ಕನ್ನಡಪ್ರಭ ವಾರ್ತೆ ಬೀದರ್
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ಅದರ ಕಡೆಗೆ ಗಮನ ಹರಿಸಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.ಅವರು ಮಂಗಳವಾರ ಬೀದರ್ ದಕ್ಷಿಣ ಕ್ಷೇತ್ರದ ಸುಪ್ರಸಿದ್ಧ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಸಹಾಯಕ ಆಯುಕ್ತರ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿರುವ ಕುಂದುಕೊರತೆ ಕುರಿತು ಸಭೆ ನಡೆಸಿ ಭಕ್ತರ ಮತ್ತು ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಕೋಟಿಗಟ್ಟಲೆ ಆದಾಯವಿದ್ದರೂ ದೇವಸ್ಥಾನದ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಇಂದು, ನಿನ್ನೆಯದಲ್ಲ. ಮುಜರಾಯಿ ಇಲಾಖೆಯು ದೇವಸ್ಥಾನದಿಂದ ಬರುವ ಆದಾಯದಲ್ಲೇ ದೇವಾಲಯ ಅಭಿವೃದ್ಧಿ ಮಾಡಬಹುದು. ಅಗತ್ಯ ಸೌಕರ್ಯ ಒದಗಿಸಬಹುದು. ಆದರೆ ಮಾಡುತ್ತಲೇ ಇಲ್ಲ ಎಂಬ ದೂರುಗಳಿವೆ ಎಂದರು.ಹೊನ್ನಿಕೇರಿ ಸಿದ್ದೇಶ್ವರ ದೇಗುಲ ಶತಮಾನದಷ್ಟು ಪುರಾತನವಾದ ಈ ದೇವಾಲಯ, ಹಲವು ವಿಭಿನ್ನ ವಿಸ್ಮಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ.ಬೀದರ್ ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಈ ದೇಗುಲಕ್ಕೆ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸೇರಿ ಅನೇಕ ರಾಜ್ಯಗಳಿಂದ ಭಕ್ತರ ದಂಡು ಹರಿದು ಬರುತ್ತದೆ. ದೇಗುಲದ ಸುತ್ತ ನೀರಿನ ಹೊಂಡಗಳು ಇದ್ದು, ನೀರು ಕುಡಿದರೆ ದೇವರ ಆಶಿರ್ವಾದ ದೊರೆಯುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ಹರಕೆ ತಿರಿಸಿ ದೇವರ ದರ್ಶನ ಪಡೆದುಕೊಂಡು ಹೋಗುತ್ತಾರೆ. ಹೀಗಾಗಿ ದೇವಸ್ಥಾನದ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಅಲ್ಲದೇ ದೇವಸ್ಥಾನದ ಸ್ಥಳದಲ್ಲಿ ತಮ್ಮ ಅನುದಾನದಲ್ಲಿ ಯಾತ್ರಿ ನಿವಾಸ ನಿರ್ಮಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಡಾ.ಬೆಲ್ದಾಳೆ ಅವರಿಗೆ ಭಕ್ತರು ಹಾಗೂ ಸುತ್ತಲಿನ ಗ್ರಾಮಸ್ಥರು ದೂರು ನೀಡಿದರು.ಸಹಾಯಕ ಆಯುಕ್ತರಾದ ಲವೀಶ ಓರ್ಡಿಯಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಶುರಾಮ ಪತ್ತಗೊಂಡ, ಉಪಾಧ್ಯಕ್ಷರಾದ ಸಂಜುಕುಮಾರ ಮಾಶೆಟ್ಟಿ, ಹಣಮಂತಪ್ಪ ಮೈಲಾರೆ, ಅಶೋಕ ಪಾಟೀಲ, ಸಂತೋಷ ರೆಡ್ಡಿ, ಅರುಣಕುಮಾರ ಬಾವಗಿ, ಸೂರ್ಯಕಾಂತ, ಬಾಬುರಾವ, ವಿನೋದ, ರವಿಕುಮಾರ್, ರೇವಣಯ್ಯಾ ಸ್ವಾಮಿ, ಸಿದ್ದು ಸ್ವಾಮಿ, ಅರವಿಂದ ಬುಳ್ಳಾ ಮತ್ತಿತರರು ಉಪಸ್ಥಿತರಿದ್ದರು.