ಹಂಪಿಯಲಿ ವೈಭವದ ಕೂಗು, ಆದರೆ, ಗತಕಾಲದ ವೈಭವದ ತವರೂರು ಆನೆಗೊಂದಿಯಲ್ಲಿ ಮಾತ್ರ ಆರ್ತನಾದ

KannadaprabhaNewsNetwork |  
Published : Mar 01, 2025, 01:05 AM ISTUpdated : Mar 01, 2025, 02:00 PM IST
The best of Hampi in pics: These ruins tell a thousand tales

ಸಾರಾಂಶ

ಬಹುಮನಿ ಸುಲ್ತಾನರ ದಾಳಿಗೆ ಸಿಕ್ಕು ಕುಮಾರರಾಮನ ಆಳ್ವಿಕೆ ಕೊನೆಗೊಂಡ ಬಹುವರ್ಷಗಳ ಬಳಿಕ ಆನೆಗೊಂದಿಯಲ್ಲಿಯೇ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವೈರಿಗಳ ದಾಳಿಯಿಂದ ರಾಜಧಾನಿಯನ್ನು ಸಂರಕ್ಷಣೆ ಮಾಡಿಕೊಳ್ಳಲು ಆನೆಗೊಂದಿಯಿಂದ ಹಂಪಿಗೆ ವಿಜಯನಗರ ಸಾಮ್ರಾಜ್ಯವನ್ನು ಸ್ಥಳಾಂತರ ಮಾಡಲಾಯಿತು.

ಸೋಮರಡ್ಡಿ ಅಳವಂಡಿ

ಕೊಪ್ಪಳ:  ಹಂಪಿಯಲಿ ವೈಭವದ ಕೂಗು, ಆದರೆ, ಗತಕಾಲದ ವೈಭವದ ತವರೂರು ಆನೆಗೊಂದಿಯಲ್ಲಿ ಮಾತ್ರ ಆರ್ತನಾದ.

ಹೌದು, ವಿಜಯನಗರ ಸಾಮ್ರಾಜ್ಯದ ತೂಗುತೊಟ್ಟಿಲು ಎಂದೇ ಕರೆಯುವ ಆನೆಗೊಂದಿಯನ್ನು ರಾಜ್ಯ ಸರ್ಕಾರ ಮರೆತಂತೆ ಕಾಣುತ್ತಿದೆ. ವಿಜಯನಗರ ಸಾಮ್ರಾಜ್ಯದ ನಂತರದ ರಾಜಧಾನಿ ಹಂಪಿಯಾಗಿದ್ದರೂ ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿ ಆನೆಗೊಂದಿ. ಅಷ್ಟೇ ಯಾಕೆ, ಆನೆಗೊಂದಿಯಲ್ಲಿಯೇ ಹರಿರಾಯರು ಮತ್ತು ಬುಕ್ಕರಾಯರು (ಹಕ್ಕಬುಕ್ಕರು) ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು.

ಬಹುಮನಿ ಸುಲ್ತಾನರ ದಾಳಿಗೆ ಸಿಕ್ಕು ಕುಮಾರರಾಮನ ಆಳ್ವಿಕೆ ಕೊನೆಗೊಂಡ ಬಹುವರ್ಷಗಳ ಬಳಿಕ ಆನೆಗೊಂದಿಯಲ್ಲಿಯೇ ಹಕ್ಕಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವೈರಿಗಳ ದಾಳಿಯಿಂದ ರಾಜಧಾನಿಯನ್ನು ಸಂರಕ್ಷಣೆ ಮಾಡಿಕೊಳ್ಳಲು ಆನೆಗೊಂದಿಯಿಂದ ಹಂಪಿಗೆ ವಿಜಯನಗರ ಸಾಮ್ರಾಜ್ಯವನ್ನು ಸ್ಥಳಾಂತರ ಮಾಡಲಾಯಿತು. ಆದರೂ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯುದ್ದಕ್ಕೂ ಆನೆಗೊಂದಿಯನ್ನು ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತಿತ್ತು ಎನ್ನುವುದಕ್ಕೆ ಆನೆಗೊಂದಿಯಲ್ಲಿರುವ ಸ್ಮಾರಕಗಳೇ ಸಾಕ್ಷಿಯಾಗಿವೆ.

