- ಕಚೇರಿ ಸಹಾಯಕರಾದ ನಾಗರತ್ನಮ್ಮ, ತಿಮ್ಮೇಶ್ ಸನ್ಮಾನಿಸಿ ಹಿರೇಕಲ್ಮಠ ಶ್ರೀ ಸಲಹೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸರ್ಕಾರದ ನಿಯಮದಂತೆ 60 ವರ್ಷ ಮೀರಿದ ಮೇಲೆ ನಿವೃತ್ತಿ ಸಹಜವಾದ ಪ್ರಕ್ರಿಯೆ. ನಿವೃತ್ತಿ ಹೊಂದಿದ ಮೇಲೆ ಸದಾ ಚಟುವಟಿಕೆಯಿಂದ ಜೀವನ ಸಾಗಿಸಿದರೆ ಆರೋಗ್ಯ ಉತ್ತಮಗೊಳ್ಳುತ್ತದೆ. ನೌಕರರು ರಿಟೈರ್ಡ್ ಆಗಿದ್ದೇವೆ ಎಂದು ಟೈಯರ್ಡ್ ಆಗದಿರಿ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.ಪಟ್ಟಣದ ಶ್ರೀ ಚನ್ನೇಶ್ವರ ಗ್ರಾಮಾಂತರ ಪದವಿಪೂರ್ವ ಕಾಲೇಜಿನಲ್ಲಿ ಕಚೇರಿ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಾಗರತ್ನಮ್ಮ ಮತ್ತು ತಿಮ್ಮೇಶ್ ಅವರಿಗೆ ಭಾನುವಾರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವ್ಯಕ್ತಿ ಸಲ್ಲಿಸುವ ಪ್ರಾಮಾಣಿಕ ಸೇವೆ ಸದಾ ಸ್ಮರಣೆಯಲ್ಲಿ ಇರುತ್ತದೆ. ಎಷ್ಟು ವರ್ಷ ನೌಕರಿ ಮಾಡಿದೆ ಎನ್ನುವುದು ಮುಖ್ಯವಲ್ಲ. ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದು ಹೇಗೆ ಜನಮನ್ನಣೆ ಗಳಿಸಿದೆ ಎನ್ನುವುದು ಪ್ರಾಮುಖ್ಯತೆ ಪಡೆಯುತ್ತದೆ. ಈ ವ್ಯಕ್ತಿ ಇನ್ನಷ್ಟು ವರ್ಷ ಕಾಲ ನೌಕರಿಯಲ್ಲಿ ಇರಬೇಕಿತ್ತು ಎಂದು ಇತರರು ಮಾತನಾಡುವಷ್ಟು ಶುದ್ಧ, ಪರಿಣಾಮಕಾರಿಯಾಗಿ ಸೇವೆ ಇರಬೇಕು. ಬದಲಿಗೆ ಈ ವ್ಯಕ್ತಿ ಯಾವಾಗ ನಿವೃತ್ತಿ ಹೊಂದುತ್ತಾರೋ ಎಂದು ಪ್ರಶ್ನಿಸುವಂತೆ ಇರಬಾರದು ಎಂದು ಸಲಹೆ ನೀಡಿದರು.ಇದುವರೆಗೂ ಶ್ರೀ ಚನ್ನಪ್ಪಸ್ವಾಮಿ ವಿದ್ಯಾಪೀಠದ ಸಂಸ್ಥೆಗಳಲ್ಲಿ ನಿವೃತ್ತಿ ಹೊಂದಿದ ಎಲ್ಲ ನೌಕರರು ಉತ್ತಮವಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ಹಳೇ ತಲೆಮಾರುಗಳ ಎಲ್ಲ ನೌಕರರು ನಿವೃತ್ತಿ ಪಡೆದಿದ್ದಾರೆ. ಹೊಸ ತಲೆಮಾರಿನ ನೌಕರರು ನಿವೃತ್ತಿ ಹೊಂದಿದ ನೌಕರರನ್ನು ಅನುಸರಿಸಿ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಸಾಧನೆಯೊಂದಿಗೆ ನಿವೃತ್ತಿ ಹೊಂದಿದ ಎಲ್ಲ ನಿವೃತ್ತ ನೌಕರರಿಗೆ ಭಗವಂತ ಉತ್ತಮ ಆಯುರಾರೋಗ್ಯ ಕೊಡುವುದಲ್ಲದೇ, ಅವರ ಮಕ್ಕಳ ಭವಿಷ್ಯ ಉತ್ತಮ ರೀತಿಯಲ್ಲಿ ರೂಪಿಸುತ್ತಾನೆ ಎಂದು ಹೇಳಿದರು.
ಚನ್ನಪ್ಪಸ್ವಾಮಿ ವಿದ್ಯಾಪೀಠದ ನಿರ್ದೇಶಕ ಚನ್ನಬಸಯ್ಯ, ನಿವೃತ್ತ ನೌಕರ ತಿಮ್ಮೇಶ್, ನಿವೃತ್ತ ಪ್ರಾಂಶುಪಾಲ ಬಸವರಾಜ್ ಉಪ್ಪಿನ್, ಗೀತಾ ಹಿರೇಮಠ, ಹರೀಶ, ಚನ್ನೇಶ ಇತರರು ಮಾತನಾಡಿದರು. ಎಸ್‍ಜೆವಿಪಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಮಮತ, ಮುಖಂಡ ರವೀಶ್ ಇದ್ದರು.ಪ್ರಾಂಶುಪಾಲ ಟಿ.ಎಂ. ಉಮಾಕಾಂತ್ ಅಧ್ಯಕ್ಷತೆವಹಿಸಿ ಮಾತನಾಡಿದರು. ನಿವೃತ್ತ ನೌಕರರಾದ ನಾಗರತ್ನಮ್ಮ ಮತ್ತು ತಿಮ್ಮೇಶ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಉಪನ್ಯಾಸಕ ಕವಿರಾಜ್ ಸ್ವಾಗತಿಸಿ, ಮಲ್ಲಿಕಾರ್ಜುನ ನಿರೂಪಿಸಿದರು. ಸುಮಾ ರವಿಕುಮಾರ್ ವಂದಿಸಿದರು.
- - - -30ಎಚ್.ಎಲ್.ಐ1:ಹೊನ್ನಾಳಿ ಪಟ್ಟಣದ ಶ್ರೀ ಚನ್ನೇಶ್ವರ ಗ್ರಾಮಾಂತರ ಪದವಿಪೂರ್ವ ಕಾಲೇಜಿನಲ್ಲಿ ಕಚೇರಿ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಾಗರತ್ನಮ್ಮ ಮತ್ತು ತಿಮ್ಮೇಶ್ ಅವರನ್ನು ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.