ಚಿತ್ರದುರ್ಗ: ದೇಶದಲ್ಲಿ ಇಂದು ಡ್ರಗ್ಸ್ ಮಾಫಿಯಾ ಸದ್ದು ಮಾಡುತ್ತಿದೆ. ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಬೇಕು ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಯುವಕರ ಮಾದಕ ವಸ್ತು ಸೇವನೆ ಲೋಕದಿಂದ ಹೊರತರುವ ಜವಾಬ್ದಾರಿ ಎಲ್ಲರೂ ಹೊರಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅಭಿಪ್ರಾಯಪಟ್ಟರು.
ಇಲ್ಲಿನ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕ್ಯಾಂಪಸ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಯುವಕರು ಡ್ರಗ್ಸ್ ದಂಧೆಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಂಡು ಜೀವ ತೊರೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.ಒಂದು ದೇಶ ಹಾಳು ಮಾಡಬೇಕಾದರೆ, ಯುವಸಮುದಾಯವನ್ನು ತಪ್ಪು ದಾರಿಯಲ್ಲಿ ನಡೆಸಿದರೆ ಸಾಕು. ಆ ದೇಶದ ಸರ್ವಾಂಗೀಣ ಅಭಿವೃದ್ಧಿ ನೆಲ ಕಚ್ಚುವುದರಲ್ಲಿ ಸಂದೇಹವಿಲ್ಲ. ವಿದ್ಯಾರ್ಥಿಗಳು ತಾವುಗಳು ವಿದ್ಯಾಭ್ಯಾಸ ಮಾಡುವ ಸಂಸ್ಥೆಗಳ ಆವರಣದಲ್ಲಿ ಹಾಸ್ಟೆಲ್‍ಗಳಲ್ಲಿ ಮಾದಕ ವಸ್ತುಗಳಿಗೆ ಬಲಿಯಾಗುವ ಸ್ನೇಹಿತರಿಗೆ ತಿಳುವಳಿಕೆ ಹೇಳಿ ಅವರನ್ನು ವ್ಯಸನ ಮುಕ್ತರನ್ನಾಗಿಸಿಬೇಕು. ಡ್ರಗ್ಸ್ ಸೇವಿಸುವ ನಾಲ್ಕರಲ್ಲಿ ಒಬ್ಬರು ಸಾವಿಗೀಡಾಗುತ್ತಿದ್ದಾರೆ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದರು.
ಡ್ರಗ್ಸ್ ಸೇವನೆಯಿಂದ ಕ್ಯಾನ್ಸರ್, ಸ್ಟ್ರೋಕ್, ಹೃದಯಾಘಾತ ಸಂಭವಿಸುತ್ತವೆ. ಡ್ರಗ್ಸ್ ಸೇವನೆ ಹಾಗೂ ಡ್ರಗ್ಸ್ ಪೆಡ್ಲರ್‌ಗಳ ಕುರಿತು ಸದಾ ಜಾಗೃತರಾಗಿರಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿ ಜೀವನವೇ ಶೂನ್ಯವಾಗುತ್ತದೆ. ವಿದ್ಯಾರ್ಥಿ ಜೀವನವನ್ನು ಸಮರ್ಥವಾಗಿ ಬಳಸಿಕೊಂಡು, ಉತ್ತಮ ಪ್ರಜೆಗಳಾಗಿ ತಂದೆ-ತಾಯಿಂದಿರ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಜೀವನ ಕಟ್ಟಿಕೊಳ್ಳಬೇಕು. ಪೊಲೀಸ್ ಇಲಾಖೆ ಡ್ರಗ್ಸ್ ದಂಧೆಕೋರರ ಮೇಲೆ ಸದಾ ಕಣ್ಣಿಟ್ಟಿರುತ್ತದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಡ್ರಗ್ಸ್ ಪೆಡ್ಲರ್‌ಗಳ ಬಗ್ಗೆ ಇಲಾಖೆಯ ಸಹಾಯವಾಣಿ, ಫೇಸ್‍ಬುಕ್, ಟ್ವಿಟರ್, ವಾಟ್ಸಪ್, ಇ-ಮೇಲ್ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಬಹುದು. ಖಚಿತ ಮಾಹಿತಿಯೊಂದಿಗೆ ಡ್ರಗ್ಸ್ ಪೆಡ್ಲರ್‌ಗಳ ಮೂಲಗಳನ್ನು ಹುಡುಕಿ ಅಂತಹವರ ವಿರುದ್ಧ ಪೋಲಿಸ್ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತದೆ ಎಂದರು.ಪ್ರಾಂಶುಪಾಲ ಡಾ.ಪಿ.ಬಿ.ಭರತ್ ಮಾತನಾಡಿ, ವಿದ್ಯಾರ್ಥಿಗಳು ಮೊದಲು ಡ್ರಗ್ಸ್ ಸೇವನೆ ಕುತೂಹಲಕ್ಕಾಗಿ ಶುರು ಮಾಡಿಕೊಂಡು ಅದರಿಂದ ಹೊರಬಾರದಷ್ಟು ದಾಸರಾಗಿ ಬಿಡುತ್ತಾರೆ. ಡ್ರಗ್ಸ್ ಸೇವಿಸುವುದು, ಸಾಗಣಿಕೆ ಮಾಡುವುದು, ಡ್ರಗ್ಸ್ ಪೆಡ್ಲರ್‌ಗಳ ಜೊತೆ ನೇರವಾಗಿ ಅಥವಾ ಪರೋಕ್ಷವಾಗಿ ವ್ಯವಹರಿಸುವುದು ಸಹಾ ಅಪರಾಧವಾಗುತ್ತದೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳು ನಮ್ಮ ಸಂಸ್ಥೆಯಲ್ಲಿ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಮಾದಕ ವಸ್ತು ಮುಕ್ತ ಕ್ಯಾಂಪಸ್ ನಿರ್ಮಿಸಲು ಇಂದಿನಿಂದಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಪೋಲಿಸ್ ಇಲಾಖೆಯವರು ಕೈಗೊಳ್ಳುವ ಯಾವುದೇ ತನಿಖೆಗೆ ಬದ್ಧರಾಗಿ ನಮ್ಮ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಫೋರೆನ್ಸಿಕ್ ವಿಭಾಗದ ಪ್ರೊ.ಕೃಷ್ಣ ಮಾತನಾಡಿ, ಮೆಥಾಂಫೆಟೈನ್ ಡ್ರಗ್ಸ್, ಕೋಕೇನ್, ಗಾಂಜಾ, ಅಫೀಮು ಅತಿ ಹೆಚ್ಚು ಅಪಾಯಕಾರಿ. ಡ್ರಗ್ಸ್ ಸೇವೆನೆ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಸಮಸ್ಯೆ ಉಂಟು ಮಾಡುತ್ತುದೆ. ಡ್ರಗ್ಸ್ ಸೇವಿಸುವವರು ಸಂಪೂರ್ಣ ಕ್ರಿಯಾಶೀಲತೆಯನ್ನು ಕಳೆದುಕೊಂಡು ಬಿಡುತ್ತಾರೆ. ಇಂತಹ ವ್ಯಸನಿಗಳಿಗೆ ಆಪ್ತ ಸಮಾಲೋಚನೆ ತುಂಬಾ ಸಹಕಾರಿಯಾಗಿರುತ್ತದೆ. ಅತಿ ಹೆಚ್ಚು ವ್ಯಸನಿಗಳಾಗಿದ್ದಾರೆ ವ್ಯಸನ ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆ ಕೊಡಿಸುವುದು ಉತ್ತಮ ಎಂದರು.ಎನ್ಎಸ್ಎಸ್ ಸಂಯೋಜಕ ಡಾ.ನಿರಂಜನ್, ನಿಲಯಪಾಲಕರಾದ ಡಾ.ಜೆ.ಸತೀಶ್, ಪ್ರೊ.ತನುಜಾ,ವಿವಿಧ ಇಲಾಖಾ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.