ಇದರ ಜತೆಗೆ ಆನೆಗೊಂದಿಯಲ್ಲಿ ರಾಮಾಯಣ, ಮಹಾರಾಭಾರತದ ಕಾಲದ ಕುರುಹುಗಳು ಇಂದಿಗೂ ಅಚ್ಚಳಿಯದೇ ನಿಂತಿವೆ. ರಾಮನಿಗಾಗಿ ಕಾದ ಶಬರಿಯ ಐತಿಹ್ಯ, ವಾಲಿ ಸುಗ್ರೀವರ ಕಾದಾಟಾದ ಬೆಟ್ಟ. ಹೀಗೆ ಆನೆಗೊಂದಿ ಸುತ್ತಮುತ್ತ ರಾಮಾಯಣದ ಸ್ಮಾರಕಗಳು ಇಂದಿಗೂ ಜನಜನಿತವಾಗಿವೆ.

ಹೀಗೆ ತನ್ನ ಮಡಿಲಲ್ಲಿ ರಾಮಾಯಣ, ಮಹಾಭಾರತ ಸೇರಿದಂತೆ ಕುಮ್ಮಟ ದುರ್ಗದ ಚರಿತ್ರೆ, ವಿಜಯನಗರ ಸಾಮ್ರಾಜ್ಯದ ಚರಿತ್ರೆಯನ್ನು ಇಟ್ಟುಕೊಂಡಿರುವ ಆನೆಗೊಂದಿ ಮಾತ್ರ ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಹಂಪಿ ಉತ್ಸವ ಜೊತೆಯಲ್ಲಿಯೇ ಆನೆಗೊಂದಿ ಉತ್ಸವ ಆಚರಿಸಬೇಕು ಎನ್ನುವ ಕೂಗು ಬಹುವರ್ಷಗಳ ಕಾಲ ಕೇಳಿ ಬಂದಿತ್ತು. ಇದಾದ ಮೇಲೆ ಒಂದು ಬಾರಿ ಆನೆಗೊಂದಿ ಮತ್ತು ಹಂಪಿ ಉತ್ಸವವನ್ನು ಜಂಟಿಯಾಗಿಯೇ ಮಾಡುವ ಪ್ರಯತ್ನ ನಡೆಯಿತಾದರೂ ಕೇವಲ ಒಂದು ವೇದಿಕೆಗೆ ಸೀಮಿತ ಮಾಡಲಾಯಿತು.

ಹಂಪಿ ಮತ್ತು ಆನೆಗೊಂದಿಗೆ ಸಮಾನ ಪ್ರಾಧಾನ್ಯತೆ ಸಿಗುವಂತೆ ಹಂಪಿ ಉತ್ಸವವನ್ನು ಹಂಪಿ, ಆನೆಗೊಂದಿ ಉತ್ಸವ ಎಂದು ನಾಮಕರಣ ಮಾಡಿ, ಅದರಡಿಯಲ್ಲಿಯೇ ಜತೆಯಾಗಿ ಆಚರಿಸಿದರೆ ಮಾತ್ರ ಹಂಪಿಯಷ್ಟೇ ಆನೆಗೊಂದಿಗೂ ಪ್ರಾಧಾನ್ಯತೆ ದೊರೆಯುತ್ತದೆ. ಹಂಪಿಯಲ್ಲಿ ಉತ್ಸವದ ಉದ್ಘಾಟನಾ ಸಮಾರಂಭ ನಡೆದರೆ ಆನೆಗೊಂದಿಯಲ್ಲಿ ಸಮಾರೋಪ ಸಮಾರಂಭ ನಡೆಯಬೇಕು. ಎರಡು ಸಮಾನ ವೇದಿಕೆಯ ಕಾರ್ಯಕ್ರಮಗಳನ್ನು ರೂಪಿಸಿ, ಆಚರಣೆ ಮಾಡಬೇಕು ಎನ್ನುವ ಕೂಗು ಬಹುವರ್ಷಗಳಿಂದ ಇದೆಯಾದರೂ ಸ್ಥಳೀಯ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಆನೆಗೊಂದಿ ಉತ್ಸವ ಆಗೊಮ್ಮೆ, ಈಗೊಮ್ಮೆ ನಡೆಯುತ್ತದೆಯೇ ಹೊರತು ನಿರಂತವಾಗಿ ಹಂಪಿ ಉತ್ಸವದಂತೆ ನಡೆಯುತ್ತಿಲ್ಲ.

