ಕನ್ನಡಪ್ರಭ ವಾರ್ತೆ ಗುಬ್ಬಿ
ಲೋಕಸಭಾ ಚುನಾವಣೆಯಲ್ಲಿ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸೇರಿದ ಮುರುಳೀಧರ್ ಹಾಲಪ್ಪ ಅವರಿಗೆ ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಒಳ್ಳೆಯ ಸ್ಥಾನಮಾನವನ್ನು ನೀಡಬೇಕು ಎಂದು ಕುಂಚಿಟಿಗ ಸಂಘದ ಕಾರ್ಯದರ್ಶಿ ಪುಟ್ಟಲಿಂಗಪ್ಪ ತಿಳಿಸಿದರು.ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಹಗಲಿರಳು ದುಡಿದು ಪಕ್ಷ ಸಂಘಟನೆಗೆ ಶ್ರಮಿಸಿದ ಮುರಳಿಧರ್ ಹಾಲಪ್ಪನವರಿಗೆ ತುಮಕೂರು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಟಿಕೆಟ್ ತಪ್ಪಿಸಿರುವುದು ತುಂಬಾ ನೋವುಂಟು ಮಾಡಿದೆ. ಗುಬ್ಬಿ ತಾಲೂಕಿನಲ್ಲಿ ಸುಮಾರು 27 ಸಾವಿರಕ್ಕೂ ಹೆಚ್ಚು ಕುಂಚಿಟಿಗ ಮತದಾರರಿದ್ದು, ಯಾವುದೇ ಕ್ಷೇತ್ರದಲ್ಲಿ ಅವಕಾಶ ಸಿಗದೇ ವಂಚಿತರಾಗಿದ್ದೇವೆ ನಮ್ಮಿಂದ ಪಕ್ಷಕ್ಕಾಗಿ ದುಡಿಸಿಕೊಂಡು ನಮ್ಮನ್ನು ಮೂಲೆ ಗುಂಪು ಮಾಡುವುದು ಸರಿಯೇ ಎಂದರು.
ಮುರಳೀಧರ್ ಹಾಲಪ್ಪನವರು ಒಬ್ಬ ಸಮಾಜ ಸೇವಕರಾಗಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದು, ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಒಬ್ಬ ಪ್ರಜ್ಞಾವಂತ ಅನುಭವಿ ರಾಜಕಾರಣಿಗೆ ಕೆಲವರ ಕುತಂತ್ರದಿಂದ ಟಿಕೆಟ್ ಕೈತಪ್ಪಿ ಹೋಗಿರುವುದು ನಮ್ಮ ಸಮುದಾಯಕ್ಕೆ ಅವಮಾನವಾಗಿದೆ. ಆದರೂ ಸಹ ನಾವು ಯಾರನ್ನೂ ದ್ವೇಷಿಸದೇ ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷಕ್ಕೋಸ್ಕರ ದುಡಿಯುತ್ತೇವೆ. ಮುರುಳೀಧರ್ ಹಾಲಪ್ಪ ನವರಿಗೆ ಕೇಂದ್ರದಲ್ಲಿ ಉನ್ನತ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.ತಿಪಟೂರು ಕುಂಚಿಟಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡಿ, ಹಾಲಪ್ಪನವರಂತಹ ನಿಷ್ಠಾವಂತ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ಕೈತಪ್ಪ ಬಾರದಿತ್ತು. ಬರುವ ಚುನಾವಣೆಗೂ ಮುನ್ನ ಕುಂಚಿಟಿಗರ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಪದಾಧಿಕಾರಿಗಳ ಸಭೆ ಕರೆದು ಚುನಾವಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಮುಖಂಡರಾದ ಶ್ರೀನಿವಾಸ್ , ಹೆಂಜಾರಪ್ಪ, ಕೃಷ್ಣಪ್ಪ, ಜಯಣ್ಣ, ಹೇಮಂತ್, ಕುಂಟ ರಾಮನಹಳ್ಳಿ ಶಿವಣ್ಣ, ತಮ್ಮೇಗೌಡ ಮುಂತಾದವರು ಉಪಸ್ಥಿತರಿದ್ದರು.