ಪ್ರಾಣೇಶ್‌ಗಿಂತ 9 ಮತ ಹೆಚ್ಚು ಗಳಿಸಿರುವ ಗಾಯತ್ರಿ? : ಮಾ.4ರ ಹೈ ತೀರ್ಪಿನತ್ತ ಎಲ್ಲರ ಚಿತ್ತ

KannadaprabhaNewsNetwork |  
Published : Mar 02, 2025, 01:20 AM ISTUpdated : Mar 02, 2025, 12:18 PM IST
Highcourt

ಸಾರಾಂಶ

ಚಿಕ್ಕಮಗಳೂರು , ಜಿಲ್ಲೆಯಲ್ಲಿ ಕಳೆದ 2021ರಲ್ಲಿ ನಡೆದ ವಿಧಾನ ಪರಿಷತ್ತು ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತಗಳ ಮರು ಎಣಿಕೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.4ರಂದು ಹೈಕೋರ್ಟ್‌ನಿಂದ ಯಾವ ತೀರ್ಪು ಬರಲಿದೆ ಎಂಬ ಕುತೂಹಲ ಮೂಡಿದೆ.

 ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಳೆದ 2021ರಲ್ಲಿ ನಡೆದ ವಿಧಾನ ಪರಿಷತ್ತು ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮತಗಳ ಮರು ಎಣಿಕೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.4ರಂದು ಹೈಕೋರ್ಟ್‌ನಿಂದ ಯಾವ ತೀರ್ಪು ಬರಲಿದೆ ಎಂಬ ಕುತೂಹಲ ಮೂಡಿದೆ.

ವಿಧಾನ ಪರಿಷತ್ತು ಹಾಲಿ ಸದಸ್ಯ ಎಂ.ಕೆ. ಪ್ರಾಣೇಶ್ ಅವರಿಗೆ ಟೆನ್ಷನ್‌ ಆಗಿದ್ದರೆ, ಗಾಯತ್ರಿ ಶಾಂತೇಗೌಡ ಅವರು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ವಿಧಾನ ಪರಿಷತ್ತು ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲು ಏರಿದ ಪ್ರಥಮ ಪ್ರಕರಣ ಜಿಲ್ಲೆಯಲ್ಲಿ ಇದಾಗಿದೆ.

2021ರ ಡಿ.10ರಂದು ನಡೆದ ವಿಧಾನ ಪರಿಷತ್ತು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್‌, ಕಾಂಗ್ರೆಸ್‌ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ, ಪಕ್ಷೇತರ ಅಭ್ಯರ್ಥಿ ಡಾ. ಸುಂದರೇಗೌಡ, ಬಿ.ಟಿ. ಚಂದ್ರಶೇಖರ್‌ ಹಾಗೂ ಜಿ.ಐ. ರೇಣುಕುಮಾರ್‌ ಸ್ಪರ್ಧೆ ಮಾಡಿದ್ದರು.

ಅಂದು ಒಟ್ಟು 2,410 ಮತಗಳು ಚಲಾವಣೆಯಾಗಿದ್ದು, ಈ ಪೈಕಿ 39 ಮತಗಳು ತಿರಸ್ಕೃತಗೊಂಡಿದ್ದರೆ, ಎಂ.ಕೆ. ಪ್ರಾಣೇಶ್‌ ಅವರು 1188, ಗಾಯತ್ರಿ ಶಾಂತೇಗೌಡ 1182, ಡಾ. ಸುಂದರೇಗೌಡ 1 ಮತ ಪಡೆದಿದ್ದರು. ಗಾಯತ್ರಿ ಶಾಂತೇಗೌಡ 6 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

* 12 ನಾಮನಿರ್ದೇಶಕರ ಮತದಾನ ವಿರುದ್ಧ ಕೋರ್ಟ್‌ ಮೊರೆ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನ ಮಾಡಲು ಅವಕಾಶ ಇಲ್ಲ. ಹಾಗಿದ್ದರೂ ಜಿಲ್ಲಾ ಚುನಾವಣಾಧಿಕಾರಿ 12 ಮಂದಿ ನಾಮ ನಿರ್ದೇಶಕರಿಗೆ ಮತದಾನಕ್ಕೆ ಅವಕಾಶ ನೀಡಿದ್ದಾರೆ. ಅವರನ್ನು ಕೈ ಬಿಟ್ಟು ಮರು ಮತ ಎಣಿಕೆ ಮಾಡಬೇಕೆಂದು ಗಾಯತ್ರಿ ಶಾಂತೇಗೌಡ ಹೈಕೋರ್ಟ್‌ ಮೊರೆ ಹೋಗಿದ್ದರು.

