ಏಕಾಂಗಿಯಾಗಿ ತೆಗೆದ ಬಾವಿಯಲ್ಲಿ ಗಂಗೆ ತಂದ ಗೌರಿ

KannadaprabhaNewsNetwork | Published : Mar 7, 2024 1:46 AM

ಸಾರಾಂಶ

ಕಳೆದ ೩೬ ದಿನಗಳಿಂದ ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡುತ್ತಿದ್ದ ಇಲ್ಲಿನ ಗಣೇಶ ನಗರದ ಮಹಿಳೆ ಗೌರಿ ನಾಯ್ಕ ನೀರು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಅಡೆತಡೆ ಧಿಕ್ಕರಿಸಿ, ಗಂಗೆಯನ್ನು ಹೊರತರುವಲ್ಲಿ ಮತ್ತೊಂದು ಸಾಹಸ ಮಾಡಿದ್ದಾರೆ.

ಶಿರಸಿ:

ಕಳೆದ ೩೬ ದಿನಗಳಿಂದ ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡುತ್ತಿದ್ದ ಇಲ್ಲಿನ ಗಣೇಶ ನಗರದ ಮಹಿಳೆ ಗೌರಿ ನಾಯ್ಕ ನೀರು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಕಷ್ಟು ಅಡೆತಡೆ ಧಿಕ್ಕರಿಸಿ, ಗಂಗೆಯನ್ನು ಹೊರತರುವಲ್ಲಿ ಮತ್ತೊಂದು ಸಾಹಸ ಮಾಡಿದ್ದಾರೆ.

ಜ. ೩೦ರಂದು ಶಿರಸಿ ಗಣೇಶ ನಗರದ ಅಂಗನವಾಡಿ ನಂಬರ್ ೬ರಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ಗಮನಿಸಿ, ಶಿಕ್ಷಕರು ಬೇರೆಡೆಯಿಂದ ಹೊತ್ತುಕೊಂಡು ಬರುವ ಪರಿಸ್ಥಿತಿ ಕಂಡು ಇಲ್ಲಿ ಬರುವ ಮಕ್ಕಳಿಗೆ ಶಾಶ್ವತ ನೀರಿನ ವ್ಯವಸ್ಥೆ ಆಗಬೇಕು ಎಂದು ದೃಢ ಸಂಕಲ್ಪ ತೆಗೆದುಕೊಂಡು ಗೌರಿ ನಾಯ್ಕ (58) ಬಾವಿ ತೋಡಲು ಶ್ರೀಕಾರ ಹಾಕಿದ್ದರು. ನಂತರ ನಡೆದದ್ದು ಇತಿಹಾಸ. ೩೦ ಫೂಟ್ ಆಳ ಬಾವಿ ತೆಗೆದ ಗೌರಿಯ ಸಾಹಸವನ್ನು ಮಾಧ್ಯಮಗಳು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡ್ಡಗಾಲು ಹಾಕಿತ್ತು.‌ ಇದನ್ನು ಮಾಧ್ಯಮ ತೀವ್ರವಾಗಿ ಖಂಡಿಸಿ ಸುದ್ದಿಗಳನ್ನು ಪ್ರಕಟಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆಗಮಿಸಿ, ಗೌರಿಯ ಕಾರ್ಯವನ್ನು ಪ್ರಶಂಸಿಸಿ, ಮರಳಿದ ಮರುದಿನವೇ ಜಿಲ್ಲಾಡಳಿತ ಬಾವಿ ತೆಗೆಯುವುದನ್ನು ಮುಂದುವರಿಸದಂತೆ ಎಚ್ಚರಿಕೆ ನೀಡಿ, ಬಾವಿಗೆ ಮರದ ಹಲಗೆ ಹಾಕಿ ಮುಚ್ಚಿಸಿತ್ತು. ಅದನ್ನು ಖಂಡಿಸಿ, ಸ್ಥಳೀಯ ಸಾರ್ವಜನಿಕರು ಸಹಾಯಕ ಆಯುಕ್ತರ ಕಚೇರಿಗೆ ಹಾಗೂ ತಹಸೀಲ್ದಾರ್‌ ಕಚೇರಿಗೆ ಪ್ರತಿಭಟನೆ ಮೂಲಕ ತೆರಳಿ, ಮನವಿ ನೀಡಿ, ಇದನ್ನು ತೆರವುಗೊಳಿಸಿ, ಬಾವಿ ತೆಗೆಯಲು ಅನುವು ಮಾಡಿಕೊಡುವಂತೆ ಆಗ್ರಹಿಸಲಾಗಿತ್ತು. ಇದನ್ನು ಗಮನಿಸಿದ ಸಂಸದ ಅನಂತಕುಮಾರ ಹೆಗಡೆ ನೇರವಾಗಿ ಗೌರಿ ತೆಗೆಯುತ್ತಿರುವ ಬಾವಿಯ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ, ಜಿಲ್ಲಾಧಿಕಾರಿ ಜತೆ ಮಾತನಾಡಿ, ತಕ್ಷಣವೇ ಗೌರಿಗೆ ಬಾವಿ ತೋಡಲು ಅವಕಾಶ ನೀಡಬೇಕು. ಅಡೆತಡೆ ಮಾಡಬಾರದು ಎಂದು ಸೂಚನೆ ನೀಡಿದ್ದರು.ಇದರಿಂದ ಮತ್ತೆ ಬಾವಿ ತೋಡಲು ಪ್ರಾರಂಭಿಸಿದ ಗೌರಿ ನಾಯ್ಕ ಕೊನೆಗೂ ತನ್ನ ಸಾಧನೆ ಮಾಡಲು ಯಶಸ್ವಿಯಾಗಿದ್ದಾರೆ. ಸುಮಾರು ೫೦ ಅಡಿ ಬಾವಿ ತೋಡಿ, ಗಂಗೆಯನ್ನು ಹೊರತರುವಲ್ಲಿ ಸಫಲರಾಗಿದ್ದಾರೆ.ಗೌರಿಯ ಈ ಸಾಧನೆಗೆ ಸ್ಥಳೀಯ ಸಾರ್ವಜನಿಕರು ತೀವ್ರ ಸಂತೋಷ ವ್ಯಕ್ತಪಡಿಸಿ, ಗ್ರಾಮದ ಸುತ್ತಲೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.ನನಗೆ ಬಾವಿ ತೋಡಲು ಅದೆಷ್ಟು ಕಷ್ಟವಾದರೂ ನನ್ನ ಜತೆ ಮಾಧ್ಯಮದವರು ನಿಂತರು. ಅವರ ಸಹಕಾರ ಸಾರ್ವಜನಿಕರ ಬೆಂಬಲ, ಇದರಿಂದ ನಾನು ನೀರನ್ನು ತರಲು ಅನುಕೂಲವಾಯಿತು. ನಮ್ಮ ಕುಟುಂಬ ಸಮೇತ ಗಂಗೆ ಪೂಜೆ ಮಾಡಿ ಈ ಬಾವಿಯನ್ನು ಸಾರ್ವಜನಿಕರಿಗೆ ಅರ್ಪಿಸುತ್ತಿದ್ದೇನೆ ಎಂದು ಗೌರಿ ನಾಯ್ಕ ಹೇಳಿದರು.

Share this article