ಮೃತರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಿ

KannadaprabhaNewsNetwork |  
Published : Oct 19, 2025, 01:00 AM IST
ಹೊಂಗನೂರು ಗ್ರಾ.ಪಂ. ವಾಟರ್‌ಮೆನ್ ಅತ್ಮಹತ್ಯೆ ಹಿನ್ನೆಲೆಯಲ್ಲಿ ಕುಟುಂಬದವರು ಭೇಟಿ ಮಾಡಿ ವೈಯಕ್ತಿಕ ಪರಿಹಾರ ನೀಡಿದ ಬಿಜೆಪಿ ಮುಖಂಡರು  | Kannada Prabha

ಸಾರಾಂಶ

ತಾಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿ ವಾಟರ್‌ಮೆನ್ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಕುಟುಂಬಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ನುಡಿದಂತೆ ಸರ್ಕಾರಿ ನೌಕರಿ ನೀಡಿ, ಕುಟುಂಬಕ್ಕೆ ೫೦ ಲಕ್ಷ ರು. ಪರಿಹಾರ ನೀಡಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿ. ಎಸ್. ನಿರಂಜನ್‌ಕುಮಾರ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿ ವಾಟರ್‌ಮೆನ್ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಕುಟುಂಬಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ನುಡಿದಂತೆ ಸರ್ಕಾರಿ ನೌಕರಿ ನೀಡಿ, ಕುಟುಂಬಕ್ಕೆ ೫೦ ಲಕ್ಷ ರು. ಪರಿಹಾರ ನೀಡಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿ. ಎಸ್. ನಿರಂಜನ್‌ಕುಮಾರ್ ಒತ್ತಾಯಿಸಿದರು.

ತಾಲೂಕಿನ ಹೊಂಗನೂರು ಗ್ರಾಮಕ್ಕೆ ಶನಿವಾರ ಮಾಜಿ ಶಾಸಕ ಎಸ್. ಬಾಲರಾಜು ಹಾಗೂ ಬಿಜೆಪಿ ಮುಖಂಡರೊಂದಿಗೆ ತೆರಳಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಪರಿಹಾರ ನೀಡಿ ಮಾತನಾಡಿದರು.

೨೭ ತಿಂಗಳು ಸಂಬಳ ನೀಡದೆ ಸತಾಯಿಸಿದ ಪಿಡಿಒ ಹಾಗೂ ಗ್ರಾ.ಪಂ. ಅಧ್ಯಕ್ಷೆ ಧೋರಣೆ ಸರಿಯಲ್ಲ. ಜಿಪಂ ಸಿಇಒ ಹಾಗೂ ಇಒಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳಿಂದ ಕರ್ತವ್ಯ ಲೋಪವಾಗಿದೆ. ಬಡ ಜೀವಕ್ಕೆ ಈ ಸರ್ಕಾರದಲ್ಲಿ ಬೆಲೆ ಇಲ್ಲ. ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆಯನ್ನು ಸರಿಯಾಗಿ ನಿಭಾಯಿಸದೆ, ಬೆಳಗ್ಗೆ ಎದ್ದರೆ ಆರ್‌ಎಸ್‌ಎಸ್ ವಿರುದ್ಧ ಮಾತನಾಡುವ ಚಳಿಯನ್ನು ಬೆಳೆಸಿಕೊಂಡು ಕಾಲಹರಣ ಮಾಡುತ್ತಿದ್ದರು. ಮೊದಲು ತಮ್ಮ ಇಲಾಖೆಯ ಭ್ರಷ್ಟಾಚಾರ ಹಾಗೂ ಗ್ರಾಪಂ ನೌಕರರಿಗೆ ನೀಡಬೇಕಾಗಿರುವ ಸಂಬಳವನ್ನು ಕೊಡಿಸಲು ಮುಂದಾಗಲಿ ಎಂದು ನಿರಂಜನ್‌ಕುಮಾರ್ ಸಲಹೆ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದ ನಂತರ ಇಂಥ ೪೦ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಒಬ್ಬ ಅಧಿಕಾರಿಗೆ ಒತ್ತಡಕ್ಕೆ ಮಣಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತ ಅನೇಕ ಪ್ರಕರಣಗಳು ನಡೆದಿದೆ. ಈ ಭ್ರಷ್ಟ ಸರ್ಕಾರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಹೊಂಗನೂರು ಗ್ರಾಮದ ಚಿಕ್ಕೂಸನಾಯಕ ಅವರ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಮ್ಮ ಪಕ್ಷ ಹೋರಾಟ ಮಾಡಲು ಬದ್ದವಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಎಸ್. ಬಾಲರಾಜು ಮಾತನಾಡಿ, ಇದೊಂದು ಘೋರ ಅನ್ಯಾಯ. ಹಿರಿಯ ಜೀವ ತಾನು ದುಡಿದ ಹಣ ಕೊಡಲಿಲ್ಲ ಎಂದು ನೊಂದು ಪಂಚಾಯಿತಿ ಕಚೇರಿಯಲ್ಲಿ ನೇಣು ಬಿಗಿದು ಕೊಂಡು ಸಾವಿಗೆ ಶರಣರಾಗಿದ್ದಾರೆ. ಕರ್ತವ್ಯ ಲೋಪವೆಸಗಿರುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಈಗಾಗಲೇ ಸೂಚಿಸಿರುವಂತೆ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು. ಮೃತ ಚಿಕ್ಕೂಸನಾಯಕನಿಗೆ ನೀಡಬೇಕಾಗಿದ್ದ ೨೭ ತಿಂಗಳ ಪೂರ್ತಿ ಈಗಾಗಲೇ ಕೊಡಬೇಕು. ಅಲ್ಲದೇ ಆತನ ಕುಟುಂಬಕ್ಕೆ ಆಶ್ರಯ ಮನೆ ಮಂಜೂರು ಮಾಡಿ, ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಗ್ರಾಮಾಂತರ ಮಂಡಲದ ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ರಾಜುನಾಯಕ, ಜಿಲ್ಲಾ ಉಪಾಧ್ಯಕ್ಷ ಟಗರಪುರ ರೇವಣ್ಣ, ಮುಖಂಡರಾದ ಹೊಂಗನೂರು ಮಹದೇವಸ್ವಾಮಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಪೋಲ್ ಮಹದೇವಸ್ವಾಮಿ, ಮೃತರ ಪುತ್ರ ರಂಗನಾಥ್, ಪುತ್ರಿ, ಪತ್ನಿ, ಹಾಗೂ ಕುಟುಂಬದವರು ಇದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