ಜನರ ಕೆಲಸ ತ್ವರಿತವಾಗಿ ಮಾಡಿ: ಅಧಿಕಾರಿಗಳಿಗೆ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ತಾಕೀತು

KannadaprabhaNewsNetwork | Published : Mar 14, 2025 12:31 AM

ಸಾರಾಂಶ

ಆಸ್ತಿ ಖಾತಾ ಮಾಡಿಕೊಡಲು ಲಂಚ ಕೇಳುತ್ತೀರಲ್ಲಾ? ಆಸ್ತಿಯಲ್ಲಿ ಪಾಲು ಕೇಳುತ್ತಿರಲ್ಲಾ? ಅವರಪ್ಪಗೆ ಹುಟ್ಟಿದ್ದೀರಾ? ಸರ್ಕಾರದ ವೇತನ ಪಡೆದು ಮೊದಲು ಜನರ ಕೆಲಸ ಮಾಡುವುದನ್ನು ಕಲಿಯಿರಿ.

ಆಸ್ತಿ ಖಾತಾ ಮಾಡಿಕೊಡಲು ಲಂಚ ಕೇಳುತ್ತೀರಲ್ಲಾ?

ಕನ್ನಡಪ್ರಭ ವಾರ್ತೆ ಹೊಸಪೇಟೆ

ಆಸ್ತಿ ಖಾತಾ ಮಾಡಿಕೊಡಲು ಲಂಚ ಕೇಳುತ್ತೀರಲ್ಲಾ? ಆಸ್ತಿಯಲ್ಲಿ ಪಾಲು ಕೇಳುತ್ತಿರಲ್ಲಾ? ಅವರಪ್ಪಗೆ ಹುಟ್ಟಿದ್ದೀರಾ? ಸರ್ಕಾರದ ವೇತನ ಪಡೆದು ಮೊದಲು ಜನರ ಕೆಲಸ ಮಾಡುವುದನ್ನು ಕಲಿಯಿರಿ. ಸ್ವಾತಂತ್ರ್ಯಕ್ಕಾಗಿ ಮಹನೀಯರು ಪ್ರಾಣ ತ್ಯಾಗ ಮಾಡಿದ್ದಾರೆ. ಎಲ್ಲರಿಗೂ ಸಮಾನತೆ ದೊರೆಯಬೇಕಿದೆ. ಇದಕ್ಕಾಗಿ ಸರ್ಕಾರಿ ಅಧಿಕಾರಿಗಳು ಜನರ ಕೆಲಸ ತ್ವರಿತವಾಗಿ ಮಾಡಬೇಕು ಎಂದು ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಹೇಳಿದರು.

ನಗರದ ಸಹಕಾರಿ ಕಲ್ಯಾಣ ಮಂಟಪದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು, ಕುಂದುಕೊರತೆಗಳ ದೂರು ವಿಚಾರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಹಾಗೂ ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರವನ್ನು ಲೇಟರ್‌ ಹೆಡ್‌ನಲ್ಲಿ ಹಾಕಿಕೊಳ್ಳಬಾರದು. ಅವರು ದೇಶದ ಆಸ್ತಿ, ಇಂತಹ ಕೆಲಸಕ್ಕೆ ಆಸ್ಪದ ಕೊಡಬಾರದು ಎಂದರು.

ಆಡಳಿತದಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಲೋಕಪಾಲ್‌ ಮಸೂದೆ ಸೇರಿದಂತೆ ಲೋಕಾಯುಕ್ತ ಸಂಸ್ಥೆಯನ್ನು ಜಾರಿಗೆ ತರಲಾಗಿದೆ. ಆದರೂ ಭ್ರಷ್ಟಾಚಾರ ಸರ್ವವ್ಯಾಪಿ ಹರಡಿದೆ. ಮುಂದಿನ ದಿನಗಳಲ್ಲಿ ಜನ ದಂಗೆ ಏಳಬಹುದು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಶೇ. 95ರಷ್ಟು ಜನ ದೇಶಭಕ್ತರಾಗಿದ್ದರು. ಶೇ. 5ರಷ್ಟು ಮಾತ್ರ ಮೀರ್‌ ಸಾದಿಕ್‌ ಜನರಿದ್ದರು. ಆದರೆ ಸ್ವಾತಂತ್ರ್ಯ ನಂತರ ಮೀರ್‌ ಸಾದಿಕ್‌ ಜನರ ಸಂಖ್ಯೆ ಹೆಚ್ಚಿದ್ದು ಭ್ರಷ್ಟಾಚಾರ ಹೆಚ್ಚಿದೆ. ಆಸ್ಪತ್ರೆ, ಹಾಸ್ಟೆಲ್‌, ಖಾತೆ ಮಾಡಲು ವಿಳಂಬ, ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಲು ಅಲೆದಾಟ ಸೇರಿದಂತೆ ಜನರನ್ನು ಅಲೆದಾಡಿಸುವ ಕೆಲಸ ಜಾಸ್ತಿಯಾಗುತ್ತಿದೆ. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಯವರು ಜನರ ತೆರಿಗೆ ಹಣದಿಂದ ಸಂಬಳ ಪಡೆದು ಕೆಲಸ ಮಾಡುತ್ತಿಲ್ಲ, ಎಲ್ಲಾ ಅಂಗಗಳಿದ್ದರೂ ಕರ್ತವ್ಯದಲ್ಲಿ ಶ್ರದ್ಧೆ ಇಲ್ಲದಂತಾಗಿದೆ. ಜನರ ಹಕ್ಕುಗಳನ್ನು ಮೊಟಕುಗೊಳಿಸಬಾರದು ಎಂದರು.ಭ್ರಷ್ಟಾಚಾರ ಮನೆಯಿಂದಲೇ ತೊಲಗಿಸಬೇಕು. ಭ್ರಷ್ಟಾಚಾರದ ಹಣದಿಂದ ಬಟ್ಟೆ ಕೊಳ್ಳುವುದಿಲ್ಲ, ಒಡವೆ ಖರೀದಿ ಮಾಡುವುದಿಲ್ಲ ಎಂಬ ಧೋರಣೆ ಮನೆಯಿಂದ ಆರಂಭವಾಗಬೇಕು. ಆದರೆ ಸಮಾಜದಲ್ಲಿ ಭ್ರಷ್ಟತೆಯಿಂದ ಹಣ ಸಂಪಾದಿಸಿದವರ ಹಿಂದೆ ನೊಣಗಳಂತೆ ಮುತ್ತಿಕೊಳ್ಳುತ್ತಾರೆ. ಸಮಾಜ ನೋಡುವ ದೃಷ್ಟಿ ಕೂಡ ಬದಲಾಗಬೇಕಿದೆ. ಕುರ್ಚಿ ಮತ್ತು ಸಂಪತ್ತು ಎಂದಿಗೂ ಶಾಶ್ವತವಲ್ಲ, ನಾವು ಮಾಡಿದ ಕೆಲಸ ಮಾತ್ರ ಗೌರವ ತಂದುಕೊಡುವುದರಿಂದ ಸೇವೆ ಮಾಡಲು ಸಿಕ್ಕಿರುವ ಅವಕಾಶವನ್ನು ಸಾರ್ವಜನಿಕರ ಕಣ್ಣೀರು ಒರೆಸುವ ಕೆಲಸ ಮಾಡಬೇಕೆಂದು ಸರ್ಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್‌, ಅಂಗನವಾಡಿ ಕೇಂದ್ರಗಳಲ್ಲಿ ಸುಧಾರಣೆ ಕಾಣಬೇಕಿದೆ. ನಕಲಿ ವೈದ್ಯರ ಹಾವಳಿ ನಿಯಂತ್ರಿಸಬೇಕು. ಜನರ ಹಕ್ಕುಗಳನ್ನು ಮೊಟಕುಗೊಳಿಸದೇ, ಅವರಿಗೆ ಸವಲತ್ತು ಒದಗಿಸಬೇಕು. ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸಕ್ಕಾಗಿ ವಿಳಂಬ ಮಾಡಬಾರದು ಎಂದರು.

