ಸಿನಿಮಾ ಮಾಡುವ ಮುಂಚೆಯೇ ಸಬ್ಸಿಡಿ ಕೊಡಿ: ಎಂ.ಎಸ್‌.ಸತ್ಯು ಸಲಹೆ

KannadaprabhaNewsNetwork | Updated : Mar 08 2024, 09:30 AM IST

ಸಾರಾಂಶ

ಭಾರತೀಯ ಚಲನಚಿತ್ರ ರಂಗಕ್ಕೆ ಸಲ್ಲಿಸಿರುವ ಸೇವೆಗೆ ಹಿರಿಯ ನಿರ್ದೇಶಕ ಎಂ.ಎಸ್‌.ಸತ್ಯು ಅವರಿಗೆ ಜೀವಮಾನ ಸಾಧನೆ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭಾರತೀಯ ಚಲನಚಿತ್ರ ರಂಗಕ್ಕೆ ಸಲ್ಲಿಸಿರುವ ಸೇವೆಗೆ ಹಿರಿಯ ನಿರ್ದೇಶಕ ಎಂ.ಎಸ್‌.ಸತ್ಯು ಅವರಿಗೆ ಜೀವಮಾನ ಸಾಧನೆ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.

ಬಳಿಕ ಮಾತನಾಡಿದ ಎಂ.ಎಸ್‌. ಸತ್ಯು ಅವರು, ಈ ಇಳಿವಯಸ್ಸಿನಲ್ಲಿ ಕರ್ನಾಟಕ ಸರ್ಕಾರ ಜೀವಮಾನ ಸಾಧನೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಅಭಾರಿಯಾಗಿದ್ದೇನೆ. 

ಮೂಕಿ ಚಿತ್ರದಿಂದ ಟಾಕಿ ಚಿತ್ರದವರೆಗೂ ಮತ್ತು ಕಪ್ಪು-ಬಿಳುಪು ಚಿತ್ರದಿಂದ ಇಲ್ಲಿಯವರೆಗೂ ಕನ್ನಡ ಚಿತ್ರರಂಗದ ಬೆಳವಣಿಗೆ ಬಹಳ ಕುತೂಹಲಕಾರಿಯಾಗಿದೆ. 

ಈ ಸಾಧನೆಗೆ ಅನೇಕ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಕಲಾವಿದರು ಒಳಗೊಂಡಂತೆ ಎಲ್ಲ ವರ್ಗದವರು ಕಾರಣಕರ್ತರು ಎಂದು ಶ್ಲಾಘಿಸಿದರು.

ಸಿನಿಮಾ ಅನಲಾಗ್‌ ತಂತ್ರಜ್ಞಾನದಿಂದ ಡಿಜಿಟಲ್‌ ತಂತ್ರಜ್ಞಾನಕ್ಕೆ ಪರಿವರ್ತನೆಗೊಂಡಿದ್ದು, ಯುವಸಮುದಾಯ ಹೆಚ್ಚು ಹೆಚ್ಚಾಗಿ ಸಿನಿಮಾ ರಂಗಕ್ಕೆ ಪ್ರವೇಶ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. 

ಆದರೆ, ಒಳ್ಳೆಯ ಚಿತ್ರಗಳು ಗಳಿಕೆಯಲ್ಲೂ ಹಿಂದೆ ಬೀಳುವುದರಿಂದ ಯುವ ನಿರ್ಮಾಪಕರಲ್ಲಿ ಚಿತ್ರರಂಗದ ಬಗ್ಗೆ ಬೇಸರ ಹೆಚ್ಚಾಗದಂತೆ ನೋಡಿಕೊಳ್ಳುವ ಅವಶ್ಯಕತೆಯೂ ಇದೆ. ಆದ್ದರಿಂದ ರಾಜ್ಯ ಸರ್ಕಾರ ಸಿನಿಮಾ ಮಾಡುವ ಮುಂಚೆ ಸಬ್ಸಿಡಿ ಕೊಡಬೇಕು. 

ಅದಕ್ಕಾಗಿ ಒಂದು ಸಮಿತಿಯನ್ನು ರಚನೆ ಮಾಡಿ ಹೊಸ ನಿಯಮವನ್ನು ಅಳವಡಿಸಬೇಕು. ಆಗ ಸಿನಿಮಾ ಮಾಡಲು ಮುಂದೆ ಬಂದು ಕೈಸುಟ್ಟುಕೊಳ್ಳದಂತೆ ನೆರವು ನೀಡಿದರೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಚಿತ್ರರಂಗದ ಕಡೆಗೆ ಮುಖಮಾಡಿ ಒಳ್ಳೆಯ ಚಿತ್ರಗಳನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ಡಾಲಿ ಧನಂಜಯ ಅವರು ಮಾತನಾಡಿ, ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಯಶಸ್ವಿಯಾಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದೆಯೂ ಇದೇ ರೀತಿ ಸಿನಿಮಾ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ವಿನಂತಿಸಿದರು. 

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಅವರು ಮಾತನಾಡಿ, ಕನ್ನಡ ಚಲನಚಿತ್ರ ರಂಗಕ್ಕೆ ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಷ್‌ ಮತ್ತು ಶಂಕರ್‌ನಾಗ್‌ ಅವರ ಕೊಡುಗೆ ಅಪಾರ. ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಿಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದ. 

ನನಗೆ ಸಿಕ್ಕಿರುವ ಅಧಿಕಾರವನ್ನು ಚಿತ್ರರಂಗದ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇನೆ. ಕೈಲಾದಷ್ಟು ಮಟ್ಟದಲ್ಲಿ ಕನ್ನಡಚಿತ್ರರಂಗಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದರು. 

