ಕನ್ನಡಪ್ರಭ ವಾರ್ತೆ ಮೈಸೂರು
ಯಾವುದೇ ಜಲಮೂಲಗಳ ನೀರನ್ನು ಕುಡಿಯುವ ನೀರು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ಬಳಸಬಾರದು. ಕುಡಿಯುವ ನೀರಿನ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿ ಮಾಡಿ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಸಿದ್ಧವಾಗಿರಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಬರ ನಿರ್ವಹಣಾ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆದಷ್ಟು ಹೊಸ ಕೊಳವೆಬಾವಿ ತೋಡಿಸುವುದಕ್ಕಿಂತ ಇರುವ ಕೊಳವೆ ಬಾವಿಗಳನ್ನು ದುರಸ್ತಿಪಡಿಸಿ ಮೋಟಾರ್, ಪಂಪ್ ಅಳವಡಿಸಿ. ಈ ಸಂದರ್ಭದಲ್ಲಿ ಒಂದು ಹನಿ ನೀರು ಪೋಲಾಗದಂತೆ ನೋಡಿಕೊಳ್ಳಿ. ಅವಶ್ಯ ಬಿದ್ದರೆ ಖಾಸಗಿ ಬೋರ್ ವೆಲ್ ಗಳನ್ನು ಉಪಯೋಗಿಸಿಕೊಳ್ಳಿ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ನದಿಪಾತ್ರದಲ್ಲಿ ಪಂಪ್ ಸೆಟ್ ಗಳನ್ನು ತೆರವುಗೊಳಿಸಲಾಗಿದೆ, ಕುಡಿಯುವ ನೀರನ್ನು ಕೃಷಿಗೆ ಬಳಸದಂತೆ ಜಾಗೃತಿ ಮೂಡಿಸಲಾಗಿದೆ. ಅಗತ್ಯಬಿದ್ದರೆ ಹಾರಂಗಿ, ಹೇಮಾವತಿಯಿಂದಲೂ ನೀರು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರಂಜಿತ್ ಮಾತನಾಡಿ, ಪ್ರಸ್ತುತ 2 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಖಾಸಗಿ ಬೋರ್ ವೆಲ್ ಮೂಲಕ ನೀರು ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 134 ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗುವ ಸಂಭವವಿದೆ. ಈ ಪೈಕಿ 36 ಗ್ರಾಮಗಳಿಗೆ ಪ್ರತಿನಿತ್ಯ ನೀರು ಪೂರೈಸಲಾಗುತ್ತಿದೆ ಎಂದು ಮಾಹಿತಿ ನೀಡಿದರು
ಪಶು ಸಂಗೋಪನಾ ಇಲಾಖೆ ಅಧಿಕಾರಿ ಮಾಹಿತಿ ನೀಡಿ, 34 ವಾರಗಳಿಗಾಗುವಷ್ಟು ಮೇವು ಲಭ್ಯವಿದ್ದು, ರೈತರಿಗೆ ಮೇವಿನ ಪೊಟ್ಟಣಗಳನ್ನೂ ಕೊಡಲಾಗುವುದು. ಈಗಾಗಲೇ 68 ಸಾವಿರ ಮೇವಿನ ಕಿಟ್ ಗಳನ್ನು ನೀಡಲಾಗಿದೆ. ಸದ್ಯ ಗೋಶಾಲೆ ತೆರೆಯುವ ಅವಶ್ಯಕತೆ ಇಲ್ಲ. ಈಗಾಗಲೇ ಅಂತರ ರಾಜ್ಯ ಮೇವು ಸಾಗಣೆ ನಿರ್ಬಂಧ ಜಾರಿಯಲ್ಲಿದೆ ಎಂದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಪೂರ್ವ ಮುಂಗಾರಿನಲ್ಲಿ ಹತ್ತಿ ಬೀಜಗಳ ಕೊರತೆ ಉಂಟಾಗಿದ್ದು, ಗುಣಮಟ್ಟ ಕಡಿಮೆ ಇದೆ. ಸದ್ಯ ರೈತ ಸಂಪರ್ಕ ಕೇಂದ್ರಗಳಲ್ಲಿ 1.20 ಲಕ್ಷ ಪಾಕೆಟ್ ಹತ್ತಿ ಬೀಜ ಲಭ್ಯವಿದೆ ಎಂದು ಹೇಳಿದರು.
ಈಗಾಗಲೇ ಬರ ಪರಿಹಾರದಡಿ ತಲಾ 2 ಸಾವಿರ ರುಪಾಯಿಗಳಂತೆ ಜಿಲ್ಲೆಯ 88620 ರೈತರಿಗೆ 15.83 ಕೋಟಿ ರು. ಪರಿಹಾರ ಖಾತೆಗಳಿಗೆ ಜಮೆಯಾಗಿದೆ ಎಂದರು.ಜಿಪಂ ಸಿಇಒ ಕೆ.ಎಂ. ಗಾಯತ್ರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.