ಸುಳ್ಳು ದೂರು ನೀಡಿದರೆ, ಕ್ರಮ:

ಲೋಕಾಯುಕ್ತದಲ್ಲಿ ದಾಖಲಾದ ದೂರುಗಳಲ್ಲಿ ಶೇ.30 ರಷ್ಟು ಸುಳ್ಳು ಕೇಸ್‌ ನೀಡಲಾಗಿದೆ. ಆದರೆ ಲೋಕಾಯುಕ್ತ ಸೆಕ್ಷನ್‌ 20 ರನ್ವಯ ಸುಳ್ಳು ದೂರು ನೀಡಿದಲ್ಲಿ 3 ವರ್ಷ ಜೈಲಿಗೆ ಕಳುಹಿಸಲಾಗುತ್ತದೆ. ಪ್ರಾಮಾಣಿಕ ಅಧಿಕಾರಿಗಳು ಇಂತಹ ದೂರುಗಳಿಂದ ಹೆದರುವ ಅವಶ್ಯಕತೆ ಇಲ್ಲ, ಭಯಪಡದೆ ಪ್ರಾಮಾಣಿಕವಾದ ಸೇವೆ ಮಾಡಿದವರಿಗೆ ಲೋಕಾಯುಕ್ತ ಎಂದಿಗೂ ರಕ್ಷಣೆ ನೀಡಲಿದೆ ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಾ ಮಾತನಾಡಿ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಸಾಕ್ಷಿ ನುಡಿಯುವಾಗ ವ್ಯತಿರಿಕ್ತ ಸಾಕ್ಷಿ ಹೇಳುವುದರಿಂದ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆಯಾಗುತ್ತವೆ. ಹಳ್ಳಿಯಲ್ಲಿರುವ ಸಾಮಾನ್ಯ ವ್ಯಕ್ತಿ ಸರಿಯಾದ ಸಾಕ್ಷಿ ಹೇಳುತ್ತಾರೆ, ಸರ್ಕಾರಿ ಅಧಿಕಾರಿಗಳು ಸಾಕ್ಷಿ ವೇಳೆ ತಿರುಚುತ್ತಾರೆ. ಈ ಬಗ್ಗೆ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕರು ಪರಿಶೀಲಿಸಬೇಕು ಎಂದರು.

ಲೋಕಾಯುಕ್ತ ಅಪರ ನಿಬಂಧಕ ಕೆ.ಎಂ. ರಾಜಶೇಖರ್‌, ಉಪನಿಬಂಧಕ ಪೃಥ್ವಿರಾಜ್‌, ಅರವಿಂದ ಎನ್.ವಿ., ಜಿಲ್ಲಾ ಮೂರನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ. ಅಬ್ದುಲ್‌ ರೆಹಮಾನ್‌ ನಂದಗಡಿ, ಹಿರಿಯ ಸಿವಿಲ್‌ ನ್ಯಾಯಾಧೀಶ ರಾಜೇಶ ಹೊಸಮನಿ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಎಸ್ಪಿ ಬಿ.ಎಲ್. ಶ್ರೀಹರಿಬಾಬು, ಲೋಕಾಯುಕ್ತ ಎಸ್‌.ಪಿ. ಸಿದ್ದರಾಜ್‌ ಹಾಗೂ ವಿವಿಧ ನ್ಯಾಯಾಧೀಶರು, ಅಧಿಕಾರಿಗಳು ಮತ್ತಿತರರಿದ್ದರು.

Share this article