ಬಾವಿ ಮುಚ್ಚುವ ನಿರ್ಧಾರ ಕೈಗೊಂಡ ಗೌರಿ ನಾಯ್ಕ

KannadaprabhaNewsNetwork |  
Published : Feb 21, 2024, 02:02 AM IST
ಅಂಗನವಾಡಿ ಎದುರಿಗೆ ಜಮಾಯಿಸಿದ ಸ್ಥಳೀಯರು. | Kannada Prabha

ಸಾರಾಂಶ

ಗಣೇಶ ನಗರದ ಅಂಗನವಾಡಿಯಲ್ಲಿ ಬಾವಿ ತೋಡಲು ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಗೌರಿ ನಾಯ್ಕ ಅವರು ಸ್ವ-ಇಚ್ಛೆಯಿಂದ ಬಾವಿ ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರೆ.

ಶಿರಸಿ:

ಗಣೇಶ ನಗರದ ಅಂಗನವಾಡಿಯಲ್ಲಿ ಬಾವಿ ತೋಡಲು ಅಧಿಕಾರಿಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಗೌರಿ ನಾಯ್ಕ ಅವರು ಸ್ವ-ಇಚ್ಛೆಯಿಂದ ಬಾವಿ ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರೆ. ಅಧಿಕಾರಿಗಳ ನಡೆಯೇ ಇವರ ಈ ನಿರ್ಧಾರಕ್ಕೆ ಕಾರಣ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂಗನವಾಡಿಯಲ್ಲಿ ಮಕ್ಕಳ ಕುಡಿಯುವ ನೀರಿಗೆ ಗೌರಿ ೩೫ ಅಡಿ ಬಾವಿ ತೋಡಿದ್ದರು. ಇದಕ್ಕೆ ಸಾಕಷ್ಟು ವಿರೋಧದ ನಡುವೆಯೂ ತನ್ನ ಛಲ ಬಿಡದೇ, ಬಾವಿ ತೆಗೆಯುವುದನ್ನು ಮುಂದುವರಿಸಿದ್ದರು. ಆನಂತರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದರು. ಸೋಮವಾರ ತಹಸೀಲ್ದಾರ್‌ ನೇತೃತ್ವದಲ್ಲಿ ಅಧಿಕಾರಿಗಳು ಬಾವಿಗೆ ಹಲಗೆ ಮುಚ್ಚಿ, ಆ ಜಾಗಕ್ಕೆ ಯಾರೂ ತೆರಳದಂತೆ ಬೀಗ ಹಾಕಿ ಬಂದ್ ಮಾಡಿದ್ದಾರೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ಗಣೇಶನಗರ ಭಾಗದ ಗ್ರಾಮಸ್ಥರು, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಧಿಕಾರಿಗಳ ವಿರುದ್ಧ ಸಿಡಿದೆದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಗೌರಿ ನಾಯ್ಕ, ಬಾವಿ ತೆಗೆದು ಮನೆಗೆ ಹೋದ ವೇಳೆ ಅಧಿಕಾರಿಗಳು ಬಂದು ಹಲಗೆ ಹಾಕಿ ಮುಚ್ಚಿದ್ದಾರೆ ಎಂದು ತಿಳಿದು ಬಂತು. ನಾನು ಸ್ವ-ಇಚ್ಛೆಯಿಂದ ಬಾವಿ ತೋಡುವುದಕ್ಕೆ ಅಧಿಕಾರಿಗಳು ಅಡ್ಡಿಪಡಿಸಿರುವುದು ಬಹಳ ಬೇಸರ ತಂದಿದೆ. ನನಗೆ ಬಾವಿ ತೋಡಲು ಅವಕಾಶ ಕಲ್ಪಿಸಬೇಕು ಎಂದು ವಿನಂತಿಸಿದರು.

ಮಹಿಳೆ ಬಾವಿ ತೋಡುತ್ತಿರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ. ಆದ್ದರಿಂದ ಬಾವಿ ತೆಗೆಯುವುದನ್ನು ಅಧಿಕಾರಿಗಳು ಸ್ಥಗಿತಗೊಳಿದ್ದಾರೆ. ಮಹಿಳೆಯ ಕೆಲಸ ಅಭಿನಂದಿಸುವ ಬದಲು ವಿರೋಧ ಮಾಡುತ್ತಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಳಿ ವಯಸ್ಸಿನ ಮಹಿಳೆ ಮಾಡುತ್ತಿರುವುದು ಒಳ್ಳೆಯ ಕೆಲಸ. ಬಾವಿ ತೆಗೆಯುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪರವಾನಗಿ ಪಡೆದಿಲ್ಲ. ಆದ್ದರಿಂದ ಬಾವಿ ತೆಗೆಯುವುದನ್ನು ಸ್ಥಗಿತಗೊಳಿಸಲು ತಿಳಿಸಲಾಗಿದೆ ಎಂದು ಸಹಾಯಕ ಆಯುಕ್ತೆ ಅಪರ್ಣಾ ರಮೇಶ ತಿಳಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