ಸೋಮರಡ್ಡಿ ಅಳವಂಡಿ ಕೊಪ್ಪಳ
ರಸ್ತೆ, ಸರ್ಕಾರಿ ಕಟ್ಟಡ, ಗುಡಿ, ಗುಂಡಾರಗಳನ್ನು ನಿರ್ಮಿಸಲು ಹಸಿರಾದ ಹಲವಾರು ವರ್ಷಗಳಿಂದ ನೆರಳು, ಗಾಳಿ (ಆಕ್ಸಿಜನ್) ನೀಡುತ್ತಿದ್ದ ನೂರಾರು ಮರಗಳನ್ನು ನಿರ್ದಯದಿಂದ ಕಡಿದು ಹಾಕುವುದನ್ನು ನೋಡಿದ್ದೇವೆ. ಆದರೆ, ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕೇವಲ ಒಂದು ಮರವನ್ನು ಉಳಿಸಲು ಗವಿಮಠದ ಮಹಾದ್ವಾರದ ನಕ್ಷೆಯನ್ನೇ ಬದಲಿಸಿ ವೃಕ್ಷ ಸಂಪತ್ತಿನ ಮಹತ್ವವನ್ನು ಮತ್ತೊಮ್ಮೆ ಸಾರಿ ಪರಿಸರ ಪ್ರೇಮವನ್ನು ಸಾಕ್ಷೀಕರಿಸಿದ್ದಾರೆ.ಗವಿಮಠದಲ್ಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾರ್ಯಗಳು ಹೆಚ್ಚುತ್ತಲೇ ಸಾಗುತ್ತಿವೆ. ಈ ಕಾರ್ಯದಲ್ಲಿ ಒಂದೇ ಒಂದು ಗಿಡಕ್ಕೂ ಹಾನಿಯಾಗದಂತೆಯೇ ಶ್ರೀಗಳು ಮುತುವರ್ಜಿ ವಹಿಸಿ ಅಭಿವೃದ್ಧಿ ಮಾಡುತ್ತಿದ್ದಾರೆ. ಅದರಲ್ಲೂ ಕಟ್ಟಡ ನಿರ್ಮಾಣಕ್ಕೆ ಗಿಡ ಅಡ್ಡಿಯಾಗಿದ್ದರಿಂದ ಕಟ್ಟಡದ ನಕ್ಷೆ ಬದಲಾಯಿಸಿ, ಗಿಡ ಉಳಿಸಿಕೊಂಡಿದ್ದಾರೆ.
ಮಹಾದ್ವಾರದ ಗೋಡೆ ನಿರ್ಮಾಣ ಮಾಡುವ ವೇಳೆಯಲ್ಲಿ ಬೇವಿನ ಮರವೊಂದು ಅಡ್ಡ ಬಂದಿದೆ. ಇದನ್ನು ತೆಗೆಯದ ಹೊರತು ಗವಿಮಠದ ಮಹಾದ್ವಾರದ ಗೋಡೆ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಎಂಜನಿಯರ್ ಕೈ ಚೆಲ್ಲುತ್ತಾರೆ. ಗಿಡ ತೆಗೆದು ಕಟ್ಟುವುದಕ್ಕಿಂತ ಗಿಡ ಉಳಿಸಿಕೊಳ್ಳುವುದು ಮುಖ್ಯ ಎಂದು ವರ್ಷ ಕಾಲ ಕಟ್ಟಡ ನಿರ್ಮಾಣಕ್ಕೆ ಬ್ರೇಕ್ ಹಾಕಲಾಗುತ್ತದೆ.ಮಾಡಿದ್ದು ಹೇಗೆ: ಗೋಡೆಯ ಮಧ್ಯದಲ್ಲಿಯೇ ಬಂದಿರುವ ಮಹಾದ್ವಾರದ ಕಲ್ಲಿನ ಗೋಡೆ ನಿರ್ಮಾಣ ಮಾಡುವುದು ಹೇಗೆ ಎಂದು ಚಿಂತನೆ ನಡೆದಾಗ ಶ್ರೀಗಳೇ ಪರಿಹಾರ ಸೂಚಿಸುತ್ತಾರೆ. ಗೋಡೆ ನಿರ್ಮಾಣ ಮಾಡಿ, ಗಿಡದ ಎರಡು ಟೊಂಗೆ ಮಧ್ಯ ಮಾಡಿಕೊಂಡು ಕಟ್ಟಡ ಕಟ್ಟಿ, ಅದರ ಮೇಲೆ ಬಂಡೆಯೊಂದನ್ನು ಹಾಕಿ, ನಂತರ ಗೋಡೆಯನ್ನು ನಿರ್ಮಾಣ ಮಾಡಲು ಸೂಚಿಸುತ್ತಾರೆ.
