ಲಿಚ್ಚಿ ಬೆಳೆಗಾರರಿಗೆ ವರದಾನವಾದ ಗರ್ಡ್ಲಿಂಗ್ ವಿಧಾನ

KannadaprabhaNewsNetwork | Published : Dec 14, 2024 12:47 AM

ಸಾರಾಂಶ

ಸೋಮವಾರಪೇಟೆ ತಾಲೂಕಿನ ಮಾದಾಪುರದ ಪ್ರಕಾಶ್ ಅವರ ಲಕ್ಷ್ಮಿಜಾಲ ಎಸ್ಟೇಟ್ ಹಾಗೂ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದಲ್ಲಿ ಚಿನ್ನಪ್ಪ ಅವರ ತೋಟದಲ್ಲಿ ಈ ವಿಧಾನ ಮಾಡಿ ಶೇ.80ರಷ್ಟು ಪ್ರಯೋಗ ಯಶಸ್ವಿಯಾಗಿದೆ. ಇಲ್ಲಿನ ತೋಟದಲ್ಲಿರುವ ನೂರು ಮರಗಳ ಪೈಕಿ 25 ಮರಗಳಿಗೆ ಈ ವಿಧಾನ ಪ್ರಯೋಗ ಮಾಡಲಾಗಿದ್ದು, ಮಾಡಿದ ಎಲ್ಲ ಮರಗಳಲ್ಲಿಯೂ ಫಸಲು ಬಂದಿರುವುದು ವಿಶೇಷ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಐದಾರು ವರ್ಷದ ಲಿಚ್ಚಿ ಹಣ್ಣಿನ ಮರಗಳಲ್ಲಿ ಹೂವಾಗುತ್ತಿಲ್ಲವೇ? ಹಣ್ಣು ಬಿಡುತ್ತಿಲ್ಲವೇ? ಈ ವಿಧಾನ ಮಾಡಿದರೆ ಪ್ರತಿ ವರ್ಷ ಹಣ್ಣು ಸಿಗುತ್ತದೆ. ಹೇಗೆ ಗೊತ್ತಾ...? ಅದೇ ಗರ್ಡ್ಲಿಂಗ್ (ತೊಗಟೆ ತೆಗೆಯುವಿಕೆ) ವಿಧಾನ. ಈ ವಿಧಾನ ದಕ್ಷಿಣ ಭಾರತದ ಲಿಚ್ಚಿ ಬೆಳೆಗಾರರಿಗೆ ವರದಾನವಾಗಿದೆ.

