‘ಗೋ ಬ್ಯಾಕ್‌ ಹೆಗ್ಡೆ’: ಇದೀಗ ಕಾಂಗ್ರೆಸ್‌ ಸರದಿ

KannadaprabhaNewsNetwork |  
Published : Mar 07, 2024, 01:47 AM IST
ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್‌. | Kannada Prabha

ಸಾರಾಂಶ

ಚಿಕ್ಕಮಗಳೂರು-ಉಡುಪಿ ಕ್ಷೇತ್ರದಲ್ಲಿ ಗೋ ಬ್ಯಾಕ್‌ ಜಯಪ್ರಕಾಶ್‌ ಹೆಗ್ಡೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಯ ಸಂದರ್ಭದಲ್ಲಿ ಗೋ ಬ್ಯಾಕ್‌ ಕೂಗು ಕೇಳಿ ಬರುತ್ತಿದೆ. 2019ರಲ್ಲಿ ಕ್ಷೇತ್ರದಲ್ಲಿ ಜನ್ಮ ತಾಳಿದ ಈ ಕೂಗು, ಈ ಬಾರಿಯೂ ಕೂಡ ಪ್ರತಿಧ್ವನಿಯಾಗಿ ಕೇಳಿ ಬರುತ್ತಿದೆ.

ಕಳೆದ ಒಂದು ತಿಂಗಳಿಂದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅವರದೇ ಪಕ್ಷದವರು ಗೋ ಬ್ಯಾಕ್‌ ಶೋಭಾ ಎಂಬ ಘೋಷಣೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದಾರೆ.

ಈಗ ‘ಗೋ ಬ್ಯಾಕ್‌’ ಘೋಷಣೆಯನ್ನು ಕಾಂಗ್ರೆಸ್‌ ಆರಂಭಿಸಿದೆ. ಗೋ ಬ್ಯಾಕ್‌ ಜಯಪ್ರಕಾಶ್‌ ಹೆಗ್ಡೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದೆ. ಸದ್ಯ ಹೆಗ್ಡೆಯವರು ಕಾಂಗ್ರೆಸ್‌ ಪಕ್ಷದ ಸದಸ್ಯರಲ್ಲ, ಆದರೂ ಕೂಡ ಪಕ್ಷದ ಚಿಹ್ನೆಯ ಹೆಸರನ್ನು ಬಳಕೆ ಮಾಡಿಕೊಂಡು ಅವರ ವಿರುದ್ಧ ಪೋಸ್ಟ್‌ ಮಾಡಲಾಗಿದೆ. ಕಷ್ಟ ಕಾಲದಲ್ಲಿ ಕೈ ಕೊಟ್ಟವರು ಈಗ ಬೇಡ, ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್‌ ಕೊಡಿ ಎಂದು ಸಹ ಉಲ್ಲೇಖಿಸಿದ್ದಾರೆ.

ಹೆಗ್ಡೆಯವರು ಶೀಘ್ರವೇ ಕಾಂಗ್ರೆಸ್‌ ಸೇರಲಿದ್ದು, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್‌ ನೀಡಲು ಸ್ಥಳೀಯರ ವಿರೋಧವಿದ್ದು, ಅವರ ವಿರುದ್ಧ ಗೋ ಬ್ಯಾಕ್‌ ಅಭಿಯಾನ ಆರಂಭವಾಗಿದೆ ಎನ್ನಲಾಗುತ್ತಿದೆ.

ಈ ಮಧ್ಯೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಅವರಿಗೆ ಪಕ್ಷದ ಟಿಕೆಟ್ ನೀಡಬೇಕೆಂದು ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಟಿಕೆಟ್ ನೀಡಲು ಒತ್ತಾಯಿಸಿದ್ದೇವೆ. ರಾಜ್ಯದಿಂದ ದೆಹಲಿಗೆ ಕಳುಹಿಸಿರುವ ಪಟ್ಟಿಯಲ್ಲಿ ಡಾ.ಕೆ.ಪಿ.ಅಂಶುಮಂತ್ ಹೆಸರು ಸೇರಿರುವುದು ಸ್ವಾಗತಾರ್ಹ ಎಂದಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