ಋತುಚಕ್ರದ ಕಟ್ಟುಪಾಡಿನಿಂದ ಹೊರ ಬನ್ನಿ: ಡಾ. ಅರ್ಪಿತಾ

KannadaprabhaNewsNetwork | Published : Jun 3, 2024 12:31 AM

ಸಾರಾಂಶ

ತಂತ್ರಜ್ಞಾನ ಯುಗದತ್ತ ದಾಪುಗಾಲು ಇಡುತ್ತಿರುವ ಇಂದಿಗೂ ನಾವು ಮಹಿಳೆಯರ ಋತುಚಕ್ರದ ಕಟ್ಟುಪಾಡಿಗೆ ಒಳಗಾಗಿದ್ದೇವೆ.

ಆರೋಗ್ಯ ನೈರ್ಮಲ್ಯ ದಿನ । ಮುಟ್ಟಿನ ಸ್ನೇಹಿ ಪ್ರಪಂಚದ ಕಡೆಗೆ ವಿಷಯದ ಕುರಿತು ಉಪನ್ಯಾಸ

ಕನ್ನಡಪ್ರಭ ವಾರ್ತೆ ಕಾರಟಗಿ

ತಂತ್ರಜ್ಞಾನ ಯುಗದತ್ತ ದಾಪುಗಾಲು ಇಡುತ್ತಿರುವ ಇಂದಿಗೂ ನಾವು ಮಹಿಳೆಯರ ಋತುಚಕ್ರದ ಕಟ್ಟುಪಾಡಿಗೆ ಒಳಗಾಗಿದ್ದೇವೆ. ಈ ಬಗ್ಗೆ ಇಂದಿಗೂ ಇದನ್ನು ದೇಹದ ನೈಸರ್ಗಿಕ ಚಟುವಟಿಕೆ ಎಂಬುದನ್ನು ಮರೆತು ಕಳಂಕ ಎಂಬ ರೀತಿಯಲ್ಲಿ ಕಾಣುತ್ತಿದ್ದೇವೆ. ಜಗತ್ತಿನ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಈ ಮನೋಭಾವದಿಂದ ಇನ್ನು ಹೊರ ಬಂದಿಲ್ಲ ಎಂಬುದು ದು:ಖದ ಸಂಗತಿ ಎಂದು ಸಮುದಾಯ ಆರೋಗ್ಯ ಕೇಂದ್ರದ ಡಾ. ಅರ್ಪಿತಾ ಲೋಬೋ ಹೇಳಿದರು.

ಇಲ್ಲಿನ ಜೆಪಿ ನಗರದ ಶ್ರೀದೇವಿ ದೇವಸ್ಥಾನದ ಆವರಣದಲ್ಲಿ ವಿಶ್ವ ಋತುಚಕ್ರ ನೈರ್ಮಲ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಮುಟ್ಟಿನ ಆರೋಗ್ಯ ನೈರ್ಮಲ್ಯ ದಿನ ಅಂಗವಾಗಿ ಮುಟ್ಟಿನ ಸ್ನೇಹಿ ಪ್ರಪಂಚದ ಕಡೆಗೆ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಜೀವ ಸೃಷ್ಟಿಯ ಮೂಲ ಕ್ರಿಯೆಯಾದ ಮುಟ್ಟು ಒಂದು ಜೈವಿಕ ಕ್ರಿಯೆಯಾಗಿದೆ. ಮುಟ್ಟಿನ ಬಗ್ಗೆ ಅರಿಯದೇ, ಅದನ್ನು ಒಂದು ಅಶುದ್ಧ ಕ್ರಿಯೆ, ಅನಿಷ್ಠ ಎಂದೆಲ್ಲ ಕಟ್ಟುಪಾಡುಗಳಿಂದ ಆಚರಿಸುವವರೇ ಹೆಚ್ಚು. ಮುಟ್ಟಿನ ಬಗ್ಗೆ ಅರಿವು ಮೂಡಿಸುವ ಹೊಣೆ ನಮ್ಮೆಲ್ಲರದ್ದು.

ಮುಟ್ಟಾಗುವುದು ಸಹಜ ಹಾಗೂ ನೈಸರ್ಗಿಕ ಪ್ರಕ್ರಿಯೆ ಎನ್ನುವುದು ನಿಜವಾದರೂ ಈ ದಿನಗಳಲ್ಲಿ ನೈರ್ಮಲ್ಯ ಅಥವಾ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಗಾಬರಿಯಾಗುವ ಬಾಲಕಿಯರಿಗೆ ತಿಳಿ ಹೇಳುವುದು ಬಹಳ ಮುಖ್ಯ. ಮುಟ್ಟಿನ ದಿನಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದೇ ಇದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮುಟ್ಟಿನ ನೈರ್ಮಲ್ಯ ದಿನ ಆಚರಿಸಲಾಗುತ್ತದೆ.

ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ರಕ್ತಹೀನತೆಯಿಂದ ಮುಕ್ತರಾಗುವುದು, ಪೌಷ್ಠಿಕ ಉತ್ತಮ ಕಬ್ಬಿಣಾಂಶದ ಆಹಾರ ಹಾಗೂ ಸೊಪ್ಪಿನಂತಹ ಆಹಾರ ಸೇವನೆ ಮಾಡಬೇಕು. ಜಿಲ್ಲಾಸ್ಪತ್ರೆಯಲ್ಲಿ ದೊರೆಯುವ ಕಬ್ಬಿಣಾಂಶ ಮಾತ್ರೆಯನ್ನು ಹದಿಹರೆಯ ಕಿಶೋರಿ ಮಕ್ಕಳು ತೆಗೆದುಕೊಳ್ಳುವುದು ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಹದಿಹರೆಯದ ಆರೋಗ್ಯ ಆಪ್ತ ಸಮಾಲೋಚಕಿ ಶಿಲ್ಪಾ, ಹಿರಿಯ ಆರೋಗ್ಯ ಸುರಕ್ಷಾಧಿಕಾರಿಗಳಾದ ದುರುಗಮ್ಮ, ಸಾವಿತ್ರಿ, ಆಶಾ ಕಾರ್ಯಕರ್ತೆಯರಾದ ಕಸ್ತೂರಿ, ನಾಗರತ್ನ, ಲಕ್ಷ್ಮೀಬಾಯಿ ಇತರರಿದ್ದರು.

ಜಿಲ್ಲಾಡಳಿತ, ಜಿಪಂ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಯುನಿಸೆಫ್ ಹಾಗೂ ಕಾರಟಗಿಯ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

Share this article