ರೈಲ್ವೆ ಅಂಡರ್‌ಪಾಸ್ ನಿರ್ಮಾಣಕ್ಕೆ ಆದ್ಯತೆ ನೀಡಿ

KannadaprabhaNewsNetwork | Published : Jul 7, 2024 1:26 AM

ಸಾರಾಂಶ

ನಗರದ ರೈಲ್ವೆ ನಿಲ್ದಾಣ ಸಮೀಪದ ಬನಶಂಕರಿ, ಶಾಂತಿನಗರ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಅನುಕೂಲವಾಗುವಂತೆ ಈ ಭಾಗದಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂದು ನಿವಾಸಿಗಳು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ರೈಲ್ವೆ ನಿಲ್ದಾಣ ಸಮೀಪದ ಬನಶಂಕರಿ, ಶಾಂತಿನಗರ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಅನುಕೂಲವಾಗುವಂತೆ ಈ ಭಾಗದಲ್ಲಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಮಾಡಬೇಕು ಎಂದು ನಿವಾಸಿಗಳು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣಗೆ ಮನವಿ ಮಾಡಿದರು.ನಗರದಲ್ಲಿ ಕೇಂದ್ರ ಸಚಿವ ಸೋಮಣ್ಣರನ್ನು ಭೇಟಿ ಮಾಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತಂದರು. ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಸದಸ್ಯ ಬನಶಂಕರಿ ಬಾಬು ಅವರು ಸಚಿವ ಸೋಮಣ್ಣರಿಗೆ ಶಿವಾಜಿ ಮೂರ್ತಿ ಅರ್ಪಿಸಿದರು.

ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಸದಸ್ಯ ಬನಶಂಕರಿ ಬಾಬು ಮಾತನಾಡಿ, ಶಾಂತಿನಗರ, ಅಮರಜ್ಯೋತಿ ನಗರ, ಸರಸ್ವತಿಪುರ, ಮರಳೂರು, ಮರಳೂರು ದಿಣ್ಣೆ ಪ್ರದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಇಲ್ಲಿನವರು ನಿತ್ಯ ಶಾಲಾ ಕಾಲೇಜು, ಉದ್ಯೋಗ ವ್ಯವಹಾರಗಳಿಗೆ ಹೋಗಿ ಬರಲು ರೈಲ್ವೆ ನಿಲ್ದಾಣದ ಬಳಿ ಹಳಿ ದಾಟಲು ಅವಕಾಶವಿಲ್ಲ, ಇದರಿಂದ ದೂರದ ಮಾರ್ಗದಲ್ಲಿ ಬಳಸಿಕೊಂಡು ಓಡಾಡುವಂತಾಗಿದೆ. ಆದ್ದರಿಂದ ಈ ಭಾಗದಲ್ಲಿ ಪಾದಚಾರಿಗಳ ಸಂಚಾರಕ್ಕಾಗಿ ಅಂಡರ್ ಪಾಸ್, ಸ್ಕೈವಾಕ್ ನಿರ್ಮಾಣ ಮಾಡಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದರು.

ಈ ಪ್ರದೇಶದ ಸಾವಿರಾರು ಜನ ನಿತ್ಯ ಬೆಂಗಳೂರು ಮತ್ತಿತರ ಕಡೆಗೆ ಹೋಗಲು ರೈಲನ್ನು ಅವಲಂಬಿಸಿದ್ದಾರೆ. ಆದರೆ ಇಲ್ಲಿನವರು ರೈಲು ನಿಲ್ದಾಣ ಪ್ರವೇಶಿಸಲು ಸುವ್ಯವಸ್ಥಿತವಾದ ಮಾರ್ಗದ ವ್ಯವಸ್ಥೆಯಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ಅಲ್ಲದೆ ಬನಶಂಕರಿ-ಗಾಂಧಿ ನಗರ ಸಂಪರ್ಕಿಸುವ ರೈಲ್ವೆ ಅಂಡರ್‌ಪಾಸ್ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಧನಿಯಾಕುಮಾರ್, ಸೊಗಡು ಕುಮಾರಸ್ವಾಮಿ, ದೇವರಾಯಪಟ್ಟಣ ಬಸವಕುಮಾರ್, ಗೋಕುಲ್ ಮಂಜುನಾಥ್ ಮೊದಲಾದವರಿದ್ದರು.

Share this article