ಅಷ್ಟೇ ಅಲ್ಲ, ಅಭಿವೃದ್ಧಿಯ ವಿಷಯದಲ್ಲಿಯೂ ಸಹ ಹಂಪಿಯಲ್ಲಿ ಆಗುವಂತೆ ಆನೆಗೊಂದಿಯಲ್ಲಿ ಆಗುತ್ತಿಲ್ಲ. ಹಂಪಿಯಲ್ಲಿ ಸ್ಮಾರಕಗಳ ರಕ್ಷಣೆಗೆ ನೀಡಿದಷ್ಟು ಆದ್ಯತೆಯನ್ನು ಆನೆಗೊಂದಿಯಲ್ಲಿ ನೀಡುತ್ತಿಲ್ಲ. ಪರಿಣಾಮ ಅನೇಕ ಪೌರಾಣಿಕ ಐತಿಹ್ಯಗಳು ಹಾಗೂ ಐತಿಹಾಸಿಕ ಸ್ಮಾರಕಗಳು ನಶಿಸಿ ಹೋಗುತ್ತಿರುವುದು ಮಾತ್ರ ಇತಿಹಾಸ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.ಆನೆಗೊಂದಿ ಉತ್ಸವ ಆಚರಿಸುವ ಕುರಿತು ಸರ್ಕಾರದ ಹಂತದಲ್ಲಿ ಪ್ರಯತ್ನ ಇದೆ. ರಾಜ್ಯದ ಅಷ್ಟು ಉತ್ಸವಗಳಿಗೂ ವಾರ್ಷಿಕ ದಿನಾಂಕವನ್ನು ನಿಗದಿ ಮಾಡಿ, ನಿರಂತರವಾಗಿ ಮಾಡಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.ಹಂಪಿ, ಆನೆಗೊಂದಿ ಭೌಗೋಳಿಕ, ಪೌರಾಣಿಕ, ಚಾರಿತ್ರಿಕ, ಸಾಂಸ್ಕೃತಿಕವಾಗಿ ಅವಿನಾಭಾವ ಸಂಬಂಧ ಹೊಂದಿವೆ. ವಿಜಯನಗರ ಸಾಮ್ರಾಜ್ಯದ ಮೂಲಸ್ಥಾನ ಆನೆಗೊಂದಿ. ಹಾಗಾಗಿ ಹಂಪಿ ಉತ್ಸವದ ಜತೆ ಆನೆಗೊಂದಿ ಉತ್ಸವವನ್ನು ಮಾಡುವುದು ಔಚಿತ್ಯಪೂರ್ಣ. ಆನೆಗೊಂದಿ ಹೊರತು ಕೇವಲ ಹಂಪಿ ಉತ್ಸವವಾದರೇ ಅದು ಸಾಂಸ್ಕೃತಿಕ ಪ್ರಮಾದವಾಗುತ್ತದೆ ಎಂದು ಗಂಗಾವತಿಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