ಶಿಗ್ಗಾಂವಿ: ಪ್ರೀತಿ ವಿಚಾರಕ್ಕೆ ಶಾಲಾ ಬಾಲಕಿಗೆ ಜೀವ ಬೆದರಿಕೆಯೊಡ್ಡಿ ಹಲ್ಲೆ ಮಾಡಿದ ಘಟನೆ ತಾಲೂಕಿನ ತಡಸ ಗ್ರಾಮದಲ್ಲಿ ಜರುಗಿದ್ದು, ಆರೋಪಿಯನ್ನು ಬಂಧಿಸಿ ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ.ತಡಸ ಗ್ರಾಮದ ಉರ್ದು ಶಾಲೆಯೊಂದರಲ್ಲಿ ೯ನೇ ತರಗತಿಯಲ್ಲಿ ಓದುತ್ತಿರುವ ೧೫ ವರ್ಷದ ಬಾಲಕಿ ಹಲ್ಲೆಯಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಾಲಕಿ ನಿತ್ಯವೂ ಶಾಲೆಗೆ ಹೋಗಿ ಬರುತ್ತಿದ್ದಳು. ಮಾಂಸ ವ್ಯಾಪಾರಿಯಾದ ಆರೋಪಿ ಇಮಾಮಹುಸೇನ್ ಮಹಿಬೂಬಲಿ ಮಹಲ್ದಾರ, ಬಾಲಕಿಯನ್ನು ಹಿಂಬಾಲಿಸಿ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ. ಸೆ. ೯ರಂದು ಬಾಲಕಿ ಬಳಿ ಹೋಗಿದ್ದ ಆರೋಪಿ, ನೀನು ನನ್ನನ್ನು ಪ್ರೀತಿ ಮಾಡಬೇಕು, ಇಲ್ಲದಿದ್ದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೈದಾಡಿ ಪತ್ರವೊಂದನ್ನು ಕೊಟ್ಟಿದ್ದ ಎನ್ನಲಾಗಿದೆ.ಆ ಪತ್ರವನ್ನು ತೆಗೆದುಕೊಳ್ಳಲು ಬಾಲಕಿ ನಿರಾಕರಿಸಿದ್ದಳು. ಆಗ ಆರೋಪಿ, ಬಾಲಕಿಯನ್ನು ಎಳೆದಾಡಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೃತ್ಯದ ಬಗ್ಗೆ ಬಾಲಕಿಯ ತಾಯಿ ದೂರು ನೀಡಿದ್ದಾರೆ. ಅದರನ್ವಯ ಆರೋಪಿ ಇಮಾಮಹುಸೇನ್ ಮಹಬೂಬಅಲಿ ಮಹಲ್ದಾರ ಎಂಬಾತನನ್ನು ಬಂಧಿಸಲಾಗಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಡಸ ಪೊಲೀಸರು ತಿಳಿಸಿದ್ದಾರೆ.ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು
ರಾಣಿಬೆನ್ನೂರು: ಬಾಲಕನನ್ನು ಅಪಹರಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಬುಧವಾರ ನಗರದ ಹೊರವಲಯದಲ್ಲಿ ನಡೆದಿದೆ. ಇರ್ಫಾನ್ ಶಬ್ಬೀರ ಭಂಡಾರಿ ದೌರ್ಜನ್ಯ ಎಸಗಿದ ಆರೋಪಿ.ತಮ್ಮ ಮಗನನ್ನು ಆರೋಪಿಯು ಬೊಲೆರೋ ವಾಹನದಲ್ಲಿ ಅಪಹರಿಸಿ ರಾಷ್ಟ್ರೀಯ ಹೆದ್ದಾರಿ 48ರ ಬೆನಕನಕೊಂಡ ಬ್ರಿಡ್ಜ್ ಬಳಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ವಾಹನ ನಿಲ್ಲಿಸಿ ಅದರಲ್ಲಿಯೇ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಆದ್ದರಿಂದ ಆರೋಪಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪಾಲಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.