ಬಸವಂತಪ್ಪಗೆ ಸಚಿವ ಸ್ಥಾನಕ್ಕೆ ನೀಡಿ: ಗುಡ್ಡಪ್ಪ

KannadaprabhaNewsNetwork |  
Published : Jul 16, 2025, 01:30 AM IST
15ಕೆಡಿವಿಜಿ1, 2-ದಾವಣಗೆರೆಯಲ್ಲಿ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಎಚ್.ಸಿ.ಗುಡ್ಡಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಪರಿಶಿಷ್ಟ ಜಾತಿಗಳಲ್ಲೇ ಅತ್ಯಂತ ಹಿಂದುಳಿದ ಮಾದಿಗ ಸಮಾಜದ ಶಾಸಕ ಕೆ.ಎಸ್.ಬಸವಂತಪ್ಪಗೆ ಸಚಿವ ಸ್ಥಾನ ಹಾಗೂ ಮಾಜಿ ಸಚಿವ ಎಚ್.ಆಂಜನೇಯರಿಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಿಸುವ ಮೂಲಕ ಸಂಪುಟದಲ್ಲಿ ಸ್ಥಾನ ನೀಡುವಂತೆ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಎಚ್‌.ಸಿ.ಗುಡ್ಡಪ್ಪ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಶಿಷ್ಟ ಜಾತಿಗಳಲ್ಲೇ ಅತ್ಯಂತ ಹಿಂದುಳಿದ ಮಾದಿಗ ಸಮಾಜದ ಶಾಸಕ ಕೆ.ಎಸ್.ಬಸವಂತಪ್ಪಗೆ ಸಚಿವ ಸ್ಥಾನ ಹಾಗೂ ಮಾಜಿ ಸಚಿವ ಎಚ್.ಆಂಜನೇಯರಿಗೆ ವಿಧಾನ ಪರಿಷತ್ ಸದಸ್ಯರಾಗಿ ನೇಮಿಸುವ ಮೂಲಕ ಸಂಪುಟದಲ್ಲಿ ಸ್ಥಾನ ನೀಡುವಂತೆ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಎಚ್‌.ಸಿ.ಗುಡ್ಡಪ್ಪ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದ 36 ಮೀಸಲು ಕ್ಷೇತ್ರಗಳ ಪೈಕಿ ಮಾದಿಗ ಸಮಾಜದ ಐವರು ಮಾತ್ರ ಶಾಸಕರಾಗಿ ಆಯ್ಕೆಯಾಗಿದ್ದು, ಇಂತಹ ಸಮುದಾಯಕ್ಕೆ ಸಂಪುಟದಲ್ಲಿ ಸ್ಥಾನ ನೀಡುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್‌, ಸಿಎಂ, ಡಿಸಿಎಂ ಮಾಡುವ ಮೂಲಕ ಮಾದಿಗ ಸಮಾಜಕ್ಕೆ ಸ್ಪಂದಿಸಲಿ ಎಂದರು.

ರಾಜ್ಯದಲ್ಲಿ 1996ರಲ್ಲಿ ಮಾದಿಗ ಸಮಾಜದ 26 ಶಾಸಕರು ಆಯ್ಕೆಯಾಗಿದ್ದರು. ನಂತರದಲ್ಲಿ ನಮ್ಮ ಸಮಾಜದ ರಾಜಕೀಯ ಶಕ್ತಿ ಕುಂದುತ್ತಾ ಹೋಗಿದ್ದು, ಅಸ್ಪೃಶ್ಯರಲ್ಲದವರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಿ, ಮೀಸಲಾತಿ ಕಲ್ಪಿಸಿದ್ದರಿಂದಲೇ ಮಾದಿಗರಿಗೆ ಘೋರ ಅನ್ಯಾಯವಾಗುತ್ತಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮಾದಿಗ ಸಮಾಜ ತೀರಾ ಹಿಂದುಳಿದಿದೆ. ಇಂತಹ ಸಮಾಜಕ್ಕೆ ಶಕ್ತಿ ನೀಡುವ ಕೆಲಸ ಆಗಬೇಕು ಎಂದರು.