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಕಾರ್ಯದರ್ಶಿ ಡಾ.ಕೆ.ವಿ.ತ್ರಿಲೋಕ್‌ಚಂದ್ರ, ಆಯುಕ್ತ ಹೇಮಂತ್‌ ಎಂ.ನಿಂಬಾಳ್ಕರ್‌, ಕಲಾತ್ಮಕ ನಿರ್ದೇಶಕ ಎನ್‌.ವಿದ್ಯಾಶಂಕರ್‌, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌.ಎಂ.ಸುರೇಶ್‌ ಉಪಸ್ಥಿತರಿದ್ದರು.

‘ನಿರ್ವಾಣ ಕನ್ನಡದ ಮೊದಲ ಅತ್ಯುತ್ತಮ ಚಿತ್ರ’:15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರ, ಭಾರತೀಯ ಚಲನಚಿತ್ರ ಮತ್ತು ಏಷ್ಯನ್‌ ಚಲನಚಿತ್ರ ಎಂಬ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆದಿತ್ತು. 

ಕನ್ನಡ ಚಲನಚಿತ್ರ ಸ್ಪರ್ಧೆಯಲ್ಲಿ ಕೆ.ಮಂಜು, ಅವಿನಾಶ್‌ ಶೆಟ್ಟಿ ನಿರ್ಮಾಣದ, ಎಲ್‌.ಅಮರ್‌ ನಿರ್ದೇಶನದ ನಿರ್ವಾಣ (ಮೊದಲ ಅತ್ಯುತ್ತಮ ಚಿತ್ರ), ಕೆ.ಯಶೋದಾ ಪ್ರಕಾಶ್‌ ನಿರ್ದೇಶಿಸಿ ನಿರ್ಮಿಸಿದ ಕಂದೀಲು (ಎರಡನೇ ಅತ್ಯುತ್ತಮ ಚಿತ್ರ) ಮತ್ತು ದೇವಗಂಗಾ ಪ್ರೇಮ್ಸ್‌ ನಿರ್ಮಾಣದ, ರಾಮಸ್ವಾಮಿ ನಿರ್ದೇಶಿಸಿರುವ ಆಲಿಂಡಿಯಾ ರೇಡಿಯೋ (ಮೂರನೇ ಅತ್ಯುತ್ತಮ ಚಿತ್ರ), ಶ್ರೀಕಾಂತ್‌ ಕಟಗಿ ನಿರ್ದೇಶನದ ಕ್ಷೇತ್ರಪತಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಹಾಗೂ ರಾಜ್‌ ಬಿ.ಶೆಟ್ಟಿ ನಿರ್ದೇಶನದ ಸ್ವಾತಿಮುತ್ತಿನ ಮಳೆ ಹನಿಯೇ ನೆಟ್‌ಪ್ಯಾಕ್‌ ತೀರ್ಪುಗಾರರ ಪ್ರಶಸ್ತಿಗೆ ಭಾಜನವಾದವು. 

ಭಾರತೀಯ ಚಲನಚಿತ್ರ ಸ್ಪರ್ಧೆಯಲ್ಲಿ ಶ್ಯಾಮ್ಚಿ ಆಯಿ (ಮರಾಠಿ), ಅಯೋಥಿ (ತಮಿಳ್‌) ಮತ್ತು ಛಾವೆರ್‌ (ಮಲಯಾಳಂ) ಚಲನಚಿತ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಅತ್ಯುತ್ತಮ ಚಿತ್ರಗಳ ಪ್ರಶಸ್ತಿ ಪಡೆದುಕೊಂಡವು. 

ಇದೇ ಸಂದರ್ಭದಲ್ಲಿ ಸುಜಯ್‌ ದಹಕೆ ನಿರ್ದೇಶನದ ಪುಣೆ ಫಿಲಂ ಕಂಪನಿ ನಿರ್ಮಾಣದ ಮರಾಠಿಯ ಶ್ಯಾಮ್ಚಿ ಆಯಿ ಚಲನಚಿತ್ರವು ಫಿಪ್ರೆಸ್ಕಿ ಪ್ರಶಸ್ತಿ ಪಡೆದುಕೊಂಡಿತು. 

ಏಷ್ಯನ್‌ ಚಲನಚಿತ್ರ ಸ್ಪರ್ಧೆಯಲ್ಲಿ ಅಮ್ಜದ್‌ ಅಲ್‌ ರಶೀದ್‌ ನಿರ್ದೇಶನದ ಇನ್ಶಲ್ಲಾಹ್‌ ಎ ಬಾಯ್‌ (ಮೊದಲ ಅತ್ಯುತ್ತಮ ಚಿತ್ರ), ಜಯಂತ್‌ ದಿಗಂಬರ್‌ ಸೋಮಾಲ್ಕರ್‌ ನಿರ್ದೇಶನದ ಮರಾಠಿ ಚಿತ್ರ ಸ್ಥಳ್‌ (ಎರಡನೇ ಅತ್ಯುತ್ತಮ ಚಿತ್ರ) ಹಾಗೂ ಉಜ್ಬೇಕಿಸ್ತಾನದ ಶೋಕಿರ್‌ ಕೊಲಿಕೊವ್‌ ನಿರ್ದೇಶನದ ಸಂಡೇ (ತೃತೀಯ ಅತ್ಯುತ್ತಮ ಚಿತ್ರ) ಮತ್ತು ಕನ್ನಡದ ಸುಮಂತ್‌ ಭಟ್‌ ನಿರ್ದೇಶನದ ಮಿಥ್ಯ ಚಲನಚಿತ್ರವು ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಭಾಜನವಾದವು.

Share this article