ಕನ್ನಡಪ್ರಭ ವಾರ್ತೆ ಜಮಖಂಡಿ
ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕೆಂದು ಸ್ವದೇಶಿ ಜಾಗರಣಾ ಮಂಚ್ನ ಉತ್ತರ ಕರ್ನಾಟಕ ಪ್ರಾಂತ್ರ ಸಹ ಸಂಯೋಜಕ ಸಮೀರ ಕುಲಕರ್ಣಿ ಮನವಿ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಾಯಕಾರಿ ಕ್ರಿಮಿನಾಶಕ, ಕಳೆನಾಶಕ, ರಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಭೂಮಿಯಲ್ಲಿನ ಸೂಕ್ಷ್ಮಾಣು ಜೀವಿಗಳು ನಾಶವಾಗಿ ಬರಡು ಭೂಮಿಯಾಗಿ ಮಾರ್ಪಾಡಾಗುತ್ತದೆ. ರಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರ, ಬಳಕೆ ಹೆಚ್ಚಿಸಬೇಕೆಂದರು.
ಅತಿಯಾದ ಕ್ರಿಮಿನಾಶಕಗಳಿಂದ ಮಾರಕ ರೋಗಗಳನ್ನು ಬರಮಾಡಿಕೊಂಡತಾಗುತ್ತದೆ. ವಿಷಯುಕ್ತ ಆಹಾರ ರೈತರಿಂದ ಜನ ಸಾಮಾನ್ಯರ ಹೊಟ್ಟೆಗೆ ಸೇರುತ್ತದೆ. ಸಮಾಜಕ್ಕೆ ಶುದ್ಧವಾದ, ವಿಷಮುಕ್ತ ಆಹಾರ ಸರಬರಾಜು ಮಾಡುವುದು ರೈತರ ಕರ್ತವ್ಯವಾಗಿದೆ ಎಂದರು. ವಿಷ ಮುಕ್ತ ಶುದ್ಧ ಆಹಾರ ಪದಾರ್ಥಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಕ್ಕುತ್ತದೆ ಮತ್ತು ಉತ್ತಮವಾದ ಆಹಾರ ಪದಾರ್ಥಗಳನ್ನು ಬೆಳೆದ ತೃಪ್ತಿಯು ಇರುತ್ತದೆ. ಸ್ವದೇಶಿ ಜಾಗರಣಾ ಮಂಚ್ ಈ ನಿಟ್ಟಿನಲ್ಲಿ ಕಳೆದ 4 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಸಾವಯವ ಕೃಷಿಕರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡುತ್ತಿದೆ. ತಾಲೂಕಿನಲ್ಲಿ ಸಾವಯವ ಸಂತೆ ಏರ್ಪಡಿಸಿ ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳ ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗಿತ್ತು, ಸಾವಯವ ಸಂತೆಗೆ ಜನರ ಬೆಂಬಲವು ದೊರಕಿತ್ತು ಎಂದರು.60 ಜನ ಸಾವಯವ ರೈತರು ಸಂತೆಯಲ್ಲಿ ಭಾಗವಹಿಸಿದ್ದರು. ಸಾವಯವ ಪದ್ಧತಿಯಿಂದ ಕೃಷಿಯ ಕರ್ಚು ಕಡಿಮೆಯಾಗುವದರ ಜತೆಗೆ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಎಂದರು.
ಸ್ವದೇಶಿ ಜಾಗರಣಾ ಮಂಚ ಸ್ವಾವಲಂಬಿ ಭಾರತ ಎಂಬ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಯುವಕರು ಸ್ವಯಂ ಉದ್ಯೋಗಿಗಳಾಗಲು ಪ್ರೋತ್ಸಾಹಿಸಿ ಸದೃಢ ದೇಶ ಕಟ್ಟಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ನಮ್ಮ ಬೆಳೆ, ನಮ್ಮ ಉತ್ಪಾದನೆಗಳು ನಮಗಾಗೆ ಎಂಬ ಕಲ್ಪನೆಯನ್ನಿಟ್ಟು ಕೊಂಡಿದೆ. ಸ್ವದೇಶದ ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ನಮ್ಮ ಸಂಸ್ಕೃತಿಯ ಮಹತ್ವವನ್ನು ತಿಳಿಸಿಕೊಡುವ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿರ ಜಾಗೃತಿಯ ಗುರಿ ಹೊಂದಲಾಗಿದೆ. ಬಾಗಲಕೋಟೆಯಲ್ಲಿ ಪ್ರಾಂತ ಮಟ್ಟದ ಸಭೆ ನಡೆದು 9 ಜಿಲ್ಲೆಗಳ ಮಂಚ್‌ನ ಕಾರ್ಯಕರ್ತರು ಭಾಗವಹಿಸಿದ್ದರು ಎಂದು ವಿವರಿಸಿದರು.