ಜನರ ಜೀವ ಉಳಿಸಲು ನಮಗೆ ಜೀವ ಜಲ ಕೊಡಿ: ಶಾಸಕ

KannadaprabhaNewsNetwork |  
Published : Mar 14, 2024, 02:02 AM IST
ತರೀಕೆರೆ ತಾಲೂಕು ಲಕ್ಕಿಹಳ್ಳಿ ಗ್ರಾಮದಲ್ಲಿ ಹೊಸದುರ್ಗ ತಾಲೂಕಿನ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಶುದ್ಧ ನೀರು ಪೂರೈಸುವ ಸುಮಾರು 249 ಕೋಟಿ ವೆಚ್ಚದ ನೀರು ಶುದ್ಧೀಕರಣ ಘಟಕ ಕಾಮಗಾರಿಗೆ ಬುಧವಾರ ಶಾಸಕ ಬಿಜಿ ಗೋವಿಂದಪ್ಪ ಹಾಗೂ ತರೀಕೆರೆ ಶಾಸಕ ಶ್ರೀನಿವಾಸ್  ಶಂಕುಸ್ಥಾಪನೆ ನೆರವೇರಿಸಿದರು. | Kannada Prabha

ಸಾರಾಂಶ

ಇತ್ತೀಚಿನ ಬೇಸಿಗೆ ಜನರ ಜೀವನಕ್ಕೆ ಹಾನಿ ಮಾಡುತ್ತಿದೆ. ಎಲ್ಲೆಡೆ ನೀರಿನ ಮಿತವ್ಯಯವಾಗಿದೆ.

ಹೊಸದುರ್ಗ: ಜನರ ಜೀವ ಉಳಿಸಲು ನಮಗೆ ಜೀವ ಜಲ ಕೊಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜಿ.ಗೋವಿಂದಪ್ಪ ತರೀಕೆರೆ ತಾಲೂಕಿನ ಜನರನ್ನು ಕೇಳಿಕೊಂಡರು.

ತರೀಕೆರೆ ತಾಲೂಕು ಲಕ್ಕಿಹಳ್ಳಿ ಗ್ರಾಮದಲ್ಲಿ ಹೊಸದುರ್ಗ ತಾಲೂಕಿನ ಬಹುಗ್ರಾಮ ಕುಡಿಯುವ ಯೋಜನೆಯಲ್ಲಿ ನೀರು ಪೂರೈಸುವ ಸುಮಾರು 249 ಕೋಟಿ ರು. ವೆಚ್ಚದ ನೀರು ಶುದ್ಧೀಕರಣ ಘಟಕ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂಜೂರಾದ ಕಾರ್ಯಕ್ರಮವಾಗಿದ್ದು, ನಂತರ ಬಂದ ಬಿಜೆಪಿ ಸರ್ಕಾರ ಈ ಯೋಜನೆಗೆ ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲವು ಹಳ್ಳಿಗಳನ್ನು ಸೇರಿಸಿದ್ದಾರೆಯೇ ಹೊರತು ಕಾಮಗಾರಿ ಪ್ರಾರಂಭಿಸಲಿಲ್ಲ. ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕಾಮಗಾರಿಗೆ ವೇಗ ನೀಡಿದ್ದು, ಕೆಲಸ ಮುಗಿಯಲು ತರೀಕೆರೆ ಜನರ ಸಹಕಾರ ಮುಖ್ಯ ಎಂದರು.

ಹೊಸದುರ್ಗ ತಾಲೂಕಿಗೆ ನೀರು ಬರಲು ಇಲ್ಲಿಂದ 75 ಕಿಮೀ ಪೈಪ್‌ಲೈನ್ ಆಗುತ್ತಿದೆ. ಈಗಾಗಲೇ ಸುಮಾರು 50 ಕಿಮೀ ಕೆಲಸ ಚಾಲ್ತಿಯಲ್ಲಿದ್ದು, ಲಕ್ಕುವಳ್ಳಿ ಗ್ರಾಮದ ಬಳಿ 25 ಕಿ.ಮೀ. ಕೆಲಸ ಪ್ರಾರಂಭಿಸಬೇಕಿದೆ ಇದಕ್ಕೆ ಈ ಭಾಗದ ಜನರು ಸಹಕರಿಸುವಂತೆ ಮನವಿ ಮಾಡಿದರು.

