ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಲೋಕಸಭಾ ಕ್ಷೇತ್ರದ ಬಹುತೇಕ ಎಲ್ಲಾ ತಾಲೂಕುಗಳ ಮುಖಂಡರು, ಮಾಜಿ ಸಚಿವರು, ಮಾಜಿ ಶಾಸಕರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರ ನಿಯೋಗವು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಭೇಟಿ ಮಾಡಿ ಒತ್ತಾಯಿಸಿದರು.ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಮತ್ತೊಂದು ಕಡೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಪ್ರತ್ಯೇಕವಾಗಿ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ, ಜಿ.ಕರುಣಾಕರ ರೆಡ್ಡಿ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಯುವ ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ, ಡಾ.ಟಿ.ಜಿ.ರವಿಕುಮಾರ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಸೇರಿ ನೂರಾರು ಮುಖಂಡರು ಭೇಟಿಯಾಗಿ ಪರ ಜಿಲ್ಲೆಯವರ ಬದಲಿಗೆ ದಾವಣಗೆರೆ ಜಿಲ್ಲೆಯವರಿಗೆ ಲೋಕಸಭೆ ಟಿಕೆಟ್ ನೀಡಲು ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಭೇಟಿ ಮಾಡಿದ ಮುಖಂಡರು, ಕಾರ್ಯಕರ್ತರು ಸಂಸದ ಸಿದ್ದೇಶ್ವರಗೆ ಲೋಕಸಭೆ ಟಿಕೆಟ್ ನೀಡುವುದಕ್ಕೆ ತಮ್ಮೆಲ್ಲರ ವಿರೋಧ ವ್ಯಕ್ತಪಡಿಸಿತು. ಯಾವುದೇ ಕಾರಣಕ್ಕೂ ಮತ್ತೆ ಸಿದ್ದೇಶ್ವರ್‌ಗೆ ಟಿಕೆಟ್ ಕೊಡಬಾರದು. ಒಂದು ವೇಳೆ ಕಾರ್ಯಕರ್ತರನ್ನು ಕಡೆಗಣಿಸಿ, ಅಭ್ಯರ್ಥಿ ಘೋಷಿಸಿದರೆ, ಚುನಾವಣೆಯಲ್ಲಿ ನಾವ್ಯಾರೂ ಬೆಂಬಲ ನೀಡುವುದಿಲ್ಲವೆಂಬುದಾಗಿ ನೇರವಾಗಿಯೇ ರಾಜ್ಯಾಧ್ಯಕ್ಷರ ಬಳಿ ಮುಖಂಡರು ಹೇಳಿಕೊಂಡಿದ್ದು, ಲೋಕಸಭೆ ಕ್ಷೇತ್ರದಲ್ಲಿ ಅಭ್ಯ್ರರ್ಥಿ ಘೋಷಣೆಗೆ ಮುನ್ನ ಸಮೀಕ್ಷೆ ಕೈಗೊಂಡು, ಆ ನಂತರ ಅಭ್ಯರ್ಥಿ ಘೋಷಿಸಬೇಕೆಂಬ ಮನವಿ ಮಾಡಿದೆ.ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿ:
ಮನವಿ ಆಲಿಸಿದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ನಿಮ್ಮೆಲ್ಲರ ಒತ್ತಾಸೆಯಂತೆ ದಾವಣಗೆರೆ ಕ್ಷೇತ್ರದಲ್ಲಿ ಸಮೀಕ್ಷೆ ಮಾಡಿಸುತ್ತೇವೆ. ಸಮೀಕ್ಷೆಯಲ್ಲಿ ಯಾರ ಪರ ಹೆಚ್ಚು ಒಲವು ಬರುತ್ತದೋ ಅಂತಹವರಿಗೆ ಟಿಕೆಟ್ ನೀಡಲು ಪಕ್ಷದ ಚುನಾವಣಾ ಸಮಿತಿಗೆ ರಾಜ್ಯ ಘಟಕ ಶಿಫಾರಸ್ಸು ಮಾಡುತ್ತದೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನೀವೆಲ್ಲರೂ ಬದ್ಧರಾಗಿರಬೇಕು. ಸಮೀಕ್ಷೆಯಲ್ಲಿ ಯಾರ ಹೆಸರು ಮುಂಚೂಣಿಗೆ ಬರುತ್ತದೋ ಅಂತಹವರಿಗೆ ಟಿಕೆಟ್ ನೀಡಲಾಗುತ್ತದೆ. 28 ಕ್ಷೇತ್ರದಲ್ಲೂ ಸಮೀಕ್ಷೆ ಆಧಾರದಲ್ಲೇ ಟಿಕೆಟ್ ನೀಡಲಾಗುವುದು. ಕಾರ್ಯಕರ್ತರು ಯಾರಿಗೆ ಒಲವು ತೋರುತ್ತಾರೋ, ಅಂತಹವರ ಆಶಯದಂತೆ ಪಕ್ಷ ನಡೆದುಕೊಳ್ಳುತ್ತದೆ ಎಂಬ ಭರವಸೆ ನೀಡಿದ್ದಾರೆ..........