ನಾಮ ನಿರ್ದೇಶನದ ಸದಸ್ಯರಿಗೂ ಮತದಾನದ ಹಕ್ಕಿದೆ ಎಂದು ಎಂ.ಕೆ. ಪ್ರಾಣೇಶ್‌ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಕಳೆದ ಜನವರಿ 24 ರಂದು ಹೈಕೋರ್ಟ್‌ಗೆ ಮರು ಮತ ಎಣಿಕೆ ನಡೆಸಿ, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶದ ಮಾಹಿತಿ ಪಡೆಯುವಂತೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಕಳೆದ ಜ.29ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಾಮ ನಿರ್ದೇಶನದ ಸದಸ್ಯರನ್ನು ಕೈ ಬಿಟ್ಟು ಉಳಿದ ಮತಗಳನ್ನು ಮರುಎಣಿಕೆ ಮಾಡುವಂತೆ ಸೂಚನೆ ನೀಡಿತ್ತು.

* ಗಾಯತ್ರಿ ಶಾಂತೇಗೌಡರಿಗೆ 9 ಮತಗಳು ಲೀಡ್ಗಾಯತ್ರಿ ಶಾಂತೇಗೌಡ 6 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದರೆ, ಶುಕ್ರವಾರ ನಡೆದ ಮರು ಮತ ಎಣಿಕೆಯಲ್ಲಿ ಎಂ.ಕೆ. ಪ್ರಾಣೇಶ್‌ ಅವರಿಗಿಂತ 9 ಹೆಚ್ಚು ಮತಗಳನ್ನು ಗಾಯತ್ರಿ ಶಾಂತೇಗೌಡ ಪಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಮರು ಮತ ಎಣಿಕೆ ಸಂದರ್ಭದಲ್ಲಿ 12 ನಾಮ ನಿರ್ದೇಶನ ಸದಸ್ಯರ ಮತಗಳನ್ನು ಕೈ ಬಿಡಲಾಗಿದೆ. ಈ ಪ್ರಕ್ರಿಯೆಯನ್ನು ನ್ಯಾಯಾಲಯ ಒಪ್ಪಿಕೊಂಡಿದ್ದೆಯಾದಲ್ಲಿ ಕೇಂದ್ರ ಚುನಾವಣಾ ಆಯೋಗ ಗಾಯತ್ರಿ ಶಾಂತೇಗೌಡ ಅವರ ಗೆಲುವು ಪ್ರಕಟಿಸಲಿದೆ. ಆನಂತರದಲ್ಲಿ ಎಂ.ಕೆ. ಪ್ರಾಣೇಶ್‌ ಮತ್ತೆ ಕಾನೂನು ಹೋರಾಟಕ್ಕೆ ಇಳಿಯುತ್ತಾರಾ ಎಂಬುದು ಸದ್ಯ ಜನರ ಮುಂದಿರುವ ಕುತೂಹಲದ ಪ್ರಶ್ನೆ.

 ಯಾರು ಹೊಣೆಗಾರರು? ಚುನಾವಣೆಗೂ ಮುನ್ನ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ಚುನಾವಣಾ ಆಯೋಗದಿಂದ ಅನುಮತಿ ಪಡೆದು ಚುನಾವಣೆ ನಡೆಸಲಾಗುತ್ತದೆ. 2021ರಲ್ಲಿ ನಡೆದ ವಿಧಾನ ಪರಿಷತ್ತು ಚುನಾವಣೆ ಸಂದರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಜತೆಗೆ ನಾಮನಿರ್ದೇಶನದ ಸದಸ್ಯರ ಪಟ್ಟಿಗೂ ಜಿಲ್ಲಾ ಚುನಾವಣಾಧಿಕಾರಿಗಳು ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ ಪಡೆದುಕೊಂಡಿದ್ದರಾ?

ಅನುಮತಿ ಪಡೆಯದೇ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹಾಗಾದರೆ ನಾಮನಿರ್ದೇಶನ ಸದಸ್ಯರು ಮತದಾನ ಮಾಡ ಬೇಕೋ, ಬೇಡವೇ ಎಂಬ ಸ್ಪಷ್ಟವಾದ ಮಾಹಿತಿ ಆಯೋಗಕ್ಕೆ ಕೊರತೆಯಾಗಿತ್ತಾ? ಈ ರೀತಿ ಹಲವು ಪ್ರಶ್ನೆಗಳು ಜನರ ಮಧ್ಯೆ ಓಡಾಡುತ್ತಿವೆ. ಈ ಪ್ರಕರಣದ ತೀರ್ಪು ಮುಂದಿನ ದಿನಗಳಲ್ಲಿ ಸ್ಪಷ್ಟವಾದ ನಿರ್ದೇಶನಕ್ಕೆ ಮುನ್ನುಡಿ ಬರೆಯಲಿದೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