ಕನ್ನಡಪ್ರಭ ವಾರ್ತೆ ಹನೂರು ಬೇಸಿಗೆ ಪ್ರಾರಂಭವಾಗುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ಪ್ರಥಮ ಆದ್ಯತೆ ನೀಡಬೇಕೆಂದು ಜಿಪಂ ಉಪಕಾರ್ಯದರ್ಶಿ ಲಕ್ಷ್ಮಿ ಅವರು ತಿಳಿಸಿದರು. ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಪಂ ಪಿಡಿಒಗಳ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಬರ ನಿರ್ವಹಣೆಗೆ 25 ಲಕ್ಷ ರು.ಗಳ ಅನುದಾನ ಮೀಸಲಿದ್ದು ಶಾಸಕರ ಸಮಿತಿ ಅತಿ ಬರಪೀಡಿತ ಪ್ರದೇಶಗಳನ್ನು ಗುರುತು ಮಾಡಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ ಅಡಿ ಮರುಪೂರ್ಣ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ನೀಡಲು ಕ್ರಮವಹಿಸಬೇಕು, ಪೌಷ್ಟಿಕ ಆಹಾರ ಸೇವನೆಯ ವ್ಯವಸ್ಥೆ ಕೈಗೊಳ್ಳಿ. ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಶೌಚಾಲಯಗಳನ್ನು ನಿರ್ಮಿಸಿ, ಹೆಚ್ಚುವರಿ ಶೌಚಾಲಯಗಳು ಇರುವ ಶಾಲೆಗಳ ಬದಲಿಗೆ ಅವಶ್ಯಕತೆ ಇರುವ ಶಾಲೆಗಳಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು, ಕೂಸಿನ ಮನೆ ಸಮರ್ಪಕ ಕಾರ್ಯನಿರ್ವಹಿಸಲು ಕ್ರಮವಹಿಸಬೇಕು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನರೇಗಾ ಯೋಜನೆ ಅಡಿ ಅರಣ್ಯ ಇಲಾಖೆ ಉದ್ಯೋಗ ನೀಡಬೇಕು, ಆನೆ ಮತ್ತು ಮಾನವ ಸಂಘರ್ಷ ತಡೆಗಟ್ಟಲು ಅರಣ್ಯ ಇಲಾಖೆ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಬೇಕು, ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಸಕಲ ಸೌಕರ್ಯಗಳನ್ನು ಒದಗಿಸಬೇಕು ಹಾಗೂ ವಿವಿಧ ಇಲಾಖೆ ಬಗ್ಗೆ ಮಾಹಿತಿ ಪಡೆದು ಸಲಹೆ ಸೂಚನೆಗಳನ್ನು ನೀಡಿದರು.ಶಾಲಾ ಶಿಕ್ಷಕಿಯಾಗಿಯೇ ಪಾಠ:ಜಿಪಂ ಉಪಕಾರ್ಯದರ್ಶಿ ಲಕ್ಷ್ಮಿ ಅವರು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದ ಸಾಮಾನ್ಯ ಸಭೆಯಲ್ಲಿ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಪಾಠ ಮಾಡುವ ದಾಟಿಯಲ್ಲಿ ಪ್ರಶ್ನಿಸಿ, ಸಲಹೆ ಸೂಚನೆ ಮಾರ್ಗದರ್ಶನ ನೀಡುವ ಮೂಲಕ ಗಮನ ಸೆಳೆದರು. ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳನ್ನು ಮಾತಿನ ಚಾಟಿ ಮೂಲಕ ಬೆಂಡೆತ್ತಿದರು. ಸರಸ್ವತಿ ಹೋಗಿ ಲಕ್ಷ್ಮಿ ಬಂದಿದ್ದಾರೆ: ಇಲಾಖೆಯೊಂದರ ಅಧಿಕಾರಿಯೊಬ್ಬರು ಕೆಲವು ದಾಖಲೆಗಳನ್ನು ಪ್ರಸ್ತುತಪಡಿಸುತ್ತಾ ಮೇಡಂ ದಾಖಲೆಗಳನ್ನು ಸರಸ್ವತಿ ಮೇಡಂಗೆ ತಲುಪಿಸಿದ್ದೇನೆ ಎಂದಾಗ ಸರಸ್ವತಿ ಹೋಗಿ ಲಕ್ಷ್ಮಿ ಬಂದಾಯ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು. ಸಭೆಯಲ್ಲಿ ಪಿಡಿಒ ಗಳ ಉದ್ಧಟತನದ ಬಗ್ಗೆ ಕಿಡಿಕಾರಿದ ಲಕ್ಷ್ಮಿ ಗ್ರಾಮ ಪಂಚಾಯಿತಿ ಪಿಡಿಒಗಳ ಕಾರ್ಯವೈಖರಿಯ ಬಗ್ಗೆ ಇತರ ಇಲಾಖೆಯ ಅಧಿಕಾರಿಗಳೋಡನೆ ಮಾತನಾಡುವಾಗ ಪಿಡಿಒ ಗಳ ಪರ ನಿಂತದ್ದು ವಿಶೇಷವಾಗಿತ್ತು. ಎಲ್ಲಾ ಇಲಾಖೆಯವರಿಗೆ ಬೆಂಬಲ ಸಹಕಾರ ನೀಡುವವರೇ ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಾಧ್ಯಮಗಳಿಗೆ ಅಭಿನಂದನೆ:ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿ ರಾಜ್ಯದಲ್ಲೇ ಮುಂಜೂಣಿ ಸಾಲಿನಲ್ಲಿ ನಿಲ್ಲಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯ ಮಾಧ್ಯಮಗಳ ಪಾತ್ರವನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉಮೇಶ್, ಎಡಿ ರವೀಂದ್ರ, ಎಇಇ ಆರ್ ಡಿ ಪಿ ಆರ್ ಶಿವಪ್ರಕಾಶ್, ತಾಲೂಕು ವೈದ್ಯಾಧಿಕಾರಿ ಪ್ರಕಾಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.