ಮಾಯಕೊಂಡ ಮೀಸಲು ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು. 101 ಜಾತಿಗಳಲ್ಲೇ ಅತ್ಯಂತ ಹಿಂದುಳಿದ ಸಮುದಾಯ ನಮ್ಮದು. ಜಿಪಂ ಸದಸ್ಯನಾಗಿದ್ದಾಗಿನಿಂದಲೂ ಕೆ.ಎಸ್.ಬಸವಂತಪ್ಪ ಕ್ಷೇತ್ರ, ಜಿಲ್ಲೆಯ ಜನರೊಂದಿಗೆ ಉತ್ತಮ ಒಡನಾಟ ಹೊಂದಿರುವ, ಜನರ ಸಮಸ್ಯೆಗೆ ಸ್ಪಂದಿಸುವ ವ್ಯ ಕ್ತಿ. ಇಂತಹ ಜನಪರ ಕಾಳಜಿ, ಉತ್ಸಾಹದ ಶಾಸಕರಿಗೆ ಸಂಪುಟದಲ್ಲಿ ಅವಕಾಶ ನೀಡುವ ಮೂಲಕ ಮಾದಿಗ ಸಮುದಾಯಕ್ಕೆ ಬಲ ನೀಡಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ನಲ್ಲಿ ಖಾಲಿ ಇರುವ ಸ್ಥಾನಕ್ಕೆ ಮಾಜಿ ಸಚಿವ ಎಚ್.ಆಂಜನೇಯರಿಗೆ ನೇಮಕ ಮಾಡಬೇಕು. ಹಿಂದೆ ಸಿದ್ದರಾಮಯ್ಯ ಮೊದಲ ಸಲ ಸಿಎಂ ಆದಾಗ ಸಮಾಜ ಕಲ್ಯಾಣ ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ ಅನುಭವಿ ಎಚ್.ಆಂಜನೇಯ. ನಾಲ್ಕೈದು ದಶಕದಿಂದಲೂ ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದು ಬಂದ ಮಾದಿಗ ಸಮಾಜದ ನಾಯಕ. ಇಂತಹ ಅನುಭವಿ ಆಂಜನೇಯರಿಗೆ ಎಂಎಲ್ಸಿ ಮಾಡಿ, ಸಂಪುಟದಲ್ಲಿ ಸ್ಥಾನಮಾನ ಮಾಡುವ ಮೂಲಕ ಶೋಷಿತ, ತುಳಿತಕ್ಕೊಳಗಾದ ಸಮುದಾಯಗಳನ್ನು ಮೇಲೆತ್ತುವ ಹೊಣೆಗಾರಿ ನೀಡಿ, ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.

ಮೂಲ ಅಸ್ಪೃಶ್ಯ ಸಮಾಜವಾದ ಮಾದಿಗ ಸಮುದಾಯವು ನಗರ, ಗ್ರಾಮೀಣ ಪ್ರದೇಶದಲ್ಲಿ ತೀರ ಕೆಳ ಹಂತದಲ್ಲಿ ಬಾಳುತ್ತಿದೆ. ಪರಿಶಿಷ್ಟ ಜಾತಿಯ ಸೋದರ ಸಮಾಜಗಳನ್ನ ಅತ್ಯಂತ ಪ್ರೀತಿ, ಆರೈಕೆಯಿಂದ ಕಾಣುವ ಇಂತಹ ಸಮಾಜವನ್ನೇ ಕಡೆಗಣಿಸುತ್ತಿರುವುದು ಸರಿಯಲ್ಲ. ಮಾದಿಗರ ಜೀವನ ಕಷ್ಟವಾಗುತ್ತಿದೆ. ಸಮುದಾಯಕ್ಕೆ ಶಿಕ್ಷಣ, ಉದ್ಯೋಗ, ಆರೋಗ್ಯದಂತಹ ಮೂಲ ಹಕ್ಕುಗಳೇ ಮರೀಚಿಕೆಯಾಗುತ್ತಿವೆ. ಮಾದಿಗ ಸಮುದಾಯ ರಾಜಕೀಯ ಶಕ್ತಿ ಪಡೆದಾಗ ಮಾತ್ರ ಶೋಷಿತ ಸಮುದಾಯಗಳ ಕಲ್ಯಾಣ ಸಾಧ್ಯವೆಂಬುದು ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಂರ ಆಶಯವಗಿತ್ತು. ಆದರೆ, ಅಂತಹ ಸಮುದಾಯವೇ ಕಡೆಗಣಿಸಲ್ಪಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಿತಿ ಪದಾಧಿಕಾರಿಗಳಾದ ಹೊನ್ನಾಳಿಯ ಜಿ.ಎಚ್.ತಮ್ಮಣ್ಣ, ಜಿ.ಎಚ್.ಮಹೇಶ, ಎಚ್.ಚಿದಾನಂದಪ್ಪ, ಎ.ಕೆ.ದೇವೇಂದ್ರಪ್ಪ, ಜಗಳೂರು ಜಿ.ಎಚ್.ಮಹೇಶ, ಹರಪನಹಳ್ಳಿ ಯಶೋಧರ, ಹರಿಹರದ ಎ.ಕೆ.ನಾಗೇಂದ್ರಪ್ಪ, ಈಚಘಟ್ಟದ ಕೆಂಚಪ್ಪ ಇತರರು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು