ರು. ನಿಂದ ಸುಮಾರು 1 ಲಕ್ಷ ರು. ವರೆಗಿನ ಮೂರ್ತಿಗಳು ಮಾರಾಟವಾಗುತ್ತಿವೆ.
ಅವರವರ ಸಂಪ್ರದಾಯಕ್ಕೆ ತಕ್ಕಂತೆ ವಿವಿಧ ಸ್ವರೂಪಿ ಗಣೇಶ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ಮತ್ತೊಂದೆಡೆ ಗೌರಿ ಹಬ್ಬ ಆಚರಿಸುವವರು ಗಜಗೌರಿ, ಮಡಿಗೌರಿ ಮತ್ತಿತರ ಬಗೆಯ ಗೌರಿಯರನ್ನು ಖರೀದಿಸುತ್ತಿದ್ದುದು ಕಂಡುಬಂತು. ಹಬ್ಬದ ದಿನ ಗಣೇಶನನ್ನು ಕೊಂಡೊಯ್ಯಲು ಮುಂಗಡ ಬುಕ್ಕಿಂಗ್ ಕೂಡ ಜೋರಾಗಿತ್ತು.ಸೇನಾ ಕ್ಯಾಂಪ್‌ನಲ್ಲಿ ಆಪರೇಷನ್ ಸಿಂದೂರ ಗಣೇಶ ಕಾಶ್ಮೀರದ ಭಾರತ ಮತ್ತು ಪಾಕಿಸ್ತಾನ ಆಕ್ರಮಿತ ಗಡಿಯಲ್ಲಿನ ಗ್ರಾಮ ತೀತ್ವಾಲ್ ನಲ್ಲಿ ಅಖಿಲ ಭಾರತ ಕಾಶ್ಮೀರ ಗಣಪತಿ ಉತ್ಸವ ಮಹಾ ಮಂಡಲದ ವತಿಯಿಂದ ಆಗಸ್ಟ್ 27ರಂದು ಏರ್ಪಡಿಸಲಾದ ಗಣೇಶ ಚತುರ್ಥಿ ಉತ್ಸವಕ್ಕೆ ಮಹಾ ಮಂಡಲದ ಕರ್ನಾಟಕ ವಿಭಾಗದ ವತಿಯಿಂದ ಗಣಪತಿ ವಿಗ್ರಹವನ್ನು ಬೆಂಗಳೂರು ನಗರದ ಶಂಕರಪುರದಲ್ಲಿನ ಶಂಕರ ಮಠದಲ್ಲಿ ಶನಿವಾರ ಪೂಜೆ ಸಲ್ಲಿಸಿ ಕಾಶ್ಮೀರಕ್ಕೆ ಒಯ್ಯಲಾಯಿತು.
ಆಪರೇಶನ್ ಸಿಂಧೂರ ಹಿನ್ನೆಲೆಯ ಕಲ್ಪನೆಯಲ್ಲಿ ಕಲಾವಿದ ಗಣೇಶ ಹುಬ್ಳೀಕರ್ ಅವರು ಇದನ್ನು ರೂಪಿಸಿದ್ದಾರೆ. ಕಾಶ್ಮೀರದ ಭಾರತೀಯ ಸೇನಾ ಕ್ಯಾಂಪ್ ನಲ್ಲಿ ಯೋಧರು ಪೂಜಿಸಲು ಕಾಶ್ಮೀರದಲ್ಲಿ ಮಣ್ಣಿನ ಮೂರ್ತಿ ಸಿಗುವುದಿಲ್ಲವಾದ್ದರಿಂದ ಅಂತಹವರಿಗಾಗಿ ವಿಶೇಷವಾಗಿ ಇದನ್ನು ತಯಾರಿಸಿಕೊಟ್ಟಿದ್ದಾರೆ. ಈ ವಿಗ್ರಹವನ್ನು ಬೆಂಗಳೂರಿನಿಂದ ರೈಲಿನ ಮೂಲಕ ಸಾಗಿಸಲಾಗುತ್ತದೆ ಶ್ರೀನಗರದ ಶ್ರೀ ಚಕ್ರ ದೇವಿ ದೇವಸ್ಥಾನದಲ್ಲಿ ಪೂಜೆಯ ನಂತರ ಮೆರವಣಿಗೆಯಲ್ಲಿ ಗಡಿಗೆ ಒಯ್ದು ಭಾರತೀಯ ಸೇನಾ ಕ್ಯಾಂಪ್ ಗೆ ನೀಡಲಾಗುತ್ತದೆ.ಹೂವಿನ ದರ (ಭಾನುವಾರ ಇದ್ದಂತೆ)
ಹೂವು ದರ (ಕೆಜಿ-ರು.)
ಮಲ್ಲಿಗೆ 800
ಸೇವಂತಿಗೆ 200-400
ಸುಗಂಧರಾಜ 200
ರೋಸ್ 200
ಕನಕಾಂಬರ 1600
ಚೆಂಡು ಹೂ 60-70