ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶರಾವತಿ ವಿದ್ಯುತ್ ಯೋಜನೆಗಾಗಿ ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣದ ಸಮಯದಲ್ಲಿ ಸರ್ಕಾರವು ಸ್ವಾಧೀನಪಡಿಸಿಕೊಂಡಿದ್ದ ಭೂಮಿಯಲ್ಲಿ ಕೆಲ ಭಾಗ ಇಲ್ಲಿಯವರೆಗೆ ಮುಳುಗಡೆಯಾಗದೆ ಇದೆ. ಈ ಜಮೀನನ್ನು ಮೂಲ ಮಾಲಕರಿಗೆ, ಸಾಗುವಳಿದಾರರಿಗೆ ಬಿಟ್ಟುಕೊಡಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿಯ ತೀ.ನಾ.ಶ್ರೀನಿವಾಸ್ ಒತ್ತಾಯಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಲಿಂಗನಮಕ್ಕಿ ಆಣೆಕಟ್ಟಿಗಾಗಿ 1 ಲಕ್ಷ ಎಕರೆಗೂ ಹೆಚ್ಚು ಭೂಮಿಯನ್ನು ಕೆಪಿಸಿ ಭೂಮಿ ಸ್ವಾಧೀನ ಮಾಡಿ ಕೊಂಡಿತ್ತು. ಭೂಸ್ವಾಧೀನ ಕಾಯ್ದೆಯಲ್ಲಿ ಸರ್ಕಾರ ಯಾವುದೇ ಭೂಮಿಯನ್ನು ಸ್ವಾಧೀನ ಮಾಡಿಕೊಂಡರೆ ಆ ನಿಗದಿತ ಉದ್ದೇಶಕ್ಕೆ 5 ವರ್ಷದೊಳಗೆ ಬಳಸ ಬೇಕೆಂದಿದೆ. ಒಂದು ವೇಳೆ ಬಳಸಿಕೊಳ್ಳದಿದ್ದರೆ ಆ ಭೂಮಿಯನ್ನು ಮೂಲ ಮಾಲಿಕರಿಗೆ ಸಾಗುವಳಿದಾರರಿಗೆ ಬಿಟ್ಟು ಕೊಡಬೇಕೆಂದಿದೆ. ಹೀಗಾಗಿ ಈ ಜಾಗವನ್ನು ಮೂಲ ಮಾಲೀಕರಿಗೆ, ಸಾಗುವಳಿದಾರರಿಗೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.
ಕಳೆದ 64 ವರ್ಷಗಳು ಕಳೆದರೂ ಸಾಗರ, ಹೊಸನಗರ, ನಗರದ ಸುಮಾರು 15000 ಕುಟುಂಬಗಳು ಸ್ವಾಧೀನವಾಗಿರುವ ಆ ಭೂಮಿಯಲ್ಲೇ ಮನೆ ಕಟ್ಟಿಕೊಂಡು ಜಮೀನು ಸಾಗುವಳಿ ಮಾಡಿಕೊಂಡಿರುತ್ತಾರೆ. 64 ವರ್ಷವಾದರೂ ಎಂದೂ ಈ ಭೂಮಿ ಮುಳುಗಡೆ ಆಗಿಲ್ಲ. ಇದನ್ನು ಬಿಟ್ಟರೆ ಬಹುತೇಕ ಕುಟುಂಬಗಳಿಗೆ ಬೇರೆ ಭೂಮಿಯೇ ಇಲ್ಲ ಎಂದು ತಿಳಿಸಿದರು.ಭೂ ಸ್ವಾಧೀನ ಕಾಯ್ದೆಯಲ್ಲಿ ಸರಕಾರ ಯಾವುದೇ ಭೂಮಿಯನ್ನು ಸ್ವಾದೀನ ಮಾಡಿಕೊಂಡರೆ ಆ ನಿಗದಿತ ಉದ್ದೇಶಕ್ಕೆ 5 ವರ್ಷದೊಳಗೆ ಬಳಸಬೇಕೆಂದಿದೆ. ಒಂದು ವೇಳೆ ಬಳಸಿಕೊಳ್ಳದಿದ್ದರೆ ಆ ಭೂಮಿಯನ್ನು ಮೂಲ ಮಾಲಿಕರಿಗೆ, ಸಾಗುವಳಿದಾರರಿಗೆ ಬಿಟ್ಟು ಕೊಡಬೇಕೆಂದಿದೆ ಎಂದು ಮಾಹಿತಿ ನೀಡಿದರು.
ರೈತರು ಈ ಬೇಡಿಕೆಯನ್ನು ಕಾಗೋಡು ತಿಮ್ಮಪ್ಪ ವಿಧಾನ ಸಭಾಧ್ಯಕ್ಷರಾಗಿದ್ದಾಗ ಹಾಗೂ ಕಂದಾಯ ಸಚಿವರಾಗಿದ್ದಾಗ ಒಂದು ಮನವಿಯನ್ನು ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳಿಗೆ ಇಂತಹ ಭೂಮಿಯಲ್ಲಿ ಎಷ್ಟು ಜನ ಸಾಗುವಳಿದಾರರಿದ್ದಾರೆ. ಎಂಬುದನ್ನು ಸರ್ವೆ ಮಾಡಿ, ಪಟ್ಟಿ ಮಾಡಿ ಸರಕಾರಕ್ಕೆ ಕಳುಹಿಸಲು ಸೂಚಿಸಿದ್ದರು. ರೈತರು 50 ರಿಂದ 60 ವರ್ಷದಿಂದ ಹಕ್ಕುಪತ್ರ ಪಡೆದ ಭೂಮಿಯನ್ನು ಕಾನೂನು ಬಾಹಿರವಾಗಿ ಅರಣ್ಯ ಮಾಡಲು ಹೊರಟಿದ್ದಾರೆ. ಇದು ಖಂಡನೀಯ. ಜನಪ್ರತಿನಿಧಿಗಳು ನ್ಯಾಯಾಲಯದಲ್ಲಿ ವಸ್ತು ಸ್ಥಿತಿ ತಿಳಿಸದೇ, ಮನವರಿಕೆ ಮಾಡದೇ ಮಲೆನಾಡನ್ನು ಮಸಣ ಮಾಡಲು ಹೊರಟಿದ್ದಾರೆ. ಭೂಮಿ ನಮ್ಮ ಹಕ್ಕು. ಇದಕ್ಕೆ ಸಂಚಕಾರ ಬಂದರೆ ನಮ್ಮ ಜೀವವನ್ನೂ ತ್ಯಾಗ ಮಾಡಲು ಸಿದ್ಧ ಎಂದು ಅವರು ಗುಡುಗಿದರು.ಪತ್ರಿಕಾಗೋಷ್ಠಿಯಲ್ಲಿ ಚಕ್ರಪಾಣಿ ಕೊಡಸರ, ಅಶೋಕ ಕೊಡಸ, ಜಿನಧತ್ರ ಜೈನ್, ಪ್ರಕಾಶ ಕರೂರು, ಅಜಿತ್ ಕುಮಾರ್ ಜೈನ್ ಮುರಕ್ಕಿ, ಎಂ.ಎಂ.ಕೃಷ್ಣಮೂರ್ತಿ ಮಣಕನ ಮಠ, ತಿಮ್ಮಪ್ಪ ಕಿರುವಾಸೆ ಉಪಸ್ಥಿತರಿದ್ದರು.