ದೇವರ ಸಮುದ್ರ ಸ್ನಾನ, ಪಲ್ಲಕ್ಕಿ ಉತ್ಸವ ಸಂಪನ್ನ

KannadaprabhaNewsNetwork | Published : Mar 11, 2024 1:15 AM

ಸಾರಾಂಶ

ಜಾತ್ರೆಗೆ ಬಂದಂತಹ ಭಕ್ತರು ಸಮುದ್ರ ಸ್ನಾನ ಮಾಡಿ ಪಲ್ಲಕ್ಕಿಯಲ್ಲಿನ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿ ಆಚರಣೆ ಸಂಪನ್ನ

ಕಾರವಾರ: ತಾಲೂಕಿನ ಮಾಜಾಳಿಯ ಕಡಲ ತೀರದಲ್ಲಿ ಏಳು ದೇವರುಗಳ ಸಮುದ್ರ ಸ್ನಾನ, ಪಲ್ಲಕ್ಕಿ ಉತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಶಿವರಾತ್ರಿಯ ಮಾರನೇ ದಿನ ಅಥವಾ ಶಿವರಾತ್ರಿ ನಂತರ ಬರುವ ಅಮವಾಸ್ಯೆಯ ದಿನ ತಾಲೂಕಿನ ಗಾಂವಗೇರಿಯ ರಾಮನಾಥ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಪ್ರಸಕ್ತ ವರ್ಷ ಭಾನುವಾರ ಜಾತ್ರಾಮಹೋತ್ಸವ ನಡೆದಿದ್ದು, ಅಸ್ನೋಟಿ,ಮಾಜಾಳಿ, ಕೃಷ್ಣಾಪುರ, ಚಿತ್ತಾಕುಲ, ಮುಡಗೇರಿ, ಹೊಸಳ್ಳಿ ಒಳಗೊಂಡು ಏಳು ಗ್ರಾಮಗಳಿಂದ ಬೇರೆ ಬೇರೆ ದೇವರುಗಳನ್ನು ಪಲ್ಲಕ್ಕಿಯಲ್ಲಿ ಕಡಲತೀರಕ್ಕೆ ತಂದು ಬಳಿಕ ಪಲ್ಲಕ್ಕಿಯಲ್ಲಿನ ದೇವರನ್ನು ಸಮುದ್ರದಲ್ಲಿ ಸ್ನಾನ ಮಾಡಿಸಲಾಯಿತು. ನಂತರ ದರ್ಶನಕ್ಕೆ ಇರಿಸಲಾಯಿತು. ಜಾತ್ರೆಗೆ ಬಂದಂತಹ ಭಕ್ತರು ಸಮುದ್ರ ಸ್ನಾನ ಮಾಡಿ ಪಲ್ಲಕ್ಕಿಯಲ್ಲಿನ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿ ಆಚರಣೆ ಸಂಪನ್ನವಾಯಿತು.

ಮಹಾದೇವ, ಹರ್ ಹರ್ ಮಹಾದೇವ ಎಂದು ಘೋಷಣೆ ಕೂಗುತ್ತಾ ಕಡಲತೀರಕ್ಕೆ ಪಲ್ಲಕ್ಕಿಗಳನ್ನು ಹೊತ್ತು ತರಲಾಗುತ್ತದೆ. ಕಡಲತೀರದ ಮರಳಿನಲ್ಲಿಯೇ ಶಿವಲಿಂಗ ನಿರ್ಮಿಸಿ ಪೂಜೆ ಕೂಡಾ ಭಕ್ತರು ಮಾಡುತ್ತಾರೆ. ಶಿವರಾತ್ರಿಯ ದಿನದಂದು ಉಪವಾಸ ಮಾಡಿ ಮಾರನೆ ದಿನ ಸಮುದ್ರ ಸ್ನಾನ ಮಾಡುವ ಮೂಲಕ ಉಪವಾಸ ಬಿಡುವುದು ಸಹ ಈ ಜಾತ್ರೆಯ ವಿಶೇಷವಾಗಿದೆ. ಅಲ್ಲದೆ ಸಮುದ್ರ ಸ್ನಾನಗಳಿಂದ ಪಾಪಗಳು ತೊಳೆದು, ರೋಗ ರುಜಿನಗಳು ದೂರಾಗುತ್ತವೆ ಎನ್ನುವ ನಂಬಿಕೆ ಕೂಡಾ ಭಕ್ತರದಲ್ಲಿದೆ. ಇದೇ ವೇಳೆ ಮೃತರಾದ ಹಿರಿಯರಿಗೆ ಕಡಲತೀರದಲ್ಲಿ ಪಿಂಡ ಪ್ರದಾನ ಮಾಡಲಾಗುತ್ತದೆ. ಸಮುದ್ರ ಸ್ನಾನ ಮಾಡಿ ವಾಪಸ್ ತೆರಳುವ ವೇಳೆ ರಸ್ತೆ ಬದಿಯಲ್ಲಿ ಹಾಕಲಾಗುವ ಬಟ್ಟೆಯ ಮೇಲೆ ಪಡಿ (ಅಕ್ಕಿ) ಹಾಕಲಾಗುತ್ತದೆ. ಇದರಿಂದ ಹಿರಿಯರಿಗೆ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲಿನವರದ್ದಾಗಿದೆ.

ರಾಮನಾಥ ದೇವರ ಜಾತ್ರಾ ಮಹೋತ್ಸವಕ್ಕೆ ನೆರೆಯ ರಾಜ್ಯ ಗೋವಾ, ಮಹಾರಾಷ್ಟ್ರ ಒಳಗೊಂಡು ವಿವಿಧ ಭಾಗಗಳಿಂದ ಕೂಡಾ ಭಕ್ತರು ಆಗಮಿಸುತ್ತಾರೆ. ಈ ಬಾರಿ ಭಕ್ತರ ಸಂಖ್ಯೆ ಹಿಂದಿದ ವರ್ಷಕ್ಕಿಂತ ಅಧಿಕವಾಗಿತ್ತು.

Share this article