- ಜಗಳೂರು ತಾಪಂ ಸಭಾಂಗಣದಲ್ಲಿ ದೇವರಾಜ ಅರಸು ಜನ್ಮದಿನ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಜಗಳೂರು
ಕತ್ತಿ, ಖಡ್ಗ ಹಿಡಿಯುವ ಕೈಗಳಲ್ಲಿ ಲೇಖನಿ ಕೊಡಿಸಬೇಕು. ಇದರ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೇವರಾಜ ಅರಸು ಅವರ ೧೦೮ನೇ ಜನ್ಮ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ದೇವರಾಜ ಅರಸು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಎಲೆಕ್ಟ್ರಾನಿಕ್ ಸಿಟಿ ಕಟ್ಟಲು ಕಾರಣೀಭೂತರು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಇವರ ಸರ್ಕಾರ ತೆಗೆದುಕೊಂಡಿತ್ತು. ಇದರ ಪ್ರತಿಫಲ ಇಂದಿನ ಪೀಳಿಗೆಗೆ ಲಭಿಸುತ್ತಿದೆ ಎಂದರು.ವಕೀಲ ಡಿ.ಶ್ರೀನಿವಾಸ್ ಉಪನ್ಯಾಸ ನೀಡಿ, ದೇವರಾಜು ಅರಸು ಬಾಲ್ಯದಿಂದಲೂ ವ್ಯವಸಾಯದ ಬಗ್ಗೆ ಆಸಕ್ತಿ ಹೊಂದಿದ್ದರು. ಶೋಷಿತ ಸಮುದಾಯದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಸಹಕಾರಿಯಾಗಿದ್ದರು. ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಜನ್ಮ ನೀಡಿದ ಖ್ಯಾತಿ ಅರಸು ಅವರಿಗೆ ಇತ್ತು. ಭೂ ಸುಧಾರಣಾ ಕಾಯ್ದೆ, ಜೀತ ಪದ್ಧತಿ ನಿಷಿದ್ಧ ಕಾಯ್ದೆ, ಮಲಹೊರುವ ಪದ್ಧತಿ ನಿಷಿದ್ಧ ಕಾಯ್ದೆ, ಋಣ ಪರಿಹಾರ ಕಾಯ್ದೆ ಸೇರಿದಂತೆ ಅನೇಕ ಜನಪರ ಕಾಯ್ದೆಗಳನ್ನು ತಂದರು. ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಮೀಸಲಾತಿ ಜಾರಿಗೆ ತಂದ ಕೀರ್ತಿಯೂ ಸಲ್ಲುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಾನಪದ, ಕನ್ನಡ ಚಿತ್ರಗೀತೆ ಹಾಡುಗಳಿಗೆ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ಮಾಡಿದರು.ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ತಾಪಂ ಇಒ ಕೆಂಚಪ್ಪ, ಪಿ.ಐ. ಶ್ರಿನಿವಾಸ್ ರಾವ್, ಪಪಂ ಮುಖ್ಯಾಧಿಕಾರಿ ಲೋಕ್ಯಾ ನಾಯ್ಕ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವಬಸಪ್ಪ ಬಳ್ಳಾರಿ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಟಿ.ಬಸವರಾಜ್, ಸಿಡಿಪಿಒ ಬೀರೇಂದ್ರ ಕುಮಾರ್, ಪಪಂ ಸದಸ್ಯರಾದ ರಮೇಶ್, ಲುಕ್ಮಾನ್ ಖಾನ್, ಲಲಿತಮ್ಮ, ನಿರ್ಮಲ ಕುಮಾರಿ, ಸಿ.ತಿಪ್ಪೇಸ್ವಾಮಿ, ಬಡಯ್ಯ, ಬಿ.ಮಹೇಶ್ವರಪ್ಪ ಮತ್ತಿತರರು ಇದ್ದರು.
- - - -21ಜೆಎಲ್ಆರ್2:ಜಗಳೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ದಿ. ಡಿ.ದೇವರಾಜ ಅರಸು ಅವರ ೧೦೮ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.