ಹಾನಗಲ್ಲ: ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಳೆ ವಿಮಾ ಫಲಾನುಭವಿ ರೈತರಿರುವ ಹಾನಗಲ್ಲ ತಾಲೂಕಿನಲ್ಲಿ ಬೆಳೆ ವಿಮೆ ಬಗೆಗೆ ಹೆಚ್ಚು ಜಾಗೃತಿ ಇದೆ. ಎಲ್ಲೂ ಯಾವುದೇ ರೀತಿಯ ಲೋಪ ವಿಳಂಬಕ್ಕೆ ಅವಕಾಶವಿಲ್ಲದಂತೆ ಬೆಳೆ ಕಟಾವು ಪ್ರಯೋಗಗಳಿಗೆ ಸಿದ್ಧರಾಗಿ ಎಂದು ಗ್ರೇಡ್-೨ ತಹಸೀಲ್ದಾರ್ ರವಿಕುಮಾರ ಕೊರವರ ತಿಳಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಸಹಾಯಕ ನಿರ್ದೇಶಕ ಜಿ.ಆರ್.ಪಾಟೀಲ ತರಬೇತಿ ನೀಡಿ ಮಾತನಾಡಿ, ಬೆಳೆವಿಮೆ ವಿತರಣೆ ಸಂದರ್ಭದಲ್ಲಿ ಹಲವು ಲೋಪ ದೋಷಗಳ ಬಗೆಗೆ ರೈತರಿಂದ ದೂರುಗಳು ಬರುತ್ತವೆ. ಅವು ಆಗದಿರಲು ಬೆಳೆ ಕಟಾವು ಪ್ರಾತ್ಯಕ್ಷಿಕೆ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವುದು ಅತ್ಯಂತ ಮುಖ್ಯ. ರೈತರು ಕೂಡ ಎಲ್ಲ ಬಲ್ಲವರಾಗಿದ್ದಾರೆ. ಈ ಸಂದರ್ಭದಲ್ಲಿ ರೈತರ ಸಮ್ಮುಖದಲ್ಲಿ ವಾಸ್ತವ ವರದಿಯನ್ನು ನೀಡಬೇಕು. ಮಾಹಿತಿಯ ಕೊರತೆ ಇದ್ದರೆ ಯಾವುದೇ ಮುಜುಗುರವಿಲ್ಲದೆ ಮೇಲಧಿಕಾರಿಗಳಿಂದ ಮಾಹಿತಿ ಪಡೆದು ಸರಿಯಾದ ಬೆಳೆ ಕಟಾವು ವರದಿ ನೀಡಬೇಕು. ಪ್ರಾತ್ಯಕ್ಷಿಕೆಗಳು ಮನೆಯಲ್ಲಿಯೇ ಕುಳಿತು ಅಂದಾಜು ಮಾಡುವ ಕಾಲ ಇದಲ್ಲ. ಪ್ರಾತ್ಯಕ್ಷಿಕೆ ನಡೆಸಬೇಕಾದ ಜಮೀನಿನಲ್ಲಿ ಅಗತ್ಯ ದಾಖಲೆಗಳೊಂದಿಗೆ ಮೊಬೈಲ್ ಆ್ಯಪ್‌ನ್ನು ಸಹ ಬಳಸಿ ಸರಿಯಾದ ರೀತಿಯಲ್ಲಿ, ಸರಿಯಾದ ಅಳತೆಯಲ್ಲಿ ಪ್ರಾತ್ಯಕ್ಷಿಕೆ ನಡೆಯಬೇಕು. ನಿಖರ ಸಕಾಲಿಕ ಮಾಹಿತಿ ನೀಡಬೇಕು. ತಪ್ಪ ಮಾಹಿತಿ ನೀಡಿದರೆ ನೀವೇ ಜವಾಬ್ದಾರರಾಗುವಿರಿ ಎಂದು ಸಲಹೆ ನೀಡಿ ಎಚ್ಚರಿಸಿದರು.ಸಾಂಖಿಕ ಇಲಾಖೆ ಅಧಿಕಾರಿ ಪ್ರಮೋದ ಪಂಡಿತ್, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಕೆ. ಮೋಹನ್‌ಕುಮಾರ, ಕೃಷಿ ಇಲಾಖೆ ಅಧಿಕಾರಿ ಸಂಗಮೇಶ, ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ ಬಣಕಾರ, ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ.ಜಗದೀಶ ಈ ಸಂದರ್ಭದಲ್ಲಿದ್ದರು.