ಹೌದು, ದಕ್ಷಿಣ ಭಾರತದಲ್ಲಿ ಬೆಳೆಯುವ ಆಫ್ ಸೀಜನ್ ಲಿಚ್ಚಿಗೆ ಭಾರಿ ಬೇಡಿಕೆಯಿದೆ. ಕೊಡಗು, ಹಾಸನ, ಕೇರಳದ ವಯನಾಡು ಸೇರಿದಂತೆ ಹಲವು ಭಾಗದಲ್ಲಿ ಐದಾರು ವರ್ಷಗಳ ಲಿಚ್ಚಿ ಮರಗಳಿವೆ. ಆದರೆ ಅವುಗಳಲ್ಲಿ ಹೂವು ಬಿಡುವುದು ಹಾಗೂ ಫಸಲಿನ ಪ್ರಮಾಣ ತೀರಾ ಕಡಿಮೆಯಿದೆ. ಇದಕ್ಕಾಗಿ ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಿಂದ ಗರ್ಡ್ಲಿಂಗ್ (ತೊಗಟೆ ತೆಗೆಯುವಿಕೆ) ವಿಧಾನದ ಮೂಲಕ ಲಿಚ್ಚಿ ಮರದಲ್ಲಿ ಫಸಲು ಬರುವಂತೆ ಮಾಡಲಾಗಿದ್ದು, ಕೊಡಗು ಜಿಲ್ಲೆಯ ಎರಡು ಬೆಳೆಗಾರರ ತೋಟಗಳಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ಸೋಮವಾರಪೇಟೆ ತಾಲೂಕಿನ ಮಾದಾಪುರದ ಪ್ರಕಾಶ್ ಅವರ ಲಕ್ಷ್ಮಿಜಾಲ ಎಸ್ಟೇಟ್ ಹಾಗೂ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದಲ್ಲಿ ಚಿನ್ನಪ್ಪ ಅವರ ತೋಟದಲ್ಲಿ ಈ ವಿಧಾನ ಮಾಡಿ ಶೇ.80ರಷ್ಟು ಪ್ರಯೋಗ ಯಶಸ್ವಿಯಾಗಿದೆ. ಇಲ್ಲಿನ ತೋಟದಲ್ಲಿರುವ ನೂರು ಮರಗಳ ಪೈಕಿ 25 ಮರಗಳಿಗೆ ಈ ವಿಧಾನ ಪ್ರಯೋಗ ಮಾಡಲಾಗಿದ್ದು, ಮಾಡಿದ ಎಲ್ಲ ಮರಗಳಲ್ಲಿಯೂ ಫಸಲು ಬಂದಿರುವುದು ವಿಶೇಷ. 25ರಿಂದ 50 ಕೆಜಿಯಷ್ಟು ಫಸಲು ಬಂದಿದೆ. ಆದರೆ ಈ ವಿಧಾನ ಮಾಡದ ಇತರೆ ಗಿಡಗಳಲ್ಲಿ ಫಸಲಿಲ್ಲ. ಕಳೆದ ಏಳು ವರ್ಷದಿಂದ ಮರದಲ್ಲಿ ಯಾವುದೇ ಫಸಲು ಬಂದಿಲ್ಲ. ಇದೀಗ ಫಸಲು ಬಂದಿರುವುದರಿಂದ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಭಾರಿ ಬೇಡಿಕೆ: ದಕ್ಷಿಣ ಭಾರತದಲ್ಲಿ ಆಫ್ ಸೀಸನ್ ಲಿಚ್ಚಿ ಬರುವುದರಿಂದ ಬೇಡಿಕೆ ಹೆಚ್ಚಿದೆ. ಉತ್ತರ ಭಾರತದಲ್ಲಿ ಮೇ-ಜೂನ್ ತಿಂಗಳಲ್ಲಿ ಈ ಹಣ್ಣಿನ ಋತುವಾಗಿದ್ದು, ಅಲ್ಲಿನ ರೈತರಿಗೆ ಕೆ.ಜಿಯೊಂದಕ್ಕೆ 60ರಿಂದ80 ರುಪಾಯಿ ಮಾತ್ರ ಸಿಗುತ್ತದೆ. ಆದರೆ ನಮ್ಮಲ್ಲಿ ಆಗುವ ಆಫ್ ಸೀಸನ್ ಲಿಚ್ಚಿಗೆ 200- 250 ರುಪಾಯಿ ರೈತರಿಗೆ ಸಿಗುತ್ತದೆ. ಆದರೆ ಹೂವು ಬಿಡುವ ಸಮಸ್ಯೆ ಕಾರಣದಿಂದಾಗಿ ಹೆಚ್ಚು ರೈತರು ಇದನ್ನು ಬೆಳೆಯುತ್ತಿಲ್ಲ. ಇದೀಗ ಗರ್ಡ್ಲಿಂಗ್ ವಿಧಾನ ಮೂಲಕ ಫಸಲು ಬರುತ್ತಿರುವುದರಿಂದ ಹಲವು ರೈತರು ಈ ಹಣ್ಣು ಬೆಳೆಯಲು ಉತ್ಸುಕತೆ ತೋರುತ್ತಿದ್ದಾರೆ. ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ: ಚೆಟ್ಟಳ್ಳಿ ತೋಟಗಾರಿಕ ಪ್ರಾಯೋಗಿಕ ಕೇಂದ್ರದಲ್ಲಿ ಹಣ್ಣುಗಳ ಕುರಿತ ಅಖಿಲ ಭಾರತ ಸಂಘಟಿತ ಯೋಜನೆ ಮೂಲಕ ಈ ಬಗ್ಗೆ ಕಳೆದ ಐದು ವರ್ಷದಿಂದ ಸಾಕಷ್ಟು ಪ್ರಯೋಗ ನಡೆದಿದ್ದು, ಈ ಗರ್ಡ್ಲಿಂಗ್ ವಿಧಾನವನ್ನು ಮಾಡುವ ಮೂಲಕ ಫಸಲು ಬರುವಂತೆ ಮಾಡಲಾಗಿದೆ. ಈ ವಿಧಾನದ ಬಗ್ಗೆ ರೈತರಿಗೆ ಕೂಡ ಮಾಹಿತಿ ನೀಡುವ ನಿಟ್ಟಿನಲ್ಲಿ ಮಾದಾಪುರದ ಲಕ್ಷ್ಮಿಜಾಲ ತೋಟದಲ್ಲಿ 20 ಮಂದಿ ಆಸಕ್ತ ರೈತರೊಂದಿಗೆ ಕೇಂದ್ರದಿಂದ ಕ್ಷೇತ್ರ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಮಾಹಿತಿ ನೀಡಲಾಯಿತು. ಲಿಚ್ಚಿ ಮರದಲ್ಲಿ ಬಂದಿರುವ ಫಸಲನ್ನು ಕಂಡ ಇತರೆ ಲಿಚ್ಚಿ ಬೆಳೆಗಾರರು ತಾವು ಕೂಡ ತಮ್ಮ ತೋಟದಲ್ಲಿ ಈ ವಿಧಾನ ಮಾಡಲು ಮುಂದಾಗಿದ್ದಾರೆ.