ಅದರಂತೆಯೇ ಗವಿಮಠದ ಮಹಾದ್ವಾರದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಕಲ್ಲಿನ ಗೋಡೆಯ ಮಧ್ಯೆ ಮರ ಉಳಿಸಿಕೊಂಡಿರುವುದು ಅಚ್ಚರಿಯ ಜೊತೆ ಶ್ಲಾಘನೆಗೆ ಕಾರಣವಾಗಿದೆ. ಒಂದು ಗಿಡ ಉಳಿಸಿಕೊಳ್ಳಲು ಕಟ್ಟಡದ ನಕ್ಷೆಯನ್ನೇ ಬದಲಾಯಿಸಲಾಗಿದೆ.ಹಲವು ಗಿಡಗಳ ಮಧ್ಯೆ ಕಚೇರಿ: ಗವಿಮಠದ ಆವರಣದಲ್ಲಿಯೇ ಗವಿಮಠ ಟ್ರಸ್ಟ್ ಕಚೇರಿ ನಿರ್ಮಾಣ ಮಾಡಲಾಗಿದೆ. ಆದರೆ, ಈ ಮೊದಲೇ ಅಲ್ಲಿ ಹತ್ತಾರು ಗಿಡಗಳು ಇದ್ದವು. ಅವು ಹಾಳಾಗದಂತೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹೀಗಾಗಿ, ಗಿಡಗಳ ಮಧ್ಯೆಯೇ ಕಚೇರಿ ನಿರ್ಮಾಣ ಮಾಡಲಾಗಿದೆ. ಕಚೇರಿಯ ಮಧ್ಯದಲ್ಲಿಯೂ ಗಿಡಗಳು ಈಗಲೂ ಕಂಗೊಳಿಸುತ್ತಿವೆ.
ಶ್ರೀಗಳು ಅನ್ನ, ಅಕ್ಷರ, ಆರೋಗ್ಯ ದಾಸೋಹದ ಜತೆಗೆ ಸಸ್ಯ ದಾಸೋಹ ಪ್ರಾರಂಭಿಸಿದ್ದಾರೆ. ಮಠಕ್ಕೆ ಬರುವ ಭಕ್ತರಿಗೆ ಗಿಡಗಳನ್ನು ನೀಡಲಾಗುತ್ತದೆ. ಆಸಕ್ತರು ಉಚಿತವಾಗಿ ತೆಗೆದುಕೊಂಡು ಹೋಗಿ ಬೆಳೆಸಬಹುದು. ಇದು ನಿರಂತರವಾಗಿ ನಡೆಯುತ್ತಿದೆ.ಮರಗಿಡಗಳ ಮಧ್ಯವೇ ಬದುಕಬೇಕು. ಪ್ರತಿ ಮರವೂ ಅಮೂಲ್ಯ. ಅವುಗಳನ್ನು ಉಳಿಸಿಕೊಳ್ಳುವುದು ಮತ್ತು ಬೆಳೆಯುವುದು ಪ್ರತಿಯೊಬ್ಬರ ಕರ್ತವ್ಯ. ಗಿಡಗಳನ್ನು ಕಡಿದು ಕಟ್ಟಡ ನಿರ್ಮಾಣ ಮಾಡುವುದರಲ್ಲಿ ಅರ್ಥವಿಲ್ಲ. ಇದ್ದ ಗಿಡಗಳನ್ನು ಉಳಿಸಿಕೊಂಡು ಅಭಿವೃದ್ಧಿ ಮಾಡಬೇಕು ಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.