ತರೀಕೆರೆ ಶಾಸಕ ಶ್ರೀನಿವಾಸ್ ಮಾತನಾಡಿ, 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಹೊಸದುರ್ಗದಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಆದರೆ ಅದು ಕೇವಲ ಹೊಸದುರ್ಗ ಮತ್ತು ತರೀಕೆರೆ ಕೆಲ ಗ್ರಾಮಗಳಿಗೆ ಸೀಮಿತವಾಗಿದ್ದ ಯೋಜನೆಯನ್ನು ಬಿಜೆಪಿ ಸರ್ಕಾರ ಕಡೂರು ಹಾಗೂ ಅಜ್ಜಂಪುರ ತಾಲೂಕುಗಳನ್ನು ಸೇರಿಸಿದೆ. ಎಲ್ಲಾ ಗ್ರಾಮಗಳಿಗೆ ಇಲ್ಲಿಯೇ ನೀರು ಶುದ್ಧೀಕರಣ ಮಾಡಿ ಸರಬರಾಜು ಮಾಡಲಾಗುತ್ತದೆ. ಇನ್ನೊಂದು ವರ್ಷದೊಳಗೆ ತರೀಕೆರೆ ಹಾಗೂ ಹೊಸದುರ್ಗ ತಾಲೂಕಿನ ಎಲ್ಲಾ ಗ್ರಾಮಗಳಿಗೆ ನೀರು ಸಿಗಲಿದೆ. ಕುಡಿಯುವ ನೀರಿಗಾಗಿ 1.5 ಟಿಎಂಸಿ ನೀರನ್ನು ಕಾಯ್ದೆರಿಸಲಾಗಿದೆ ಎಂದರು. ತರೀಕೆರೆ ಹಾಗೂ ಹೊಸದುರ್ಗ ತಾಲೂಕಿನ ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರುಗಳು ಹಾಜರಿದ್ದರು.

ಲಕ್ಕವಳ್ಳಿಗೆ ನೀರು ಕೊಟ್ಟರೆ ಮಾತ್ರ ಹೊಸದುರ್ಗಕ್ಕೆ ನೀರು: ಮೊದಲ ಹಂತದಲ್ಲಿ ಹೊಸದುರ್ಗ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಹಾಗೂ ತರೀಕೆರೆ ತಾಲೂಕಿನ ಕೆಲ ಗ್ರಾಮಗಳಿಗೆ ಮಾತ್ರ ನೀರು ಸಿಗಲಿದೆ ಎನ್ನುತ್ತಿದ್ದಂತೆ ನೆರೆದಿದ್ದ ಸ್ಥಳೀಯರು ಲಕ್ಕವಳ್ಳಿಗೆ ನೀರು ಕೊಟ್ಟರೆ ಮಾತ್ರ ಹೊಸದುರ್ಗಕ್ಕೆ ನೀರು ಹರಿಯಲು ಬಿಡುತ್ತೇವೆ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ತಕರಾರು ಮಾಡಿದರು. ಈ ವೇಳೆ ಇಬ್ಬರು ಶಾಸಕರು ಗ್ರಾಮಸ್ಥರಿಗೆ ಸಮಾಧಾನ ಮಾಡಲು ಪ್ರಯತ್ನಿಸಿದರಾದರೂ ನಮಗೆ ನೀರಿಲ್ಲ ಎಂದ ಮೇಲೆ ಬೇರೆಯವರಿಗೇಕೆ ನೀರು ಕೊಡಬೇಕು. ಈ ಹಿಂದೆ ಕಡೂರು ತಾಲೂಕಿಗೆ ನೀರು ತೆಗೆದುಕೊಂಡು ಹೋದಾಗ ಭರವಸೆ ನೀಡಿ ಮೋಸ ಮಾಡಿದ್ದಾರೆ ಈಗ ಪುನಃ ಅದೇ ರೀತಿ ಆಗಲು ಬಿಡುವುದಿಲ್ಲ ನಮಗೆ ನೀರು ಕೊಟ್ಟು ಮುಂದಕ್ಕೆ ತೆಗೆದುಕೊಂಡು ಹೋಗಿ ಎಂದು ಒತ್ತಡ ಹಾಕಿದರು.

ಈ ವೇಳೆ ತರೀಕೆರೆ ಶಾಸಕ ಮಧ್ಯಪ್ರವೇಶಿಸಿ ಎಲ್ಲರಿಗೂ ಏಕಕಾಲಕ್ಕೆ ನೀರು ಕೊಡಲಾಗುತ್ತದೆ ಯಾರು ಗಾಬರಿಗೊಳ್ಳುವುದು ಬೇಡ. ನಾನೇ ಮುಂದು ನಿಂತು ನೀರು ಕೊಡುತ್ತೇನೆ ಈಗ ಕೆಲಸಕ್ಕೆ ತೊಂದರೆ ಕೊಡಬೇಡಿ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