ಈ ವಿಧಾನ ಮಾಡುವುದು ಹೇಗೆ?: ಹಲವು ವರ್ಷಗಳಿಂದ ಫಸಲು ಬಾರದಿರುವ ಲಿಚ್ಚಿ ಮರದ ಮೊದಲನೇ ಹಂತದ ರೆಂಬೆಗಳಲ್ಲಿ ಶೇ.50ರಷ್ಟು 4ಎಂ.ಎಂ ನಷ್ಟು ತೊಗಟೆಯನ್ನು ಚಾಕುವಿನಿಂದ ತೆಗೆಯಬೇಕು. ಇದನ್ನು ಹೂವು ಬಿಡುವ ನಾಲ್ಕರಿಂದ ಐದು ತಿಂಗಳ ಮುಂಚೆ ಮಾಡಬೇಕಾಗಿದೆ. ಮಾರ್ಚ್- ಏಪ್ರಿಲ್ ತಿಂಗಳು ಇದಕ್ಕೆ ಸೂಕ್ತವಾದ ಸಮಯವಾಗಿದೆ. ಈ ವಿಧಾನ ಮಾಡಿದರೆ ಫಸಲು ನಿಶ್ಚಿತ. ಮುಂದಿನ ವರ್ಷ ಸುಮಾರು ಎರಡು ಸಾವಿರ ಮರಗಳಿಗೆ ಈ ವಿಧಾನ ಮಾಡಬೇಕಿದೆ ಎನ್ನುತ್ತಾರೆ ಹಣ್ಣಿನ ವಿಜ್ಞಾನಿ ಮುರುಳೀಧರ್.

---------------

ದಕ್ಷಿಣ ಭಾರತದಲ್ಲಿ ಮಾತ್ರ ಆಫ್ ಸೀಜನ್ ಲಿಚ್ಚಿ ದೊರಕುತ್ತದೆ. ಈ ಸಮಯದಲ್ಲಿ ಇಲ್ಲಿನ ಲಿಚ್ಚಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಹಾಗೂ ಬೆಲೆಯೂ ಇದೆ. ಆದರೆ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಲ್ಲಿನ ಮರಗಳಲ್ಲಿ ಹೂವು ಹಾಗೂ ಫಸಲಾಗುತ್ತಿಲ್ಲ. ಇದಕ್ಕಾಗಿ ನಾವು ಗರ್ಡ್ಲಿಂಗ್ ವಿಧಾನವನ್ನು ಮಾಡಿದ್ದು, ಈ ವಿಧಾನ ದಕ್ಷಿಣ ಭಾರತದ ಲಿಚ್ಚಿ ಬೆಳೆಗಾರರಿಗೆ ವರದಾನವಾಗಿದೆ

-ಡಾ. ಮುರುಳೀಧರ್, ಹಣ್ಣಿನ ವಿಜ್ಞಾನಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಚೆಟ್ಟಳ್ಳಿ

ನಮ್ಮ ತೋಟದಲ್ಲಿ ನೂರು ಲಿಚ್ಚಿ ಮರಗಳಿವೆ. ಆದರೆ ಕಳೆದ ಏಳು ವರ್ಷದಿಂದ ಫಸಲು ಬಂದಿರಲಿಲ್ಲ. ಇದೀಗ ಚೆಟ್ಟಳ್ಳಿ ತೋಟಗಾರಿಕ ಪ್ರಾಯೋಗಿಕ ಕೇಂದ್ರದಿಂದ ಗರ್ಡ್ಲಿಂಗ್ ವಿಧಾನ ಮಾಡಿದ್ದು, ಈ ವರ್ಷ ಹೂವಾಗಿದ್ದು, ಉತ್ತಮ ಫಸಲು ಬಂದಿದೆ. ಇದರಿಂದ ಸಂತಸವಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಲಿಚ್ಚಿ ಬೆಳೆಯುದರಿಂದ ಕೂಡ ಆದಾಯ ಗಳಿಸಬಹುದಾಗಿದೆ-ವಿನಯ್ ಸೋಮಯ್ಯ, ಲಿಚ್ಚಿ ಬೆಳೆಗಾರ, ಲಕ್ಷ್ಮೀಜಾಲ ಎಸ್ಟೇಟ್‌ ಮಾದಾಪುರ

Share this article